Vijayapura earthquake today: ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ 3.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಎರಡು ತಿಂಗಳಲ್ಲಿ ಇದು 13ನೇ ಬಾರಿಯ ಭೂಕಂಪನವಾಗಿದ್ದು, ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ವಿಜಯಪುರ, (ನ. 4): ಕಳೆದ ಎರಡು ತಿಂಗಳಲ್ಲಿ 13 ಬಾರಿ ಭೂಮಿ ಕಂಪಿಸಿದ್ದರೂ, ಇಂದು 7.45ರ ಸುಮಾರಿಗೆ ಮತ್ತೊಮ್ಮೆ ಭಾರೀ ಸ್ಫೋಟದ ಸದ್ದಿನೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ವಿಜಯಪುರ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆತಂಕ ಮೂಡಿಸಿದೆ.
ಹೌದು, ರಿಕ್ಟರ್ ಸ್ಕೇಲ್‌ನಲ್ಲಿ 3.1 ತೀವ್ರತೆಯ ಈ ಭೂಕಂಪನವು ವಿಜಯಪುರ ನಗರ ಹೊರತಾಗಿ ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ ಮತ್ತು ಹೊನ್ನೂಟಗಿ ಸೇರಿದಂತೆ ವಿಜಯಪುರ ಮತ್ತು ತಿಕೋಟ ತಾಲೂಕುಗಳಲ್ಲಿ ತೀವ್ರವಾಗಿ ಅನುಭವಕ್ಕೆ ಬಂದಿದೆ. ಭೂಮಿ ನಡುಗುತ್ತಿದ್ದಂತೆ ಮನೆಯಿಂದ ಭಯಭೀತರಾಗಿ ಜನರು ಹೊರಗೆ ಓಡಿಬಂದಿರುವದು ಸಿಸಿಟಿವಿಗಳಲ್ಲಿ ದಾಖಲಾಗಿದೆ.
ಸಿಸಿಟಿವಿ ಮತ್ತು ಆಪ್‌ಗಳಲ್ಲಿ ಸೆರೆಯಾದ ದೃಶ್ಯಗಳು:
ನಗರದ ವಿವಿಧ ಸ್ಥಳಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಭೂಮಿ ನಡುಗುವುದು ಸೆರೆಯಾಗಿದೆ. ಜೊತೆಗೆ, 'Earthquake Network' ಮತ್ತು 'QuakeFeed ಭೂಕಂಪನ ಆಪ್‌ಗಳಲ್ಲಿ 3.1 ರಿಕ್ಟರ್ ತೀವ್ರತೆಯ ದಾಖಲೆ ದಾಖಲಾಗಿದ್ದು, ತಕ್ಷಣ ತುರ್ತು ಸಂದೇಶಗಳು ಬಳಕೆದಾರರಿಗೆ ಬಂದಿವೆ.
ವಿಜಯಪುರದಲ್ಲಿ ಸರಣಿ ಭೂಕಂಪ, ಆತಂಕದಲ್ಲಿ ಜನರು
ಅಕ್ಟೋಬರ್‌ನಿಂದಲೇ ವಿಜಯಪುರದಲ್ಲಿ ಪದೇಪದೆ ಭೂಕಂಪ ಸಂಭವಿಸುತ್ತಿದೆ. ಈ ಪ್ರದೇಶದಲ್ಲಿ ಭೂಗರ್ಭಕ್ಕೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚುತ್ತಿವೆ. ಕಳೆದ ಎರಡು ತಿಂಗಳಲ್ಲಿ 13 ಬಾರಿ ಭೂಮಿ ಕಂಪಿಸಿದೆ. ಈಗಿನ ಭೂಕಂಪನವು ಇನ್ನಷ್ಟು ತೀವ್ರವಾಗಬಹುದು ಎಂಬ ಆತಂಕವು ಜನರಲ್ಲಿ ಹರಡಿದೆ.
