ಅಪ್ತಾಪ್ತೆಗೆ ಮುತ್ತು ಕೊಟ್ಟವನಿಗೆ 3 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?
ಪ್ರೀತಿಸುತ್ತೇನೆಂದು ಹೇಳಿ ಅಪ್ರಾಪ್ತೆಯನ್ನು ಎಳೆದೊಯ್ದು ಮುತ್ತಿಟ್ಟ ಪ್ರಕರಣದಲ್ಲಿ ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕನಿಗೆ ಲೈಂಗಿಕ ದೌರ್ಜನ್ಯ ಅಪರಾಧದಡಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
- ವೆಂಕಟೇಶ್ ಕಲಿಪಿ
ಬೆಂಗಳೂರು (ಫೆ.19) : ಪ್ರೀತಿಸುತ್ತೇನೆಂದು ಹೇಳಿ ಅಪ್ರಾಪ್ತೆಯನ್ನು ಎಳೆದೊಯ್ದು ಮುತ್ತಿಟ್ಟ ಪ್ರಕರಣದಲ್ಲಿ ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕನಿಗೆ ಲೈಂಗಿಕ ದೌರ್ಜನ್ಯ ಅಪರಾಧದಡಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಪ್ರತಾಪ್ (28) ಶಿಕ್ಷೆಗೆ ಒಳಗಾದವ. ಪ್ರತಾಪ್‌ನನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಚಿಕ್ಕಮಗಳೂರು ಬಾಲೂರು ಠಾಣಾ ಪೊಲೀಸರು) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಿಎಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಸಂಸದ ಅನಂತಕುಮಾರ ಹೆಗ್ಡೆಗೆ ತಾತ್ಕಾಲಿಕ ರಿಲೀಫ್!
ಅಲ್ಲದೆ, ಘಟನೆ ನಡೆದಾಗ ಪ್ರತಾಪ್‌ಗೆ 18 ವರ್ಷವಿದ್ದು, ಪ್ರೊಬೆಷನ್ ಆಫ್ ಅಫೆಂಡರ್ಸ್ ಆಕ್ಟ್ ಅಡಿಯ ಲಾಭ ಕಲ್ಪಿಸಿ ಆತನನ್ನು ಬಿಡುಗಡೆ ಮಾಡಬೇಕು ಎಂಬ ಮನವಿಯನ್ನು ಸಹ ತಿರಸ್ಕರಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) 2012ರ ಜೂ.20ರಿಂದ ಜಾರಿಗೆ ಬಂದಿದೆ. ಇದೊಂದು ಕಾಯ್ದೆ ವಿಶೇಷ ಶಾಸನ. ಪ್ರೊಬೆಷನ್ ಆಫ್ ಅಫೆಂಡರ್ಸ್ ಆಕ್ಟ್ ಕಾಯ್ದೆಯಡಿ ಲಾಭವನ್ನು ಪೋಕ್ಸೋ ಕಾಯ್ದೆಯಡಿಯ ಅಪರಾಧಗಳಿಗೆ ನೀಡಲಾಗದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೇನು?
2014ರ ಅ.26ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ರಾಪ್ತೆಯನ್ನು (ಸಂತ್ರಸ್ತೆ) ಹಿಡಿದುಕೊಂಡಿದ್ದ ಪ್ರತಾಪ್, ಪಕ್ಕದ ಶಿಥಿಲಾವಸ್ಥೆಯ ಶೌಚಾಲಯಕ್ಕೆ ಎಳೆದೊಯ್ದಿದ್ದ. ನಾನು ನಿನ್ನ ಪ್ರೀತಿಸುತ್ತಿದ್ದು; ನೀನೂ ನನ್ನ ಪ್ರೀತಿಸುತ್ತಿದ್ದೀಯಾ ಎಂದು ಪ್ರಶ್ನಿಸಿ, ಸಂತ್ರಸ್ತೆಯನ್ನು ಕಳೆಗೆ ಕೆಡೆವಿ, ಕೆನ್ನೆ ಹಾಗೂ ಕತ್ತಿನ ಭಾಗಕ್ಕೆ ಮುತ್ತಿಟ್ಟಿದ್ದ. ಎದೆ ಭಾಗವನ್ನು ಸ್ಪರ್ಶಿಸಿ, ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಆತನ ಕೈಗಳಿಂದ ತಪ್ಪಿಸಿಕೊಂಡಿದ್ದ ಸಂತ್ರಸ್ತೆ ಮನೆಗೆ ಸೇರಿದ್ದಳು. ಆಕೆಯ ತಂದೆ ಚಿಕ್ಕಮಗಳೂರಿನ ಬಾಲೂರು ಠಾಣೆಗೆ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು, ಪೋಕ್ಸೋ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್ 357 (ಆಕ್ರಮಣ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ, ತಂದೆ ಮತ್ತು ತಾಯಿಯ ಸಾಕ್ಷ್ಯ ಪರಸ್ಪರ ತದ್ವಿರುದ್ಧವಾಗಿದೆ. ಘಟನೆ ಭಾನುವಾರ ನಡೆದಿದೆ. ಘಟನಾ ಸ್ಥಳದ ಪಕ್ಕದಲ್ಲೇ ಕಾರ್ಮಿಕರ ಮನೆಗಳಲ್ಲಿದ್ದವು. ಸಂತ್ರಸ್ತೆಯ ಕಿರುಚಾಟ ಕೇಳಿ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಹಾಗಾಗಿ, ಸಂತ್ರಸ್ತೆಯ ಸಾಕ್ಷ್ಯ ನಂಬಲಾರ್ಹವಾಗಿಲ್ಲ ಎಂದು ತೀರ್ಮಾನಿಸಿದ್ದ ಚಿಕ್ಕಮಗಳೂರು ಪೋಕ್ಸೋ ವಿಶೇಷ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ 2017ರ ಜ.30ರಂದು ಆದೇಶಿಸಿತ್ತು. ಇದರಿಂದ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.
ಪೊಲೀಸರ ಪರ ಸರ್ಕಾರಿ ವಕೀಲೆ ಕೆ.ಪಿ. ಯಶೋಧಾ, ಸಂತ್ರಸ್ತೆ ಹಾಗೂ ಅವರ ತಂದೆ ಸೇರಿದಂತೆ ಇತರೆ ಎಲ್ಲಾ ಸಾಕ್ಷಿಗಳಿಂದ ಆರೋಪಿ ಕೃತ್ಯ ಎಸಗಿರುವುದು ಸಾಬೀತಾಗುತ್ತದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ದಾಖಲಿಸಿದ್ದ ಪ್ರಮಾಣಿಕೃತ ಹೇಳಿಕೆಯಲ್ಲಿ ತನ್ನ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತೆ ಸ್ಪಷ್ಟವಾಗಿ ನುಡಿದಿದ್ದಾಳೆ. ಅದು ಸ್ಥಿರವಾಗಿದ್ದು, ನಿರ್ಲಕ್ಷಿಸಲಾಗದು. ಮಹಜರು ಪ್ರಕಾಋ ಘಟನಾ ಸ್ಥಳದ ಸಮೀಪ ಯಾವುದೇ ಮನೆಗಳಿರಲಿಲ್ಲ. ಸ್ವಲ್ಪ ದೂರಲ್ಲಿದ್ದು, ಸಂತ್ರಸ್ತೆ ಕಿರುಚಿದರೂ ಯಾರಿಗೂ ಕೇಳಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಪ್ರತಾಪ್‌ನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಕೋರಿದರು
'ಮಾರುವೇಷದಲ್ಲಿ ಒಮ್ಮೆ ಬಿಡಿಎಗೆ ಹೋಗಿಬನ್ನಿ, ' ಸುಗ್ರೀವಾಜ್ಞೆ ಮೂಲಕ ಪ್ರಾಧಿಕಾರ ಮುಚ್ಚುವುದು ಲೇಸು: ಹೈಕೋರ್ಟ್
ಈ ವಾದವನ್ನು ಅಲ್ಲಗೆಳೆದ ಪ್ರತಾಪ್ ಪರ ವಕೀಲರು, ಅಧೀನ ನ್ಯಾಯಾಲಯದ ತೀರ್ಪನ್ನು ಕಾಯಂಗೊಳಿಸುವಂತೆ ಕೋರಿದ್ದರು.
ಪ್ರಕರಣದ ಎಲ್ಲಾ ಸಾಕ್ಷ್ಯ ಹಾಗೂ ದಾಖಲೆ ಪರಿಶೀಲಿಸಿದ ಹೈಕೋರ್ಟ್, ಆರೋಪಿ ಸಂತ್ರಸ್ತೆಯನ್ನು ಕೆಡವಿ ಮುತ್ತಿಟ್ಟ ಕೂಡಲೇ ಆಕೆ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ಈ ಕುರಿತ ಆಕೆಯ ಸಾಕ್ಷ್ಯ ನಂಬಲಾರ್ಹವಾಗಿದೆ. ಸಂತ್ರಸ್ತೆ ಹಾಗೂ ಇತರೆ ಸಾಕ್ಷ್ಯಗಳ ಹೇಳಿಕೆಯಿಂದ ಅಪ್ರಾಪ್ತೆಗೆ ಆರೋಪಿಯು ಲೈಂಗಿಕ ಕಿರುಕುಳ ನೀಡಿರುವುದು ಸ್ಪಷ್ಟವಾಗುತ್ತದೆ. ಘಟನಾ ಸ್ಥಳಕ್ಕೆ ಧಾವಿಸಿ ಸಂತ್ರಸ್ತೆ ಯಾರೊಬ್ಬರೂ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಇಡೀ ಘಟನೆಯೇ ನಡೆದಿಲ್ಲ ಎಂದು ಭಾವಿಸಲಾಗದು. ಮಹಜರು ಪ್ರಕಾರ ಘಟನಾ ಸ್ಥಳದ ಸಮೀಪ ಯಾವುದೇ ಮನೆಗಳಿರಲಿಲ್ಲ. ಆದ್ದರಿಂದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಲಿದೆ ಎಂದು ತೀರ್ಮಾನಿಸಿ, ಪ್ರತಾಪ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.