ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು, ಶಿವಮೊಗ್ಗ, ಧಾರವಾಡ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಸ್ಕಾಂ ಎಇಇ ಅರ್ಜುನ ಆರ್.ಹೆಚ್. ಮತ್ತು ಸರ್ವೇಯರ್ ಸೋಮಲಿಂಗಪ್ಪ ಅವರ ನಿವಾಸ, ಕಚೇರಿ ಹಾಗೂ ಫಾರ್ಮ್‌ ಹೌಸ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರು (ಫೆ.12): ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಮರ ಸಾರಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಶಿವಮೊಗ್ಗ, ಧಾರವಾಡ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಶಿವಮೊಗ್ಗದಲ್ಲಿ ಬೆಸ್ಕಾಂ ಎಇಇ ಅರ್ಜುನ ನಿವಾಸ, ಫಾರ್ಮ್‌ ಹೌಸ್ ಮೇಲೆ ದಾಳಿ

ಬೆಸ್ಕಾಂ ಸಿವಿಲ್ ವಿಭಾಗದ ಎಇಇ ಆಗಿರುವ ಅರ್ಜುನ ಆರ್.ಹೆಚ್. ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ವಿಜಯನಗರ ಮತ್ತು ಗೋಪಾಲಗೌಡ ಬಡಾವಣೆಯಲ್ಲಿರುವ ಅವರ ನಿವಾಸಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. 

ಇಷ್ಟೇ ಅಲ್ಲದೆ, ಸಾಗರ ತಾಲೂಕಿನ ಆನಂದಪುರ ಸಮೀಪದ ತಳಲೆ ಗ್ರಾಮದಲ್ಲಿರುವ ಅರ್ಜುನ ಅವರಿಗೆ ಸೇರಿದ 2.5 ಎಕರೆ ಮತ್ತು 4.5 ಎಕರೆ ವಿಸ್ತೀರ್ಣದ ಬೃಹತ್ ಫಾರ್ಮ್ ಹೌಸ್‌ಗಳ ಮೇಲೂ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್, ಇನ್ಸ್ಪೆಕ್ಟರ್‌ಗಳಾದ ಪ್ರಭು ಸೊರೇನ್ ಮತ್ತು ಗುರುರಾಜ್ ಮೈಲಾರಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಸರ್ವೇಯರ್ ಸೋಮಲಿಂಗಪ್ಪ ಮನೆ ಮೇಲೆ ಲೋಕಾ ದಾಳಿ

ಧಾರವಾಡದಲ್ಲಿ ಸರ್ವೇಯರ್ ಸೋಮಲಿಂಗಪ್ಪ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ. ಸರ್ವೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಧಾರವಾಡದ ಮುರಗೋಡ್ ನಿವಾಸ, ಭಾರತಿ ನಗರದ ನಿವಾಸ ಹಾಗೂ ಎಡಿಎಲ್‌ಆರ್ (ADLR) ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಆಸ್ತಿ ವಿವರಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ದಾವಣಗೆರೆ: ಎಇಇ ಅರ್ಜುನ ಆರ್‌ಎಚ್ ಕಚೇರಿ ಹಾಗೂ ಬಾಡಿಗೆ ರೂಮ್ ಮೇಲೆ ರೇಡ್

ಬೆಸ್ಕಾಂ ಎಇಇ ಅರ್ಜುನ ಆರ್‌ಎಚ್ ಅವರಿಗೆ ಸಂಬಂಧಿಸಿದ ದಾವಣಗೆರೆಯ ನೆಲೆಗಳ ಮೇಲೂ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾವಣಗೆರೆಯಲ್ಲಿರುವ ಅವರ ಕಚೇರಿ ಮತ್ತು ಮನೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ವಿಶೇಷವೆಂದರೆ, ಅರ್ಜುನ ಅವರು ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ಮಾಡಿಕೊಂಡಿದ್ದ ಬಾಡಿಗೆ ರೂಮ್ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ದಾವಣಗೆರೆ ಎರಡೂ ಕಡೆಗಳಲ್ಲಿ ಏಕಕಾಲಕ್ಕೆ ತಪಾಸಣೆ ನಡೆಯುತ್ತಿರುವುದು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

YouTube video player