ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ರಾತ್ರಿ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯಿಂದ ಹೊರಬಂದಿದ್ದು, ಇದು ವಿಜಯನಗರ ಜಿಲ್ಲೆಯ ಕಡೆಯಿಂದ ಬಂದ ಶಬ್ದವಿರಬಹುದು ಎಂದು ತಹಸೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ (ಡಿ.13): ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಇಂದು ರಾತ್ರಿವೇಳೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮಸ್ಥರು ಭಯಭೀತರಾಗಿ ಹೊರಗಡೆ ಓಡಿಬಂದ ಘಟನೆ ನಡೆದಿದೆ.
ದಾವಣಗೆರೆ ಗಡಿ ಭಾಗದಲ್ಲಿ ಭಾರೀ ಸ್ಫೋಟದ ಸದ್ದು

ಚಿಕ್ಕಮಲ್ಲನಹೊಳೆ ಗ್ರಾಮವು ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗಳ ಗಡಿಭಾಗದಲ್ಲಿರುವುದರಿಂದ, ಸ್ಫೋಟದ ಸದ್ದಿಗೆ ಗ್ರಾಮದ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.
ಈ ಘಟನೆಯ ಕುರಿತು ಜಗಳೂರು ತಹಸೀಲ್ದಾರ್ ಸಯ್ಯದ್ ಕಲೀಂವುಲ್ಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಕಡೆಯಿಂದ ಸ್ಫೋಟದ ಶಬ್ದದ ಅನುಭವ ಆಗಿರುವ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ.

ಆತಂಕ ಬೇಡ: ಗ್ರಾಮಸ್ಥರಿಗೆ ಧೈರ್ಯ ತುಂಬಿದ ತಹಸೀಲ್ದಾರ್
ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಹೇಳಿರುವ ತಹಸೀಲ್ದಾರ್ ಸಯ್ಯದ್ ಕಲೀಂವುಲ್ಲಾ ಅವರು, ತಕ್ಷಣವೇ ಸ್ಥಳಕ್ಕೆ ಗ್ರಾಮಲೆಕ್ಕಿಗರನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಗಳೂರು ತಾಲೂಕಿನ ಜನರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


