ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್
* ಅನಗತ್ಯವಾಗಿ ರಸ್ತೆಗಿಳಿವ ವಾಹನ ಜಪ್ತಿ ಮಾಡಿ
* ಸಂಪೂರ್ಣ ಲಾಕ್‌ಡೌನ್ ಯಶಸ್ವಿಯಾಗಿದ್ದು ಬಿಕೋ ಎನ್ನುತ್ತಿರುವ ರಸ್ತೆಗಳು
* ರಾಜ್ಯಕ್ಕೆ ಎದುರಾಗಿರುವ ಗಂಭೀರ ಪರಿಸ್ಥಿತಿಯೂ ಜನರಿಗೆ ಅರ್ಥವಾಗುತ್ತಿಲ್ಲ
ಬೆಂಗಳೂರು(ಮೇ.21): ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಹೇರಿರುವ ಸೆಮಿ ಲಾಕ್‌ಡೌನ್ ಅಷ್ಟೊಂದು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಬಿಗಿ ಲಾಕ್‌ಡೌನ್ ಘೋಷಿಸಲಾಗಿದೆ.
ಕೊಪ್ಪಳ, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಚಾಮರಾಜನಗರದಲ್ಲಿ ಈಗಾಗಲೇ ಲಾಕ್‌ಡೌನ್ ಘೋಷಿಸಲಾಗಿದೆ. ಇನ್ನು ಕೋಲಾರ, ಹಾವೇರಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಲಾಕ್‌ಡೌನ್ ಘೋಷಿಸಿ ಅಲ್ಲಿಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
"
ಕೊಪ್ಪಳದಲ್ಲಿ ಮೇ 17ರಿಂದ, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಮೇ 19ರಿಂದಲೇ ಲಾಕ್‌ಡೌನ್ ಇದ್ದು, ಗುರುವಾರವೂ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಕೋಲಾರ, ಹಾವೇರಿಯಲ್ಲಿ ಶುಕ್ರವಾರದಿಂದ ನಾಲ್ಕು ದಿನ ಹಾಗೂ ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರದಿಂದ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಕೊಂಚ ಸಮಾಧಾನ : ಕೋವಿಡ್ ಪಾಸಿಟಿಟಿವಿಟಿ 303 ಜಿಲ್ಲೆಗಳಲ್ಲಿ ಇಳಿಕೆ
ಹಾಸನ, ಬಳ್ಳಾರಿ, ಚಾಮರಾಜನಗರ, ಕೊಪ್ಪಳದಲ್ಲಿ ಅಗತ್ಯ ವಸ್ತು ಖರೀದಿಗೂ ಅವಕಾಶವಿಲ್ಲ. ಧಾರಾವಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗುರುವಾರ ಅಗತ್ಯ ಖರೀದಿ ಭರಾಟೆ ಜೋರಾಗಿಯೇ ಇತ್ತು. ಹಾವೇರಿ ಜಿಲ್ಲೆಯಲ್ಲಿ ಜನಜಾತ್ರೆಯೇ ಸೇರಿತ್ತು. ಇನ್ನು ನಾಲ್ಕು ದಿನ ಖರೀದಿಗೆ ಅವಕಾಶವಿಲ್ಲದಿರುವ ಹಿನ್ನೆಲೆಯಲ್ಲಿ ಜನ ಮುಂಜಾನೆಯೇ ಎದ್ದು ಅಗತ್ಯ ಖರೀದಿಗೆ ಮುಂದಾಗಿದ್ದರು.
ಅನಗತ್ಯವಾಗಿ ರಸ್ತೆಗಿಳಿವ ವಾಹನ ಜಪ್ತಿ ಮಾಡಿ: ಬೊಮ್ಮಾಯಿ
ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನಾ ಸೋಂಕು ವ್ಯಾಪಕ ಹರಡುವಿಕೆ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಸೆಮಿ ಲಾಕ್‌ಡೌನ್ ನಿಯಮಗಳನ್ನು ಮತ್ತಷ್ಟುಕಠಿಣವಾಗಿ ಕಾರ್ಯರೂಪಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಹಳ್ಳಿ ಹಳ್ಳಿಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರೂ ಲಾಕ್‌ಡೌನ್ ನಿಯಮಗಳನ್ನು ಜನರು ಮಾತ್ರ ಸರಿಯಾಗಿ ಪಾಲಿಸುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಸೆಮಿ ಲಾಕ್‌ಡೌನ್ ನಿಯಮ ಇನ್ನಷ್ಟು ಕಠಿಣ
ಕಾನೂನು ಉಲ್ಲಂಘಿಸಿ ರಸ್ತೆಗಿಳಿಯುವ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗ್ರಾಮಾಂತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳು ಮೂರ್ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್ ಮಾಡಿದ್ದಾರೆ. ಹೀಗಿದ್ದರೂ ಪ್ರಸುತ್ತ ರಾಜ್ಯಕ್ಕೆ ಎದುರಾಗಿರುವ ಗಂಭೀರ ಪರಿಸ್ಥಿತಿಯೂ ಜನರಿಗೆ ಅರ್ಥವಾಗುತ್ತಿಲ್ಲ. ಸರ್ಕಾರವು ಯಾವ ಕಾರಣಕ್ಕೆ ಸೆಮಿ ಲಾಕ್‌ಡೌನ್ ಜಾರಿಗೊಳಿಸಿದೆ ಎಂಬುದನ್ನು ನಾಗರಿಕರು ಅರಿತುಕೊಳ್ಳದಿದ್ದರೆ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದರು. ತುರ್ತು ಅಗತ್ಯವಾದ ಆಸ್ಪತ್ರೆ, ವೈದ್ಯಕೀಯ ಸೇವೆಯಂತಹ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಬರಬಹುದಾಗಿದೆ. ಇದು ಯಶಸ್ವಿಯಾಗಿದ್ದು ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.