ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೌತಿ ಖಾತೆ ಆಂದೋಲನ ನಡೆಸಿ ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.  

ಹಾವೇರಿ (ಮೇ.16): ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೌತಿ ಖಾತೆ ಆಂದೋಲನ ನಡೆಸಿ ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯ ತಾಂಡಾ, ಹಟ್ಟಿ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕಂದಾಯ ಗ್ರಾಮದ ಸ್ಥಾನಮಾನ ನೀಡಲು ಸರ್ಕಾರ ನಿರ್ಧರಿಸಿದ್ದು, ಜೂನ್ ಅಂತ್ಯದೊಳಗಾಗಿ ಬಾಕಿ ಉಳಿದುಕೊಂಡಿರುವ ಕಂದಾಯ ಗ್ರಾಮಗಳ ರಚನೆಗೆ ಅಂತಿಮ ಅಧಿಸೂಚನೆ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು. ಕರ್ನಾಟಕದಲ್ಲಿ ಕಳೆದ ಹತ್ತು ವರ್ಷದಿಂದ ಕಂದಾಯ ಗ್ರಾಮ ಮಾನ್ಯತೆ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಈಗ ಸರ್ಕಾರ ಮುಂದಾಗಿದೆ ಎಂದರು. 

ಹಟ್ಟಿ, ತಾಂಡಾ, ಕಾಲನಿಗಳನ್ನು ಸೇರಿ ರಾಜ್ಯದಲ್ಲಿ ಸುಮಾರು 3 ಸಾವಿರ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಭೂಕಂದಾಯ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ಮಾಡಲಾಗಿದೆ. ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಸಮುದಾಯಗಳಿಗೆ ಕಂದಾಯ ಗ್ರಾಮಗಳನ್ನು ರಚಿಸಿ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆದರೂ ಅದರ ಅನುಷ್ಠಾನ ಈವರೆಗೂ ಪೂರ್ಣಗೊಂಡಿಲ್ಲ ಎಂದರು.

ಇನ್ನೂ ಮೃತರ ಹೆಸರಲ್ಲೇ ಇವೆ 52 ಲಕ್ಷ ಜಮೀನು ಖಾತೆ: ಸಚಿವ ಕೃಷ್ಣ ಬೈರೇಗೌಡ

ಭೂ ಸುರಕ್ಷಾ ಯೋಜನೆಗೆ ವೇಗ ನೀಡಿ: ಭೂ ಸುರಕ್ಷಾ ಯೋಜನೆಯಡಿ ಭೂ ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆ ತ್ವರಿತಗತಿಯಲ್ಲಿ ಸಾಗಬೇಕು. ಜಿಲ್ಲೆಯಲ್ಲಿ ಸರಾಸರಿ 10 ಸಾವಿರ ಪುಟಗಳ ಸ್ಕ್ಯಾನ್ ಹಾಗೂ ಅಪ್‌ಲೋಡ್ ಆಗಬೇಕು. ಇದರಿಂದ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿಯೇ ಅವಶ್ಯಕವಿರುವ ದಾಖಲೆಗಳನ್ನು ಪಡೆದುಕೊಳ್ಳಬಹುದು. ಇದರಿಂದ ಸಾರ್ವಜನಿಕರು ವಿನಾಕಾರಣ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಹಾಗೂ ದಲ್ಲಾಳಿಗಳ ಹಾವಳಿ ತಪ್ಪಲಿದೆ. ಜನರ ದಾಖಲೆಗಳು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಸುಮಾರು 52 ಲಕ್ಷಕ್ಕೂ ಹೆಚ್ಚು ಕೃಷಿ ಭೂಮಿಯ ಪ್ರಕರಣಗಳು ಇನ್ನೂ ಮೃತ ವ್ಯಕ್ತಿಗಳ ಹೆಸರಿನಲ್ಲಿವೆ. ಪಿತ್ರಾರ್ಜಿತ ದಾಖಲೆಗಳನ್ನು ನವೀಕರಿಸುವ ಕಾರ್ಯಕ್ಕೆ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.