ಬೆಂಗಳೂರು (ಮೇ.21): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮುಂದುವರಿದಿದ್ದು ಈ ನಿಟ್ಟಿನಲ್ಲಿ ಮುಂದಿನ ಎರಡು ವಾರ ಲಾಕ್ ಡೌನ್ ಮಾಡುವುದು ಬಹುತೇಕ ಖಚಿತವಾದಂತಾಗಿದೆ.

ವಿಧಾನಸೌಧದಲ್ಲಿಂದು ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ  ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆದಿದ್ದು, ಈ ಸಭೆಯಲ್ಲಿ ಒಮ್ಮತ ಅಭಿಪ್ರಾಯ ವ್ಯಕ್ತವಾಗಿದೆ. 

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ .

ವಿಪತ್ತು ನಿರ್ವಹಣಾ ಸಮಿತಿ ಯ ಅಧಿಕಾರಿಗಳು ರಾಜ್ಯದ ಸ್ಥಿತಿಗತಿಯ ಬಗ್ಗೆ ಗಂಭೀರ ಪ್ರಸ್ತಾಪ ಮಾಡಿದ್ದು, ರಾಜ್ಯದ ಭವಿಷ್ಯದ ದೃಷ್ಟಿಯಿಂದ 15 ದಿನ ಲಾಕ್ ಡೌನ್ ಬೇಕು ಎಂದು ಒತ್ತಾಯಿಸಿದ್ದಾರೆ.  

ಲಾಕ್ ಡೌನ್ ತೆರವಿನಿಂದ ನಗರ ಪ್ರದೇಶಗಳಲ್ಲಿ ಆತಂಕ ಉಂಟಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಸೋಂಕು ಪುನಃ ನಗರ ಪ್ರದೇಶಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಗ್ರಾಮೀಣ ಭಾಗದಿಂದ ನಗರಕ್ಕೆ ಜನರ ಮರು ವಲಸೆ ಆರಂಭಿಸುತ್ತಾರೆ. ವಲಸೆಯ ಬೆನ್ನಲ್ಲೇ ನಗರಕ್ಕೆ ಮತ್ತೆ ದಾಳಿ ಇಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ವಿಸ್ತೃತ ಪಿಪಿಟಿ ಮೂಲಕ ಸಭೆಗೆ ವಿಪತ್ತು ನಿರ್ವಹಣಾ ಸಮಿತಿ ಅಧಿಕಾರಿಗಳು ಗಂಭೀರ ವಿವರಣೆ ನೀಡಿದ್ದು,  ಸುದೀರ್ಘ ಸಮಾಲೋಚನೆ ಬಳಿಕ 15 ದಿನಗಳ ಲಾಕ್ ಡೌನ್ ಗೆ ಸಹಮತ ವ್ಯಕ್ತವಾಗಿದೆ.

ಈ ಬಗ್ಗೆ ಸಿಎಂ ಜೊತೆಗೆ ಸಮಾಲೋಚನೆ ಮಾಡುವುದಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ ಸಿಎಸ್ ರವಿಕುಮಾರ್  ಜೂನ್ 7 ರವರೆಗೆ ಲಾಕ್ ಡೌನ್ ಬಹುತೇಕ ಖಚಿತ ಎಂದು ಹೇಳಿದ್ದಾರೆ. 

ಇಂದು ಸಂಜೆ ಈ ಕುರಿತು ಅಧಿಕಾರಿಗಳು ನೀಡಿದ ಮಾಹಿತಿಯನ್ನು ಸಿಎಂ ಬಳಿ ಸಿಎಸ್ ರವಿಕುಮಾರ್  ಪ್ರಸ್ತಾಪಿಸಲಿದ್ದು, ಸಚಿವರ ಸಭೆಯಲ್ಲಿ ಸಾಧಕ ಭಾಧಕಗಳ ಬಗ್ಗೆ ಅಂತಿಮ ನಿರ್ಧಾರ ಸಾಧ್ಯತೆ ಇದೆ.  ಅಧಿಕಾರಿಗಳ ಮಾಹಿತಿಯನ್ನು ಕಾಯುತ್ತಿರುವ ಸಿಎಂ ಯಡಿಯೂರಪ್ಪ ಈ ಬಗ್ಗೆ ಸಚಿವರ ಸಭೆಯಲ್ಲಿ ತೀರ್ಮಾನಿಸುವುದಾಗಿ ಹೇಳಿದ್ದರು. ಇದೀಗ ಅಧಿಕಾರಿಗಳು ನಿರ್ಧಾರಕ್ಕೆ ಬಂದಿದ್ದು ಸಿಎಂ ಸಭೆ ಬಳಿಕ ಅಂತಿಮ ನಿರ್ಣಯ ಹೊರಬೀಳಲಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona