ಸಿದ್ದು ಬಗ್ಗೆ 27 ಲೇಖಕರು ವಿಮರ್ಶೆ ಮಾಡಿರುವ ಬೃಹತ್‌ ಕೃತಿ ಜು.23ಕ್ಕೆ ರಿಲೀಸ್

  • ಸಿದ್ದು ಬಗ್ಗೆ 450 ಪುಟಗಳ ಬೃಹತ್‌ ಕೃತಿ ಸಿದ್ಧ
  • 23ಕ್ಕೆ ಮೈಸೂರಿನಲ್ಲಿ ಖರ್ಗೆ ಲೋಕಾರ್ಪಣೆ
  • 27 ಲೇಖಕರಿಂದ ಸಿದ್ದು ಆಡಳಿತದ ವಿಮರ್ಶೆ ಇರುವ ಪುಸ್ತಕ
Mallikarjun Kharge to release siddaramaiah's biography gow

ಬೆಂಗಳೂರು (ಜು.9): ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಆಡಳಿತದ ಕುರಿತ 450 ಪುಟಗಳ ಬೃಹತ್‌ ಕೃತಿ ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ.

ಸಾಹಿತಿ ಕಾ.ತ. ಚಿಕ್ಕಣ್ಣ ಹಾಗೂ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಂಪಾದಿಸಿರುವ ‘ಸಿದ್ದರಾಮಯ್ಯ ಆಡಳಿತ/ನೀತಿ ನಿರ್ಧಾರ’ ಎಂಬ ಕೃತಿ ಮೈಸೂರಿನಲ್ಲಿ ಜು.23ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ತಾತ್ವಿಕ ವಿವೇಚನೆ ಎಂಬ ಅಡಿ ಬರಹ ಹೊಂದಿರುವ ಈ ಬೃಹತ್‌ ಸಂಪುಟದಲ್ಲಿ 27 ಮಂದಿ ಖ್ಯಾತ ಲೇಖಕರು ಸಿದ್ದರಾಮಯ್ಯ ಅವರ ಆಡಳಿತ ಹಾಗೂ ಪರಿಣಾಮದ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ರೂಪಿಸಿದ್ದ ಯೋಜನೆಗಳಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಹಾಗೂ ವಿಮರ್ಶಾತ್ಮಕ ಲೇಖನಗಳು ಇರಲಿವೆ ಎಂದು ಕೃತಿ ಸಂಪಾದಿಸಿರುವ ಸಾಹಿತಿ ಕಾ.ತ. ಚಿಕ್ಕಣ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಿದ್ದರಾಮೋತ್ಸವ ಮಾಡಲು ಹೊರಟಿರುವುದು ಕಾಂಗ್ರೆಸ್‌ನ ಶಿಖಂಡಿತನ: KS Eshwarappa

ಮೈಸೂರಿನಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಮೈಸೂರು ಶಾಖಾ ಪೀಠದ ಶಿವಾನಂದಪುರಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯ ಅವರ ಜತೆಗೆ ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ, ಬಿ.ಎಲ್‌. ಶಂಕರ್‌, ಅಕ್ಕ ಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.

ಅಂಕಣಕಾರ ಎ. ನಾರಾಯಣ, ಸಾಹಿತಿ ಹಿ.ಶಿ. ರಾಮಚಂದ್ರೇಗೌಡ, ಅರವಿಂದ ಮಾಲಗತ್ತಿ, ಪ್ರೊ. ಜಾಫಟ್‌, ಡಾ. ಜಯಪ್ರಕಾಶ್‌ ಶೆಟ್ಟಿ, ಪುರುಷೋತ್ತಮ ಬಿಳಿಮಲೆ, ವಿಮರ್ಶಕ ಡಾ. ರಂಗನಾಥ್‌ ಕಂಟನಕುಂಟೆ, ಲಕ್ಷ್ಮಣ ಕೊಡಸೆ, ಡಿ.ಆರ್‌. ದೇವರಾಜ್‌ ಸೇರಿದಂತೆ ಹಲವರ ಲೇಖನಗಳನ್ನು ಆ ಸಂಪುಟ ಹೊಂದಿದೆ.

'ಇದು ನನ್ನ ಕೊನೆಯ ಚುನಾವಣೆ, 80 ದಾಟಿದ ಮೇಲೆ ಕೋಲು ಹಿಡಿದು ರಾಜಕೀಯ ಮಾಡೋಕಾಗಲ್ಲ'

ಸಮಕಾಲೀನ ಸಂವೇದನೆ ಸಂವಾದ: ಜು.23ರಂದು ಶನಿವಾರ ಬೆಳಗ್ಗೆ ಪುಸ್ತಕ ಬಿಡುಗಡೆ ಮುಗಿದ ಬಳಿಕ ಮಧ್ಯಾಹ್ನ ‘ಸಮಕಾಲೀನ ಸಂವೇದನೆ’ ಎಂಬ ಸಂವಾದ ನಡೆಯಲಿದೆ. ಈ ವೇಳೆ 70 ಮಂದಿ ಲೇಖಕರು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಸಮಕಾಲೀನ ಕಾಲಘಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಸಮಾಜದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಸಂವಾದದಲ್ಲಿ ಚರ್ಚೆಯಾಗಲಿದೆ ಎಂದು ಕಾ.ತ. ಚಿಕ್ಕಣ್ಣ ತಿಳಿಸಿದರು.

ಒಳಗೂಡಿಸಿಕೊಳ್ಳುವಲ್ಲಿ ಯಶಸ್ವಿ: ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸುವ ಮೂಲಕ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಬಣದ ನಾಯಕರೂ ಸಹ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಇದೀಗ ಪುಸ್ತಕ ಬಿಡುಗಡೆಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸುವ ಮೂಲಕ ಎಲ್ಲರನ್ನೂ ಒಳಗೂಡಿಸಿಕೊಂಡು ಕಾರ್ಯಕ್ರಮ ನಡೆಸುವಲ್ಲಿ ಸಿದ್ದರಾಮಯ್ಯ ಹಾಗೂ ಅವರ ತಂಡ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

Latest Videos
Follow Us:
Download App:
  • android
  • ios