Mahesh Tenginkai Slams Karnataka Govt Over Annabhagya Dues ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಅನ್ನಭಾಗ್ಯ ಯೋಜನೆ ಮತ್ತು ಪ್ಯಾಲೆಸ್ತೀನ್ ಚಿತ್ರಗಳ ವಿವಾದದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಜ.30): ಜನವರಿ ತಿಂಗಳ ಅನ್ನಭಾಗ್ಯದ ಅಕ್ಕಿ ನೀಡದ, ಅಕ್ಕಿಯ ಬದಲು ಹಣವನ್ನೂ ನೀಡದ ರಾಜ್ಯ ಸರ್ಕಾರವನ್ನು ಶಾಸಕ ಮಹೇಶ್ ಟೆಂಗಿನಕಾಯಿ ಜರಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ, ನಿನ್ನೆ ವಿಧಾನಸಭೆಯಲ್ಲಿ ಪ್ರಶ್ನೋತ್ತರದಲ್ಲಿ 2025ರ ಜನವರಿ ತಿಂಗಳ ಪಡಿತರ ಹಣ ಫಲಾನುಭವಿಗಳಿಗೆ ಹಾಕದಿರುವ ಬಗ್ಗೆ ಪ್ರಶ್ನೆ ಕೇಳಿದ್ದೆ. ಸದನದಲ್ಲಿ ಉತ್ತರದ ವೇಳೆ ಸಚಿವ ಕೆ.ಹೆಚ್. ಮುನಿಯಪ್ಪ ಕೇಂದ್ರ ಸರ್ಕಾರದ ಮೇಲೆ ಹಾಕುವ ಪ್ರಯತ್ನ ಮಾಡಿದರು. ನಾನು ಇಂದು ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ದೂರವಾಣಿಯಲ್ಲಿ ಮಾತಾಡಿದ್ದೇನೆ. ಬೆಳಗ್ಗೆ ಹಣ ಜಮಾ ಮಾಡಿದರೆ ಸಂಜೆ ಅಕ್ಕಿ ಹಾಕುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.
ಹಾಗಾದರೆ ಆರ್ಥಿಕ ಇಲಾಖೆಯಲ್ಲಿ ಹಣ ಇಲ್ವಾ? ಜನವರಿ 2025ರ ಅಕ್ಕಿಯನ್ನೂ ಕೊಟ್ಟಿಲ್ಲ, ಹಣವನ್ನೂ ಹಾಕಿಲ್ಲ. ಫಲಾನುಭವಿಗಳಿಗೆ ಹಣವನ್ನಾದರೂ ಹಾಕಿ ಅಥವಾ ಅಕ್ಕಿಯನ್ನಾದರೂ ಕೊಡಿ. 9 ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದೇನೆ ಎಲ್ಲಾ ಜಿಲ್ಲೆಗಳಿಂದಲೂ ಒಂದೇ ಉತ್ತರ ಬಂದಿದೆ. ಜನವರಿಯಲ್ಲಿ ಸಭೆ ಆಗಿದೆ, ಫೆಬ್ರವರಿಯಲ್ಲಿ ಹಾಕಿದ್ದೇವೆ ಎಂಬ ಒಂದೇ ಉತ್ತರ ಕೊಟ್ಟಿದ್ದಾರೆ. ಇದು ಭಿಕ್ಷೆ ಹಾಕೋದಲ್ಲ. 657 ಕೋಟಿ ರೂ. ಹಣವನ್ನು ಆದರೂ ಕೊಡಿ ಅಥವಾ ಅಕ್ಕಿಯನ್ನಾದರೂ ಕೊಡಿ. ಮೋಸ ಮಾಡುವ ಪ್ರಯತ್ನ ರಾಜ್ಯ ಸರ್ಕಾರ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಇಲ್ಲ ಎಂದು ಹೇಳಿದ್ದಾರೆ.
ಪ್ಯಾಲೆಸ್ತೇನ್ ಚಿತ್ರಕ್ಕೆ ನಿಷೇಧ ನಿರ್ಧಾರ ಸ್ವಾಗತ
ಇದೇ ವೇಳೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೇನ್ ಚಲನಚಿತ್ರ ಪ್ರದರ್ಶನ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರ, ಪ್ಯಾಲೆಸ್ಟೈನ್ ಚಿತ್ರಗಳನ್ನು ಯಾಕೆ ನಿಷೇಧ ಮಾಡಬೇಕು ಅಂತಾ ನಿರ್ಧಾರ ಮೇಲಿನಿಂದಲೇ ಆಗುತ್ತದೆ. ಇದು ಸಂಕುಚಿತ ನಿರ್ಧಾರ. ಎಡಪಂಥೀಯರದ್ದು ಇದೇ ವಾದ. ಹಾಗಾದರೆ ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ಹಲ್ಲೆಗಳ ಚಿತ್ರ ಹಾಕಲಿ ಅಂತಾ ಹೇಳಲಿ ನೋಡೋಣ. ಚಲನಚಿತ್ರೋತ್ಸವ ಸಮಿತಿಯ ನಿರ್ಧಾರ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದ ಕೇಸ್‌ನಲ್ಲಿ ಯಾರಿಗೂ ಶಿಕ್ಷೆ ಆಗಿಲ್ಲ
ಪಾಕ್ ಪರ ಘೋಷಣೆ ಕೂಗಿದ ಕೇಸ್ ಗಳಲ್ಲಿ ಶಿಕ್ಷೆ ಆಗದ ವಿಚಾರದ ಬಗ್ಗೆ ಮಾತನಾಡಿದ ಅವರು, ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದರು. ಮಾತಾಡದವರಿಗೆ ನೊಟೀಸ್ ಕೊಡುತ್ತಾರೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ತನಿಖೆ ಮುಗಿಸಿ ಕ್ರಮ ಆಗಬೇಕಿತ್ತು, ಆದರೆ ಆಗಿಲ್ಲ. ಹಾಗೇ ಮ್ಯಾನೇಜ್ ಮಾಡಿ ಅಂತ ಪೊಲೀಸರಿಗೆ ಸರ್ಕಾರ ಸೂಚಿಸಿದೆ. ಇದುವರೆಗೆ ಕ್ರಮ ಆಗಿಲ್ಲ, ಇದೇ ಅಲ್ಪಸಂಖ್ಯಾತರ ತುಷ್ಟೀಕರಣ. ಈ ಸರ್ಕಾರದಿಂದ ಇದೆಲ್ಲವನ್ನೂ ನಾವು ನಿರೀಕ್ಷೆ ಮಾಡಿದೀವಿ ಎಂದು ಟೀಕಿಸಿದ್ದಾರೆ.

