Asianet Suvarna News Asianet Suvarna News

ಮಹಾ ಸಚಿವರಿಗೆ ‘ಗಡಿ’ ನಿರ್ಬಂಧ: ಆದೇಶ ಹೊರಡಿಸಿದ ಬೆಳಗಾವಿ ಜಿಲ್ಲಾಧಿಕಾರಿ

ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳ ತೀವ್ರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಮಹಾರಾಷ್ಟ್ರ ಸಚಿವರು ಮಂಗಳವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಿದೆ. 

Maharashtra Ministers Restrained From Coming To Belagavi DC Nitesh Patil Issues Order gvd
Author
First Published Dec 6, 2022, 2:00 AM IST

ಬೆಳಗಾವಿ (ಡಿ.06): ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳ ತೀವ್ರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಮಹಾರಾಷ್ಟ್ರ ಸಚಿವರು ಮಂಗಳವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಿದೆ. ಮಹಾರಾಷ್ಟ್ರದ ಇಬ್ಬರು ಸಚಿವರು ಹಾಗೂ ಓರ್ವ ಸಂಸದ ಮಂಗಳವಾರ ಬೆಳಗಾವಿಗೆ ಬರುವುದನ್ನು ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. 

ಆ ಮೂಲಕ ಭಾಷೆ, ಗಡಿ ವಿಚಾರವನ್ನೇ ಸದಾ ಮುನ್ನೆಲೆಗೆ ತಂದು ಕಿಡಿ ಹೊತ್ತಿಸುತ್ತಿದ್ದ ಮಹಾರಾಷ್ಟ್ರ ಹಾಗೂ ಎಂಇಎಸ್‌ ನಾಯಕರಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಡಿ.6ರ ಮಂಗಳವಾರ ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಚಂದ್ರಕಾಂತ (ದಾದಾ) ಪಾಟೀಲ, ಅಬಕಾರಿ ಸಚಿವ ಶಂಭುರಾಜ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿದ್ದರು. ಆ ಸಂದರ್ಭದಲ್ಲಿ ಅವರು ಪ್ರಚೋದನಕಾರಿ ಭಾಷಣ ಅಥವಾ ಹೇಳಿಕೆ ನೀಡುವ ಸಾಧ್ಯತೆಗಳಿರುತ್ತವೆ. 

ಒಗ್ಗಟ್ಟು, ಸಹಕಾರವಿದ್ದರೆ ಮಾತ್ರ ಸಮುದಾಯದ ಏಳಿಗೆ: ಸಚಿವ ಭೈರತಿ ಬಸವರಾಜು

ಇದರಿಂದ ಭಾಷಾ ವೈಷಮ್ಯ ಬೆಳೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೆ, ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಉಂಟಾಗುವ ಹಾಗೂ ಕರ್ನಾಟಕ-ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾಧ್ಯತೆ ಇದೆ. ಹೀಗಾಗಿ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ನೆಮ್ಮದಿ ಕಾಪಾಡುವ ಹಿತದೃಷ್ಟಿಯಿಂದ ಈ ಮೂವರು ಮಹಾರಾಷ್ಟ್ರ ನಾಯಕರಿಗೆ ಸಿಆರ್‌ಪಿಸಿ 1973 ಕಲಂ 144(3) ಅನ್ವಯ ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಡಿ.6ರಂದು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಭೇಟಿಗೆ ವ್ಯಾಪಕ ವಿರೋಧ: ಎಂಇಎಸ್‌ ಆಹ್ವಾನದ ಮೇರೆಗೆ ಮಹಾಪರಿನಿರ್ವಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಡಿ. 6ರಂದು ಬೆಳಗಾವಿಗೆ ಬರುವುದಾಗಿ ಮಹಾರಾಷ್ಟ್ರ ಸಚಿವರು ಘೋಷಿಸಿದ್ದರು. ಇವರ ಭೇಟಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇವರ ಭೇಟಿ ವಿರೋಧಿಸಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಉರುಳುಸೇವೆ, ಪ್ರತಿಭಟನೆ ನಡೆಸಿದ್ದವು. ಸರ್ಕಾರ ಒಪ್ಪಿದರೂ ನಾವು ಬೆಳಗಾವಿಗೆ ಕಾಲಿಡಲು ಮಹಾರಾಷ್ಟ್ರ ಸಚಿವರನ್ನು ಬಿಡುವುದಿಲ್ಲ. ಭೇಟಿಗೆ ಅವಕಾಶ ಕೊಟ್ಟರೆ ಬೀದಿಗಿಳಿಯುವುದಾಗಿ ಎಚ್ಚರಿಕೆ ನೀಡಿದ್ದವು. ಭೇಟಿ ವಿರೋಧಿಸಿ ದಿನದಿಂದ ದಿನಕ್ಕೆ ಕನ್ನಡಿಗರ ಹೋರಾಟ ತೀವ್ರಗೊಳ್ಳುತ್ತಿತ್ತು.

ಬಯಲುಸೀಮೆ ಜಿಲ್ಲೆಗಳ ಅಭಿವೃದ್ಧಿಗೆ 1 ಸಾವಿರ ಕೋಟಿ: ಎಚ್‌.ಡಿ.ಕುಮಾರಸ್ವಾಮಿ

ಅಲ್ಲದೆ, ಸೋಮವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಗಡಿ ವಿವಾದ ಸುಪ್ರೀಂಕೋರ್ಚ್‌ನಲ್ಲಿದೆ. ಗಡಿ ವಿವಾದ ಸೂಕ್ಷ್ಮ ವಿಚಾರ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಸೂಕ್ತವಲ್ಲ. ಸಚಿವರ ಕರ್ನಾಟಕ ಪ್ರವಾಸ ಜನರಲ್ಲಿ ಪ್ರಚೋದನಕಾರಿ ಭಾವನೆ ಕೆರಳಿಸುವ ಸಾಧ್ಯತೆ ಇದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಈ ಬಗ್ಗೆ ಲಿಖಿತವಾಗಿ ನಮ್ಮ ಮುಖ್ಯಕಾರ್ಯದರ್ಶಿಗಳು ಅಲ್ಲಿನ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಇಷ್ಟಾಗಿಯೂ ಅವರು ಬರುವ ಸಾಹಸ ಮಾಡಿದರೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದರು. ಇವೆಲ್ಲ ಘಟನೆಗಳ ಹಿನ್ನೆಲೆಯಲ್ಲಿ ಮಹಾ ಸಚಿವರ ಭೇಟಿಗೆ ನಿರ್ಬಂಧ ಹೇರಿ, ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios