ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಆ.2ರಂದು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರ ಮಹತ್ವದ ಸಭೆ ನಡೆಯಲಿದೆ.
ಬೆಂಗಳೂರು (ಆ.1) : ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಆ.2ರಂದು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರ ಮಹತ್ವದ ಸಭೆ ನಡೆಯಲಿದೆ.
ಎರಡು ಹಂತದಲ್ಲಿ ಸಭೆ ನಡೆಯಲಿದ್ದು, ಎರಡೂ ಸಭೆಗಳ ಮುಖ್ಯ ವಿಚಾರ ಲೋಕಸಭೆ ಚುನಾವಣೆ(Loksabha election 2024) ಸಿದ್ಧತೆಯೇ ಆಗಿರಲಿದೆ. ಮೊದಲಿಗೆ ರಾಹುಲ್ ಗಾಂಧಿ(Rahul gandhi)ಅವರು ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah), ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, 15 ಮಂದಿ ಪ್ರಮುಖ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆ ರಣತಂತ್ರ; ನಾಳೆ ಸಚಿವ ಸಂತೋಷ್ ಲಾಡ್ ದೆಹಲಿಗೆ
ಈ ವೇಳೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿನ ಸಂಭವನೀಯರ ಬಗ್ಗೆ ಪ್ರಾಥಮಿಕ ಚರ್ಚೆ ನಡೆಯಲಿದೆ. ಯಾರಾರಯರು ಆಕಾಂಕ್ಷಿಗಳಿದ್ದಾರೆ ಹಾಗೂ ಅವರಿಗೆ ಪೂರಕ ವಾತಾವರಣ ಇದೆಯೇ ಎಂಬ ಬಗ್ಗೆ ಚರ್ಚೆಯಾಗಲಿದೆ. ಈ ವೇಳೆ ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳನ್ನು ಎಲ್ಲಾ ಸಮೀಕರಣಗಳನ್ನು ಪರಿಶೀಲಿಸಿ ಸಂಭವನೀಯರ ಪಟ್ಟಿಗೆ ಪರಿಗಣಿಸಬೇಕು ಎಂದು ಸೂಚಿಸುವ ಸಾಧ್ಯತೆಯಿದೆ. ಈ ಸಭೆ ಎರಡು ಗಂಟೆಗಳ ಕಾಲ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರೊಂದಿಗೆ ಸಭೆ:
ಬಳಿಕ ಎಲ್ಲಾ ಸಚಿವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ವೇಳೆ ಇಲಾಖಾವಾರು ಪ್ರಗತಿ ಬಗ್ಗೆ ಮೌಲ್ಯಮಾಪನ ನಡೆಯಲಿದೆ. ಇದೇ ವೇಳೆ ಶಾಸಕರ ಅಸಮಾಧಾನದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಸಚಿವರೂ ಎಲ್ಲಾ ರೀತಿಯಲ್ಲೂ ಬದ್ಧತೆಯಿಂದ ಕೆಲಸ ಮಾಡಬೇಕು. ಕ್ಷೇತ್ರದ ಜನರಲ್ಲಿ ಭರವಸೆ ಮೂಡಿಸಬೇಕು. ಗ್ಯಾರಂಟಿ ಯೋಜನೆಗಳ ಲಾಭ ಮತದ ರೂಪ ಪಡೆಯುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡುವ ಸಾಧ್ಯತೆಯಿದೆ.
ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ:
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಜನರ ಮನಸ್ಸು ಗೆದ್ದಿದೆ. ಸಮೀಕ್ಷೆಗಳ ಪ್ರಕಾರ ಸರ್ಕಾರ ಜನರ ಮನಸ್ಸು ಗೆದ್ದಿದೆ. ಹೀಗಾಗಿ ವಿರೋಧ ಪಕ್ಷಗಳು ಷಡ್ಯಂತ್ರ ನಡೆಸಿ ಭ್ರಷ್ಟಾಚಾರದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಲಿವೆ ಎಂಬ ಮಾಹಿತಿಗಳು ಬಂದಿವೆ. ಹೀಗಾಗಿ ಕಟ್ಟೆಚ್ಚರದಿಂದ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಎಚ್ಚರಿಸುವ ಸಾಧ್ಯತೆಯಿದೆ.
ಇನ್ನು ಇದೇ ವೇಳೆ ಹಾವೇರಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಗದಗದಿಂದ ಎಚ್.ಕೆ.ಪಾಟೀಲ್, ತುಮಕೂರಿನಿಂದ ಪರಮೇಶ್ವರ್ ಹೀಗೆ ಆಯಾ ಪ್ರದೇಶವಾರು ಪ್ರಮುಖ ನಾಯಕರೊಂದಿಗೆ ಸಂಬಂಧಪಟ್ಟಕ್ಷೇತ್ರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ. ಈ ಮೊದಲು ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಜು.17ರಂದೇ ರಾಜ್ಯ ಸಚಿವರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿತ್ತು. ಕೇರಳ ಮಾಜಿ ಮುಖ್ಯಮಂತ್ರಿಗಳ ನಿಧನದಿಂದ ಮುಂದೂಡಲಾಗಿತ್ತು.
ನಾಳೆ ದಿಲ್ಲಿಯಲ್ಲಿ ಕಾಂಗ್ರೆಸ್‌ನ 2 ಹೈವೋಲ್ಟೇಜ್ ಮೀಟಿಂಗ್
ಸಭೆ ನಂಬರ್ 1
- ಖರ್ಗೆ, ಸಿದ್ದು, ಡಿಕೆಶಿ ಸೇರಿ 15 ನಾಯಕರ ಜತೆ ರಾಹುಲ್ ಸಭೆ
- ಲೋಕಸಭೆ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪ್ರಾಥಮಿಕ ಚರ್ಚೆ
- ಆಕಾಂಕ್ಷಿಗಳು, ಪಕ್ಷಕ್ಕಿರುವ ಪೂರಕ ವಾತಾವರಣದ ಬಗ್ಗೆ ಮಾತುಕತೆ
- ಸುಮಾರು ಎರಡು ಗಂಟೆಗಳ ಕಾಲ ಈ ಸಭೆ ನಡೆಯುವ ಸಾಧ್ಯತೆ
ಸಭೆ ನಂಬರ್ 2
- ಇಲಾಖಾವಾರು ಪ್ರಗತಿ ಮೌಲ್ಯಮಾಪನಕ್ಕೆ ಸಚಿವರ ಜತೆ ರಾಹುಲ್ ಸಭೆ
- ಶಾಸಕರ ಅಸಮಾಧಾನದ ಕುರಿತಂತೆಯೂ ಸಭೆಯ ವೇಳೆ ಚರ್ಚೆ ಸಾಧ್ಯತೆ
- ಲೋಕಸಭೆಗೆ ಬದ್ಧತೆಯಿಂದ ಕೆಲಸ ಮಾಡಲು ಸಚಿವರಿಗೆ ಸೂಚನೆ ಸಂಭವ
- ಜನರಲ್ಲಿ ಭರವಸೆ ಮೂಡಿಸಿ, ಗ್ಯಾರಂಟಿ ಸ್ಕೀಂ ಲಾಭ ಪಡೆಯಲು ನಿರ್ದೇಶನ
ಬೇರೆ ದೇಶಗಳಿಗೆ ಅಕ್ಕಿ ಕೊಡುತ್ತೆ: ಇಲ್ಲಿನವರೇ ಕೇಳಿದ್ರೆ ಕೊಡೋದಿಲ್ಲ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ನಿಗಮ-ಮಂಡಳಿನೇಮಕಕ್ಕೆ ವೇಗ?
ಹೈಕಮಾಂಡ್ ಮಟ್ಟದಲ್ಲಿನ ಸಭೆ ಬಳಿಕ ರಾಜ್ಯದಲ್ಲಿ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ನೇಮಕಕ್ಕೂ ವೇಗ ದೊರೆಯಲಿದ್ದು, ಆಗಸ್ಟ್‌ನಲ್ಲಿ ನೇಮಕವಾಗುವ ಸಾಧ್ಯತೆಯಿದೆ. ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆಯನ್ನು 70:30 ಅನುಪಾತದಲ್ಲಿ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಪ್ರಮುಖ 20-22 ನಿಗಮ-ಮಂಡಳಿ ಹುದ್ದೆಗಳಿಗೆ ಶಾಸಕರು ಪೈಪೋಟಿ ನಡೆಸಿದ್ದು, ಕಾರ್ಯಕರ್ತರಿಗೆ ಹುದ್ದೆ ನೀಡುವ ಪ್ರಕ್ರಿಯೆಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಹೈಕಮಾಂಡ್ ಜತೆಗಿನ ಸಭೆ ಬಳಿಕ ಇದಕ್ಕೆ ವೇಗವಾಗಿ ಚಾಲನೆ ದೊರೆಯಲಿದೆ ಎಂದು ತಿಳಿದು ಬಂದಿದೆ.
