ಅಲ್ಪಸಂಖ್ಯಾತರ ಹಾಗೂ ಶೋಷಿತರ ಪರವಾಗಿ ನಿಲ್ಲುತ್ತೇವೆ ಅನ್ಯಾಯವಾದರೆ ನಾವು ಮಾತನಾಡುವುದು ತಪ್ಪಾ ಕಾಂಗ್ರೆಸ್ ನಿಲುವು ಸಮರ್ಥಿಸಿಕೊಳ್ಳಲು ಖರ್ಗೆ ಹೊಸ ವರಸೆ  

ಬೆಂಗಳೂರು(ಮೇ.11): ಮುಂಬರುವ 2023ರ ಸಾರ್ವತ್ರಿಕ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಲೌಡ್‌ ಸ್ಪೀಕರ್‌ ಅಭಿಯಾನ ನಡೆಯುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ್‌ ಚಾಲೀಸಾ ಆಗಲಿ, ರಾಮ ಭಕ್ತರೇ ಆಗಲಿ ಇಷ್ಟುದಿನ ಇವರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು. ಈ ವಿಷಯದಲ್ಲಿ ನಾವು ಅಲ್ಪಸಂಖ್ಯಾತರ ಹಾಗೂ ಶೋಷಿತರ ಪರವಾಗಿ ನಿಲ್ಲುತ್ತೇವೆ. ಮುಸ್ಲಿಮರ ಮೇಲೆ ಅನ್ಯಾಯವಾದರೆ ನಾವು ಮಾತನಾಡುವುದು ತಪ್ಪಾ? ದಲಿತರು, ಲಿಂಗಾಯತ ರೈತರು, ಹಿಂದುಳಿದ ಜನಾಂಗದ ಮೇಲೆ ಅನ್ಯಾಯವಾದ್ರೆ ನಾವು ಮಾತನಾಡೋದು ತಪ್ಪಾ? ಎಲ್ಲಿ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತೆಯೋ ಅಲ್ಲಿ ಕಾಂಗ್ರೆಸ್‌ ಮುಂದಾಳತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಅಜಾನ್ ವಿವಾದ ಅಂತ್ಯಕ್ಕೆ ಹೊಸ ಮಾರ್ಗಸೂಚಿ ಪ್ರಕಟ, ಕಠಿಣ ನಿಯಮ ಜಾರಿ!

ರಾಜ್ಯದಲ್ಲಿ ಮೈಕ್‌ಗಳಿಗೆ ಸರ್ಕಾರ ಮೂಗುದಾರ
ರಾಜ್ಯದಲ್ಲಿ ಆಜಾನ್‌-ಸುಪ್ರಭಾತ ವಿವಾದಕ್ಕೆ ಕೊನೆ ಹಾಡಲು ರಾಜ್ಯದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವವರು ಸಂಬಂಧಪಟ್ಟಸಕ್ಷಮ ಪ್ರಾಧಿಕಾರದಿಂದ 15 ದಿನಗಳ ಒಳಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ, ಅನುಮತಿರಹಿತ ಧ್ವನಿವರ್ಧಕಗಳನ್ನು ತೆಗೆದು ಹಾಕಲು ಅಧಿಕಾರಿಗಳಿಗೆ ಸೂಚಿಸಿದೆ.

ನಿಗದಿಪಡಿಸಿದ ಗಡುವಿನೊಳಗೆ ಅನುಮತಿ ಪಡೆಯದ ಧ್ವನಿವರ್ಧಕಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟಸರ್ಕಾರಿ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸೂಚಿಸಿದೆ. ಇದಕ್ಕಾಗಿ ಶಬ್ಧ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ ನಿಯಮಗಳು) 2002 ಅನ್ವಯ ಸಕ್ಷಮ ಪ್ರಾಧಿಕಾರದ ಪರವಾನಗಿ ಇಲ್ಲದ ಸಾರ್ವಜನಿಕ ಧ್ವನಿವರ್ಧಕಗಳನ್ನು ತೆಗೆದುಹಾಕಲು ಸಮಿತಿ ರಚನೆಗೆ ಆದೇಶಿಸಿದೆ.

ಪೊಲೀಸ್‌ ಕಮಿಷನರೇಟ್‌ ಪ್ರದೇಶಗಳಲ್ಲಿ ಸಹಾಯಕ ಪೊಲೀಸ್‌ ಆಯುಕ್ತರು, ಸಂಬಂಧಿತ ನಗರ ಪಾಲಿಕೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಈ ಮೂವರನ್ನು ಒಳಗೊಂಡ ಸಮಿತಿ ರಚಿಸಲು ಹಾಗೂ ಇನ್ನಿತರ ಎಲ್ಲ ಪ್ರದೇಶಗಳಲ್ಲಿ ಡಿವೈಎಸ್ಪಿ, ಸಂಬಂಧಿತ ತಹಶೀಲ್ದಾರ್‌ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಲು ಸರಕಾರ ಆದೇಶಿಸಿದೆ.

ಮಸೀದಿ ಅಥವಾ ಮಂದಿರ ಯಾವುದೇ ಆದರೂ ಸಾರ್ವಜನಿಕ ಧ್ವನಿವರ್ಧಕ ಬಳಕೆಗೆ ಈ ಸಮಿತಿಗಳ ಮೂಲಕ 15 ದಿನಗಳ ಒಳಗೆ ಅನುಮತಿ ಪಡೆದಿರಬೇಕು. ಪರವಾನಗಿ ಇಲ್ಲದಿದ್ದಲ್ಲಿ ಸ್ವಯಂ ತೆರವು ಮಾಡಬೇಕು ತಪ್ಪಿದರೆ, ಸಕ್ಷಮ ಪ್ರಾಧಿಕಾರ ಬಲವಂತವಾಗಿ ತೆರವು ಮಾಡಬೇಕು ಎಂದು ಸೂಚಿಸಲಾಗಿದೆ.

ಆಜಾನ್‌ ನಿಯಮಕ್ಕೆ ಕಾಂಗ್ರೆಸ್‌ ಮುಸ್ಲಿಮರ ಆಗ್ರಹ: ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ

ಆಜಾನ್‌- ಭಜನೆ ವಿವಾದ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಗೃಹ, ಕಾನೂನು ಸೇರಿದಂತೆ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದಲ್ಲಿ ಶಬ್ಧ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 2000ದಡಿ ಇರುವ ನಿಯಮ ಮತ್ತು ಅದರ ಅನುಸಾರ ಮಾಡಿರುವ ಸರ್ಕಾರದ ಆದೇಶಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಿ ತಕ್ಷಣದಿಂದಲೇ ಆ ಎಲ್ಲ ನಿಯಮಗಳು ಮತ್ತು ಧ್ವನಿವರ್ಧಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2002ರ ಆಗಸ್ಟ್‌ 13ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಕ್ಷಣದಿಂದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಕಾರ್ಯದರ್ಶಿ ಅವರು ವಿವರವಾದ ಸುತ್ತೋಲೆ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಚ್‌ ಕೂಡ 2005ರಲ್ಲಿ ಎಲ್ಲ ರಾಜ್ಯಗಳಿಗೂ ಶಬ್ಧ ಮಾಲಿನ್ಯ ನಿಯಂತ್ರಣ ಮತ್ತು ತಡೆ ಕಾಯ್ದೆ 2000ರ ನಿಯಮಾವಳಿಗಳನ್ನು ಜಾರಿಗೊಳಿಸಲು ಸೂಚಿಸಿದೆ. ಆ ಪ್ರಕಾರ, ನಿಯಮಗಳ ಪ್ರಕಾರ ಧ್ವನಿವರ್ಧಕಗಳನ್ನು ಅಳವಡಿಸಲು ಅಥವಾ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕ ಭಾಷಣಕ್ಕೆ 15 ದಿನಗಳ ಒಳಗೆ ಸರ್ಕಾರದ ಅನುಮತಿ ಪಡೆಯಬೇಕು. ತಪ್ಪಿದರೆ ಅವುಗಳನ್ನು ತಾವೇ ತೆರವುಗೊಳಿಸಬೇಕು. ಇಲ್ಲವೇ ಸಂಬಂಧಿಸಿದ ಅಧಿಕಾರಿಗಳೇ ತೆರವುಗೊಳಿಸಬೇಕೆಂದು ಸೂಚಿಸಿರುವುದಾಗಿ ತಿಳಿಸಲಾಗಿದೆ.

ಶಬ್ದಕ್ಕೆ ಮಿತಿ:
ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದರೂ ನಿಯಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ. ನಿಯಮಾವಳಿಯಲ್ಲಿ ಧ್ವನಿವರ್ಧಕ ಬಳಕೆ ವಿಚಾರವಾಗಿ ಹಗಲು ಸಮಯವನ್ನು ಬೆಳಗ್ಗೆ 6 ರಿಂದ ರಾತ್ರಿ 10 ಮತ್ತು ರಾತ್ರಿ ಸಮಯವನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಅನುಮತಿ ಪಡೆದವರು ಬೆಳಗಿನ ಅವಧಿಯಲ್ಲಿ ಮಾತ್ರ ಧ್ವನಿವರ್ಧಕ ಬಳಕೆ ಮಾಡಬಹುದು. ರಾತ್ರಿ ವೇಳೆಯಲ್ಲಿ ಒಳಾಂಗಣದÜಲ್ಲಿ ಮಾತ್ರ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆ.

ಡೆಸಿಬಲ್‌ ಮಿತಿ:
ಕೈಗಾರಿಕಾ ಪ್ರದೇಶದಲ್ಲಿ ಶಬ್ದ ಮಿತಿ ಹಗಲು 75 ಡೆಸಿಬಲ್‌, ರಾತ್ರಿ 70 ಡೆಸಿಬಲ್‌, ವಾಣಿಜ್ಯ ಪ್ರದೇಶದಲ್ಲಿ ಹಗಲು 65 ಡೆಸಿಬಲ್‌, ರಾತ್ರಿ 55 ಡೆಸಿಬಲ್‌, ಜನವಸತಿ ಪ್ರದೇಶದಲ್ಲಿ ಹಗಲು 55 ಡೆಸಿಬಲ್‌, ರಾತ್ರಿ 45 ಡೆಸಿಬಲ್‌ ಇರಬೇಕು. ನಿಶ್ಯಬ್ಧ ಪ್ರದೇಶಗಳಲ್ಲಿ ಹಗಲು 50 ಡೆಸಿಬಲ್‌, ರಾತ್ರಿ 40 ಡೆಸಿಬಲ್‌ ಶಬ್ದ ಬಳಸಬಹುದು. ಈ ಎಲ್ಲ ನಿಯಮಗಳು ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನ್ವಯ ಎಂದು ತಿಳಿಸಲಾಗಿದೆ.

ಶಬ್ದಕ್ಕೆ ಎಲ್ಲಿ ಎಷ್ಟುಮಿತಿ?
ವಸತಿ ಪ್ರದೇಶ: ಹಗಲು 55 ಡೆಸಿಬಲ್‌, ರಾತ್ರಿ 45 ಡೆಸಿಬಲ್‌

ವಾಣಿಜ್ಯ ಪ್ರದೇಶ: ಹಗಲು 65 ಡೆಸಿಬಲ್‌, ರಾತ್ರಿ 55 ಡೆಸಿಬಲ್‌

ಕೈಗಾರಿಕಾ ಪ್ರದೇಶ: ಹಗಲು 75 ಡೆಸಿಬಲ್‌, ರಾತ್ರಿ 70 ಡೆಸಿಬಲ್‌

ನಿಶ್ಯಬ್ಧ ಪ್ರದೇಶ: ಹಗಲು 50 ಡೆಸಿಬಲ್‌, ರಾತ್ರಿ 40 ಡೆಸಿಬಲ್‌

ಆದೇಶದಲ್ಲಿ ಏನಿದೆ?
- ಧ್ವನಿವರ್ಧಕ ಬಳಸುವವರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು

- ಅನುಮತಿ ಪಡೆದರೂ ನಿಗದಿತ ಡೆಸಿಬಲ್‌ ಮಿತಿಯಲ್ಲೇ ಮೈಕ್‌ ಬಳಸಬೇಕು

- ರಾತ್ರಿ 10ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಮೈಕ್‌ ಬಳಸುವಂತಿಲ್ಲ

- ಒಳಾಂಗಣಗಳಲ್ಲಿ ಮಾತ್ರ ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ಮಾಡಬಹುದು