ಸಿದ್ದರಾಮಯ್ಯಗೆ ಇದು ಕೊನೆಯ ವಿಜಯ ದಶಮಿ, ಹಬ್ಬ ಆದ್ಮೇಲೆ ರಾಜೀನಾಮೆ ಕೊಡ್ತಾರೆ: ಶಾಸಕ ಟೆಂಗಿನಕಾಯಿ
ಈಗಾಗಲೇ ಸಿಎಂ ಗಾದಿಗೆ ಕೆಲವರು ಟವೆಲ್ ಹಾಕಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಸಿಲುಕಿದೆ. ವಿಷಯ ಡೈವರ್ಟ್ ಮಾಡಲು ಕಾಂಗ್ರೆಸ್ ಸರ್ಕಾರ ಏನೇನೋ ಮಾಡ್ತಿದೆ ಎಂದು ದೂರಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ(ಅ.12): ಸಿಎಂ ಸಿದ್ದರಾಮಯ್ಯನವರಿಗೆ ಇದು ಕೊನೆಯ ವಿಜಯ ದಶಮಿ ಆಗಲಿದೆ. ವಿಜಯ ದಶಮಿಯಾದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ. ನಮಗಿರೋ ಮಾಹಿತಿ ಪ್ರಕಾರ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡ್ತಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ಈಗಾಗಲೇ ಸಿಎಂ ಗಾದಿಗೆ ಕೆಲವರು ಟವೆಲ್ ಹಾಕಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಸಿಲುಕಿದೆ. ವಿಷಯ ಡೈವರ್ಟ್ ಮಾಡಲು ಕಾಂಗ್ರೆಸ್ ಸರ್ಕಾರ ಏನೇನೋ ಮಾಡ್ತಿದೆ ಎಂದು ದೂರಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಜಟಾಪಟಿ: ಸರ್ಕಾರದ ಈ ನಡೆ ಹಿಂದಿದ್ಯಾ ಸಿದ್ದು ಸೇಫ್ ಗೇಮ್?
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ನಾವು ಇದನ್ನು ಬಿಡಲ್ಲ, ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ. ಸಭೆ ಮಾಡಿ ಹೋರಾಟದ ಸಿದ್ಧತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಸಿಟಿ ರವಿ ಅವರ ಕೇಸ್ ವಾಪಸ್ ಪಡೆದಿದ್ದೇವೆ ಅಂತಾರೆ. ಸಿಟಿ ರವಿ ಅವರ ಮೇಲೆ ಯಾವ ಕೇಸ್ ಇರಲಿಲ್ಲ. ಸುಮ್ನೆ ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ರೈತರ ಹೋರಾಟದ ವಿಚಾರ ಬಿಟ್ಟು ಮತ್ತೆ ಎರಡು ಜಿಲ್ಲೆಯಲ್ಲಿ ಬೇರೆ ಯಾವ ಕೇಸ್ ಇರಲಿಲ್ಲ ಎಂದು ಹೇಳಿದ್ದಾರೆ.