ಯುದ್ಧ ಘೋಷಣೆ ಮಾಡಿದಾಗ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು. ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಹಾಗೆ ಪಾಠ ಕಲಿಸಬೇಕು ಎಂದು ಬೆಂಬಲಿಸಿದ್ದೆವು. ಈಗ ಯುದ್ಧದ ಗುರಿ ಈಡೇರಿತಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದಾರೆ.
ವಿಜಯಪುರ (ಮೇ.14): ಯುದ್ಧ ಘೋಷಣೆ ಮಾಡಿದಾಗ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು. ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಹಾಗೆ ಪಾಠ ಕಲಿಸಬೇಕು ಎಂದು ಬೆಂಬಲಿಸಿದ್ದೆವು. ಈಗ ಯುದ್ಧದ ಗುರಿ ಈಡೇರಿತಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದಾರೆ.
ಪಾಕ್ ಕದನ ವಿರಾಮ ಉಲ್ಲಂಘನೆ ಬಗ್ಗೆ ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಮಾಡುವಾಗ ಯಾವ ಉದ್ದೇಶ, ಗುರಿ ಇಟ್ಟುಕೊಂಡು ಕದನ ಆರಂಭ ಮಾಡಿದ್ದೆವೋ ಆ ಗುರಿ ಈಡೇರಿತಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಅಂದುಕೊಂಡಿದ್ದೆವು ಆ ಪಾಠ ಈಡೇರಿತಾ? ಮೂರ್ನಾಲ್ಕು ದಿನ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ ಪಾಕಿಸ್ತಾನಕ್ಕೆ ಇನ್ನಷ್ಟು ಇಂಬು ಕೊಟ್ಟಂಗಾಗುತ್ತದೆ ಎಂಬ ಅನುಮಾನ ಹುಟ್ಟಲು ಶುರುವಾಗುತ್ತೆ ಎಂದರು.
ನಾವು ಕದನ ವಿರಾಮ ಮಾಡುವುದು ಸರಿ. ಆದರೆ ಅಮೆರಿಕದವರು ಹೇಳಿದರು ಎಂಬ ಕಾರಣಕ್ಕೆ ಯುದ್ಧ ನಿಲ್ಲಿಸುವುದಾ ಎಂದು ಪ್ರಶ್ನಿಸಿದರು. ಅಮೆರಿಕ ನಮ್ಮ ಆಂತರಿಕ ವಿಚಾರ ತೀರ್ಮಾನ ಮಾಡುವುದಾದರೆ, ನಮ್ಮ ಸಾರ್ವಭೌಮತ್ವದ ವಿಷಯ ಏನು? ಕಾಶ್ಮೀರದ ವಿಚಾರದಲ್ಲಿ ಅಮೆರಿಕದವರು ಮಧ್ಯಸ್ಥಿಕೆ ವಹಿಸುತ್ತೇವೆ ಅಂತಾರೆ. ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನಡೆಯಿಲ್ಲ. ಇದು ಆಂತರಿಕ ವಿಚಾರ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶದವರು ಬಂದು ನಮ್ಮಆಂತರಿಕ ವಿಚಾರದಲ್ಲಿ ನ್ಯಾಯ ಪಂಚಾಯತಿ ಮಾಡುವುದು, ಅಲ್ಲಿಗೆ ಕಾಶ್ಮೀರ ಸಮಸ್ಯೆ ಮುಗಿಯಿತಾ?. ಅಥವಾ ಮರಳಿ ಆರಂಭವಾಯಿತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲದಂತಾಗಿದೆ ಎಂದರು.
ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮ: ಸರ್ವಪಕ್ಷಗಳ ಸಭೆ ಕರೆಯಲು ಖರ್ಗೆ ಆಗ್ರಹ
ಯುದ್ಧದ ಕ್ರೆಡಿಟ್ ಸೇನೆ, ಕೇಂದ್ರ ಎರಡಕ್ಕೂ ಸಲ್ಲಬೇಕು: ಯದುವೀರ್
ಮೈಸೂರು: ಖಂಡಿತವಾಗಿಯೂ ಯುದ್ಧದ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕು. ಜೊತೆಗೆ ಯುದ್ಧದ ತಂತ್ರ ರೂಪಿಸಿದ ಕೇಂದ್ರ ಸರ್ಕಾರಕ್ಕೂ ಸಲ್ಲಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ಯುದ್ಧದ ಕ್ರೆಡಿಟ್ ಸೇನೆಗೆ ಮಾತ್ರ ಸಲ್ಲಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಸಂದೇಶ ಕೊಡುವ ಸ್ಥಾನದಲ್ಲೂ ನಾನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೈಜೋಡಿಸಿ ನಿಲ್ಲಬೇಕು. ಕದನ ವಿರಾಮದ ಬಗ್ಗೆ ಭಾರತೀಯ ಸಶಸ್ತ್ರ ಪಡೆಯ ನಾಯಕರ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಸಿಂದೂರ’ವೇ ಪಾಕ್‌ಗೆ ಲಕ್ಷ್ಮಣ ರೇಖೆ; ಗಡಿ ದಾಟಿ ಬಂದರೆ ನುಗ್ಗಿ ಹೊಡೀತೀವಿ; ಪ್ರಧಾನಿ ಮೋದಿ ಮತ್ತೆ ಗುಡುಗು!
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಅದರಲ್ಲಿ ಸರ್ಕಾರದ ಪಾತ್ರವೇನಿದೆ ಎಂದು ನಾವು ಕಾಂಗ್ರೆಸ್ ನಾಯಕರನ್ನು ಕೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಇನ್ನು, ಪಾಕಿಸ್ತಾನ ವಿರುದ್ಧದ ಯುದ್ಧದ ವಿಚಾರವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಅಂದಿನ ಕಾಲಕ್ಕೆ ತಕ್ಕಂತೆ ಇಂದಿರಾಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ಮೋದಿಯವರು ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದರು.


