ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವಂತಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.
ರಿಪ್ಪನ್‍ಪೇಟೆ (ಡಿ.28): ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು. ರಿಪ್ಪನ್‍ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಳಗಲ್ಲು ಗ್ರಾಮದಲ್ಲಿ ಸುಮಾರು 28 ರು. ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
28 ಕೋಟಿ ರು. ವೆಚ್ಚದಲ್ಲಿ 250 ಪರಿಶಿಷ್ಟ ಜಾತಿ ಜನಾಂಗದ ಮಕ್ಕಳಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿ ಭಾಷೆಗೆ ಬೋಧನೆಯನ್ನು ಆರಂಭಿಸಲಾಗಿ ತರಬೇತಿ ಹೊಂದಿರುವ ಶಿಕ್ಷಕರ ನೇಮಕಾತಿಯಲ್ಲಿ ವ್ಯತ್ಯಾಸವಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಅರು ತಿಂಗಳಲ್ಲಿ 35 ಸಾವಿರ ಶಿಕ್ಷಕರ ನೇಮಕಾತಿ ಬಗ್ಗೆ ಪ್ರಕ್ರಿಯೆ ಅರಂಭಿಸಲಾಗುವುದೆಂದು ತಿಳಿಸಿದರು.
ಶಾಸಕ ಅರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗೋಪಾಲಕೃಷ್ಣ ಬೇಳೂರು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ್, ಕೋಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶಶೆಟ್ಟಿ, ಹುಂಚ ಗ್ರಾಪಂ ಅಧ್ಯಕ್ಷೆ ಸುಮಂಗಲ ದೇವರಾಜ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಜ್ಯೋತಿ ಚಂದ್ರುಮಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರಮೌಳಿ, ತಹಸೀಲ್ದಾರ್ ಭರತ್‍ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ.ವೈ ಮತ್ತಿತರರಿದ್ದರು.
ಮಧು ಬಂಗಾರಪ್ಪ ಟಿಬೇಟಿಯನ್ ಧರ್ಮ ಗುರು ದಲಾಯಿ ಲಾಮಾ ಭೇಟಿ
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶನಿವಾರ ತಾಲೂಕಿನ ಟಿಬೇಟಿಯನ್ ಕಾಲನಿ ಲಾಮಾ ಕ್ಯಾಂಪ್ ನಂ. 2ರಲ್ಲಿರುವ ಡ್ರೆಪುಂಗ್ ಬೌದ್ಧ ಮಠದಲ್ಲಿ ನೆಲೆಸಿರುವ ನೊಬೆಲ್ ಶಾಂತಿ ಪುರಸ್ಕೃತ, ಟಿಬೇಟಿಯನ್ ಧರ್ಮ ಗುರು ದಲಾಯಿ ಲಾಮಾ ಅವರನ್ನು ಭೇಟಿಯಾಗಿ ಸನ್ಮಾನಿಸಿ ಅವರಿಂದ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಹಿಂದೆ ನಮ್ಮ ತಂದೆ ಎಸ್.ಬಂಗಾರಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ದಲಾಯಿ ಲಾಮಾ ಅವರನ್ನು ಭೇಟಿಯಾಗಿದ್ದರು. ಅದೇ ರೀತಿ ನಾನು ಈಗ ಶಿಕ್ಷಣ ಸಚಿವನಾಗಿ ಅವರನ್ನು ಭೇಟಿಯಾಗಿರುವುದು ತೀವ್ರ ಸಂತೋಷವಾಯಿತು. ನಮ್ಮ ದೇಶ ಪ್ರತಿಯೊಬ್ಬರನ್ನು ನಮ್ಮವರು ಎಂಬ ಭಾವನೆಯಿಂದ ಕಾಣುತ್ತದೆ.
ಅದೇ ರೀತಿ ಟಿಬೇಟಿಯನ್ನರು ಕೂಡ ಅವರ ಕಾರ್ಯ ರೀತಿಯಲ್ಲಿ ನಮ್ಮವರಲ್ಲಿ ಒಬ್ಬರಾಗಿ ಸಹಭಾಳ್ವೆ ಮಾಡುತ್ತಿದ್ದಾರೆ ಎಂದರು. ಅವರ ಶಾಂತಿ ಪ್ರೀಯತೆ ನಮಗೆ ಹಮ್ಮೆ ತರುವಂತಹದ್ದು, ನಮ್ಮ ದೇಶ ಹಾಗೂ ಅವರೊಂದಿಗಿನ ಭಾಂದವ್ಯ ಸಮಾನತೆಯೊಂದಿಗೆ ಒಂದೇ ತಾಯಿ ಮಕ್ಕಳಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರೀತಿಯನ್ನು ಹಂಚಿಕೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯರಾಣಿ, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಧರ್ಮರಾಜ ನಡಗೇರಿ, ವೈ.ಪಿ. ಬುಜಂಗಿ, ಕೇಂಜೋಡಿ ಗಲಬಿ, ಮಹ್ಮದಗೌಸ್ ಮಕಾಂದಾರ, ಸಲ್ಮಾ ಶೇರಖಾನೆ, ಶಾರದಾ ರಾಥೊಡ ಮುಂತಾದವರು ಉಪಸ್ಥಿತರಿದ್ದರು.

