* ಅರ್ಹತೆಗೆ ತಕ್ಕಂತೆ ಹುದ್ದೆ ನೀಡಬೇಕು* ಬಿಎಸ್‌ವೈ ಬದಲಾವಣೆ ಬಿಜೆಪಿ ಆಂತರಿಕ ವಿಷಯ* ಧರ್ಮವೇ ಬೇರೆ, ರಾಜಕೀಯವೇ ಬೇರೆ 

ಬೆಂಗಳೂರು(ಜು.26): ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಬೇಕು ಎಂಬುದು ಅವರ ಆಂತರಿಕ ವಿಚಾರ. ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಕೊಡಿ ಎಂದು ಭಿಕ್ಷೆ ಬೇಡಲು ಆಗುವುದಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಮಾಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ನಡೆಯುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಅಥವಾ ಬೇರೆಯವರಿಗೆ ನೀಡಿ ಎಂದು ಭಿಕ್ಷೆ ಬೇಡುವುದಕ್ಕೆ ಆಗುವುದಿಲ್ಲ. ಅರ್ಹತೆಗೆ ತಕ್ಕಂತೆ ಸ್ಥಾನಮಾನ ಸಿಗಬೇಕು. ಅದು ಬೇಡುವುದಲ್ಲ. ಬಿಜೆಪಿಯಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವುದು ಅಥವಾ ಬಿಡುವುದು ಬಿಜೆಪಿಯ ಪಕ್ಷದ ಆಂತರಿಕ ವಿಚಾರ. ನಾನು ಅವರ ಪಕ್ಷದ ಬಗ್ಗೆ ಸೀಮಿತವಾಗಿ ಮಾತನಾಡುವುದಿಲ್ಲ ಎಂದರು.

ತಾಕತ್ತಿದ್ದರೆ ಖರ್ಗೆ, ಪರಮೇಶ್ವರ್ ಸಿಎಂ ಮಾಡಿ

ರಾಜ್ಯದಲ್ಲಿ ಈಗಾಗಲೇ ಹೆಚ್ಚಿನ ಮಳೆಯಿಂದಾಗಿ ಜನರು ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಪರಿಹಾರ ಕಲ್ಪಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಆದರೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಠಾಧೀಶರು ಯೋಚಿಸಬೇಕು:

ಯಡಿಯೂರಪ್ಪ ಪರ ಮಠಾಧೀಶರ ಸಭೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ನಾನು ಮಠಾಧೀಶರ ಕುರಿತು ಟೀಕೆ ಮಾಡುವುದು. ಧರ್ಮವೇ ಬೇರೆ, ರಾಜಕೀಯವೇ ಬೇರೆ. ಒಂದು ರಾಜಕೀಯ ಪಕ್ಷದಲ್ಲಿ ಒಂದೇ ಧರ್ಮದ ಜನರು ಇರುವುದಿಲ್ಲ. ಒಂದು ಜಾತಿ, ಧರ್ಮದ ನಾಯಕರು ಹಲವು ಪಕ್ಷಗಳಲ್ಲಿ ಇರುತ್ತಾರೆ. ಅದೇ ರೀತಿ ಸಮುದಾಯದ ಜನರು ಸಹ ಹಲವು ಪಕ್ಷಗಳಲ್ಲಿ ಇರುತ್ತಾರೆ. ಕಮ್ಯುನಿಸ್ಟ್‌, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಹೀಗಾಗಿ ಮಠಾಧೀಶರು ಯೋಚಿಸಬೇಕು ಎಂದು ಸೂಚ್ಯವಾಗಿ ತಿಳಿಸಿದರು.