ದಲಿತ ಮುಖ್ಯಮಂತ್ರಿ ಬಗೆಗಿನ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ ತಾರಕ್ಕೇರಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ರಿಂದ ಕಾಂಗ್ರೆಸ್‌ಗೆ ಸವಾಲ್‌

ಚಿತ್ರದುರ್ಗ (ಜು.25): ದಲಿತ ಮುಖ್ಯಮಂತ್ರಿ ಬಗೆಗಿನ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ ತಾರಕ್ಕೇರಿದೆ. ದಲಿತರನ್ನು ಸಿಎಂ ಮಾಡಿ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸವಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ನಿಮಗೆ ತಾಕತ್‌ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ.ಪರಮೇಶ್ವರ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಿ ಎಂದು ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಟೀಲ್‌, ಕಾಂಗ್ರೆಸ್‌ನಿಂದ ದಲಿತ ಸಮುದಾಯಕ್ಕೆ ಹೆಚ್ಚು ಅನ್ಯಾಯವಾಗಿದೆ. ಸಂವಿಧಾನ ಶಿಲ್ಪಿ ಡಾ

ಬಿ.ಆರ್‌.ಅಂಬೇಡ್ಕರ್‌ಗೂ ಅವಮಾನ ಮಾಡಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಅಧಿಕಾರ ನಡೆಸಿದ ಕಾಂಗ್ರೆಸ್‌ ಪ್ರತಿ ಹಂತದಲ್ಲೂ ದಲಿತರನ್ನು ತುಳಿಯುವ ಕೆಲಸ ಮಾಡಿದೆ. ನಿಮಗೆ ತಾಕತ್‌ ಇದ್ದರೆ ಮಲ್ಲಿಕಾರ್ಜುನ್‌ ಖರ್ಗೆ ಅಥವಾ ಡಾ.ಜಿ.ಪರಮೇಶ್ವರ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಿ. ಜತೆಗೆ ನಿಮ್ಮ ಸರ್ಕಾರದ ಐದು ವರ್ಷದ ಸಾಧನೆಯನ್ನು ಜನತೆ ಮುಂದಿಡಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಬಿಜೆಪಿ ಈಗ ದಲಿತರನ್ನು ಸಿಎಂ ಮಾಡಲಿ : ಸಿದ್ದರಾಮಯ್ಯ ಸವಾಲ್

ಜೆಡಿಎಸ್‌ನಲ್ಲಿ ಬುಕ್‌ ಹಿಡಿದು ಕಲಿತು ಬಂದ ಸಿದ್ದರಾಮಣ್ಣ ಅವರಿಗೆ ಕಾಂಗ್ರೆಸ್‌ ಇತಿಹಾಸ ಗೊತ್ತಿದ್ದರೆ ಇಷ್ಟೆಲ್ಲ ಮಾತನಾಡುತ್ತಿರಲಿಲ್ಲ. ಸಿಎಂ ಆಗಲೆಂದೇ ಅವರ ಗುರುಗಳಿಗೆ ಕೈ ಕೊಟ್ಟು ಕಾಂಗ್ರೆಸ್‌ಗೆ ಬಂದರು. ಆದೇ ಕಾರಣಕ್ಕೆ ಪರಮೇಶ್ವರ್‌, ಖರ್ಗೆ ಅವರನ್ನು ಸೋಲಿಸಿದರು ಎಂದು ದೂರಿದರು.

ಬಿಎಸ್‌ವೈಗೆ ಕಟೀಲ್‌ ಹೊಗಳಿಕೆ ಮಳೆ

 ಕೋವಿಡ್‌ ಕಾರಣಕ್ಕೆ ವರ್ಚುಯಲ್‌ನಲ್ಲಿ ನಡೆಸುತ್ತಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಆರು ತಿಂಗಳ ಬಳಿಕ ಕೋಟೆನಾಡು ಚಿತ್ರದುರ್ಗದಲ್ಲಿ ಭವ್ಯವಾಗಿ ನಡೆಸಲಾಯಿತು.

ಪ್ರತಿ ತಿಂಗಳು ಬೆಂಗಳೂರಿನಲ್ಲಿ ಏರ್ಪಡಿಸುತ್ತಿದ್ದ ಸಭೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಿದ ಫಲವಾಗಿ ಚಿತ್ರದುರ್ಗದ ಇಂಡಿಯನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಭೆ ಯಶ್ವಸಿಯಾಗಿ ನಡೆಯಿತು. ಗುರುಪೂರ್ಣಿಮೆ ಅಂಗವಾಗಿ ಅಂರ್ತಜಲ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಯೋಗ ಸಾಧಕರನ್ನು ಸನ್ಮಾನಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮಾರಂಭ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತವನ್ನು ಪ್ರಶಂಸಿದರು. ರಾಜ್ಯದಲ್ಲಿ ಸರ್ಕಾರ ನಡೆಸಿದ ಕಾಂಗ್ರೆಸ್‌ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಅನುದಾನ ಬಿಡುಗಡೆ ಬಗ್ಗೆ ಪತ್ರವನ್ನು ಬಿಡುಗಡೆಗೊಳಿಸಲಿ. ನಾವು ಸಹ ಎರಡು ವರ್ಷದ ಕಾರ್ಯಗಳನ್ನು ನೀಡುತ್ತೇವೆ. ಈ ಎರಡಕ್ಕೂ ತಾಳೆ ಹಾಕಿದರೆ ಯಾರದು ಹೆಚ್ಚಿನ ಸಾಧನೆ ಎಂದು ಜನತೆಗೆ ತಿಳಿಯುತ್ತದೆ ಎಂದು ಸವಾಲು ಹಾಕಿದರು.