ಕಂದಾಯ ಗ್ರಾಮ ಪಟ್ಟಿಯಿಂದ ಬಿಟ್ಟು ಹೋಗಿರುವ ಹಾಡಿ, ತಾಂಡಾ, ಹಟ್ಟಿ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು (ಜೂ.7) : ಕಣ್ತಪ್ಪಿನಿಂದ ಕಂದಾಯ ಗ್ರಾಮ ಪಟ್ಟಿಯಿಂದ ಬಿಟ್ಟು ಹೋಗಿರುವ ಹಾಡಿ, ತಾಂಡಾ, ಹಟ್ಟಿ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ ಶೀಘ್ರದಲ್ಲಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇರಗೌಡ ಸೂಚಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಕೃಷ್ಣ ಬೈರೇಗೌಡ, ಕಂದಾಯ ಗ್ರಾಮದ ಸೌಲಭ್ಯ ಪಡೆಯಲು ಅರ್ಹವಿರುವ ಹಾಡಿ, ತಾಂಡಾ, ಹಟ್ಟಿ, ಗೊಲ್ಲರ ಹಟ್ಟಿಗಳನ್ನು ಗುರುತಿಸುವಲ್ಲಿ ಅಧಿಕಾರಿಗಳು ತೋರುತ್ತಿರುವ ಅಸಡ್ಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಗ್ರಾಮಗಳ ಘೋಷಣೆ ಬಡವರ ಕೆಲಸವಾಗಿದ್ದು, ಅದರ ಬಗ್ಗೆ ಅಸಡ್ಡೆ ತೋರುವುದು ಸರಿಯಲ್ಲ. ಈ ಕೂಡಲೇ ಹಾಡಿ, ತಾಂಡಾ, ಹಟ್ಟಿ, ಗೊಲ್ಲರ ಹಟ್ಟಿಗಳನ್ನು ಗುರುತಿಸಿ ಕಂದಾಯ ಗ್ರಾಮ ಸ್ಥಾನಮಾನ ನೀಡಿ ಅಧಿಸೂಚನೆ ಪ್ರಕಟಿಸಬೇಕು. ಜತೆಗೆ ನಿಯಮದಂತೆ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.

ಶಾಸಕರ ಮಾತಿನ ದಾಳಿಗೆ ತುತ್ತಾಗ್ತಿದ್ದೇನೆ:

ಹಾಡಿ, ಹಟ್ಟಿ, ತಾಂಡಾಗಳು ಗ್ರಾಮದ ಜತೆ ಹೊಂದಿಕೊಂಡಿದ್ದರೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು 2016ರಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅದಾದ ನಂತರ 2017 ಮತ್ತು 2019ರಲ್ಲಿ ಹೊಸ ಸುತ್ತೋಲೆ ಪ್ರಕಟಿಸಿ, ಗ್ರಾಮದ ಜತೆ ಹೊಂದಿಕೊಂಡಿದ್ದರೂ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ. ಆದರೆ, ಅಧಿಕಾರಿಗಳು ಅದನ್ನು ಪರಿಗಣಿಸುತ್ತಿಲ್ಲ. ಅಧಿಕಾರಿಗಳು ಮಾಡುವ ತಪ್ಪಿಗೆ ನಾನು ಸದನದಲ್ಲಿ ಬಂಜಾರ ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಶಾಸಕರ ಮಾತಿನ ದಾಳಿಗೆ ತುತ್ತಾಗಬೇಕಿದೆ ಎಂದು ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವರ್ಷದಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ:

ಕಳೆದ ತಿಂಗಳು ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.11 ಲಕ್ಷ ಹಾಡಿ, ಹಟ್ಟಿ, ತಾಂಡಾ ನಿವಾಸಿಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿದೆ. ಹಾಗೆಯೇ, ಮುಂದಿನ ಒಂದು ವರ್ಷದಲ್ಲಿ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡುವ ಗುರಿ ಸರ್ಕಾರ ಹೊಂದಿದೆ. ಹೀಗಾಗಿ ಅಧಿಕಾರಿಗಳು ಆಸಕ್ತಿವಹಿಸಿ ತಾಂಡಾ ನಿಗಮ ಹಾಗೂ ಜಲಜೀವನ ಮಿಷನ್‌ನಿಂದ ಪಟ್ಟಿ ತರಿಸಿಕೊಂಡು ತಾಳೆ ಮಾಡಿ, ಬಿಟ್ಟು ಹೋಗಿರುವ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಎಂದು ಕೃಷ್ಣ ಬೈರೇಗೌಡ ಆದೇಶಿಸಿದರು.

ಗ್ರಾಮಾಡಳಿತ ಅಧಿಕಾರಿಗಳಿಗೆ ಕಚೇರಿ ಭಾಗ್ಯ:

ಹಲವು ವರ್ಷಗಳಿಂದ ಕಚೇರಿಗಳಿಲ್ಲದೆ ಕೆಲಸ ಮಾಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಗ್ರಾಪಂ ಕಾರ್ಯಾಲಯದಲ್ಲೇ ಸ್ಥಳಾವಕಾಶ ನೀಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿಗಳಿಲ್ಲದ ಕಾರಣ ಜನ ಮತ್ತು ಜನಪ್ರತಿನಿಧಿಗಳು ಗ್ರಾಮ ಆಡಳಿತಾಧಿಕಾರಿಗಳು ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಅದರೊಂದಿಗೆ ತಮಗೆ ಕಚೇರಿ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗಳೂ ಹಲವು ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ಕನಿಷ್ಠ 1 ಸಾವಿರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಸಿಗುವಂತಾಗಬೇಕು ಎಂದು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ನಿರ್ದೇಶಿಸಿದರು.

ರಾಜ್ಯದಲ್ಲಿ 5,944 ಗ್ರಾಮ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲೇ ಕನಿಷ್ಠ 1 ಸಾವಿರ ಗ್ರಾಮ ಆಡಳಿತಾಧಿಕಾರಿಗಳಿಗೆ ಕಚೇರಿ ನಿರ್ಮಿಸುವಷ್ಟು ಸ್ಥಳಾವಕಾಶವಿದೆ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳು ಮುಂದಿನ 15 ದಿನಗಳಲ್ಲಿ ಕಚೇರಿ ನಿರ್ಮಿಸಲು ಅಥವಾ ಒದಗಿಸಲು ಕಾರ್ಯಪ್ರವೃತ್ತರಾಗಬೇಕು. ಉಳಿದ ಅಧಿಕಾರಿಗಳಿಗೆ ಮುಂದಿನ ಹಂತದಲ್ಲಿ ಗ್ರಾಪಂ ಆವರಣದಲ್ಲಿ ನೂತನ ಕಟ್ಟಡ ನಿರ್ಮಿಸಿ ಕಚೇರಿ ತೆರೆಯಬೇಕು ಎಂದು ಸೂಚಿಸಿದರು.

ಕಂಚಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ಕುಮಾರ್‌ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್‌ಕುಮಾರ್‌ ಇದ್ದರು