ಬೇಸಿಗೆ ಆರಂಭದಲ್ಲೇ ಬತ್ತಿದ ಕೊಡಗಿನ ಕಾವೇರಿ, ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ!
ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗುವಷ್ಟು ಮಳೆ ಸುರಿಯುತ್ತದೆ. ಇಷ್ಟು ಮಳೆ ಸುರಿದರು ಬೇಸಿಗೆ ಆರಂಭದ ದಿನಗಳಲ್ಲಿಯೇ ಜೀವನದಿಯ ಒಡಲು ಬರಿದಾಗುತ್ತಿದೆ. ಇದು ಅಚ್ಚರಿ ಎನಿಸಿದರು ಸತ್ಯ.
ವರದಿ: ರವಿ. ಎಸ್ ಹಳ್ಳಿ ಎಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.8): ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗುವಷ್ಟು ಮಳೆ ಸುರಿಯುತ್ತದೆ. ಇಷ್ಟು ಮಳೆ ಸುರಿದರು ಬೇಸಿಗೆ ಆರಂಭದ ದಿನಗಳಲ್ಲಿಯೇ ಜೀವನದಿಯ ಒಡಲು ಬರಿದಾಗುತ್ತಿದೆ. ಇದು ಅಚ್ಚರಿ ಎನಿಸಿದರು ಸತ್ಯ. ಹಾಗಾದರೆ ಕಾವೇರಿಯ ಒಡಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಒಮ್ಮೆ ಈ ವರದಿ ಓದಲೇಬೇಕು. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹಲವು ರಾಜ್ಯಗಳಲ್ಲಿ ಹರಿದು ಕೋಟಿ, ಕೋಟಿ ರೈತರ ಬದುಕನ್ನು ಹಸಿರಾಗಿಸಿರುವ ನಾಡಿನ ಜೀವನದಿ ಕಾವೇರಿ, ಕೋಟ್ಯಂತರ ಜನರ ಜೀವ ಜಲದ ಮೂಲವೂ ಹೌದು. ಮಳೆಗಾಲದಲ್ಲಿ ಮೈದುಂಬಿ ಬೋರ್ಗರೆದು, ಪ್ರವಾಹವನ್ನೇ ಸೃಷ್ಟಿಸುತ್ತಾಳೆ. ಆದರೆ ಈ ಬಾರಿ ಅದೇಕೋ ಬೇಸಿಗೆ ದಿನಗಳು ಈಗಷ್ಟೇ ಆರಂಭವಾಗಿದ್ದು, ಕಾವೇರಿ ನದಿ ಸಂಪೂರ್ಣ ಬತ್ತಿ ಹೋಗುತ್ತಿದ್ದಾಳೆ. ಅದು ಎಷ್ಟರ ಮಟ್ಟಿಗೆ ಎಂದರೆ ತಗ್ಗು ಪ್ರದೇಶಗಳಲ್ಲಿ ಮಾತ್ರವೇ ಅಲ್ಲಲ್ಲಿ ಒಂದಷ್ಟು ನೀರು ನಿಂತಿದ್ದರೆ, ಉಳಿದೆಡೆ ಒರತೆಯಿಂದ ಹರಿಯುವ ರೀತಿಯಲ್ಲಿ ಸ್ವಲ್ಪವೇ ಹರಿಯುತ್ತಿದೆ.
ಕೆಲವು ಕಡೆಗಳಲ್ಲಂತೂ ನೀರೇ ಕಾಣಿಸದೆ ಬರೀ ಕಲ್ಲು ಬಂಡೆಗಳು ಕಾಣಿಸುತ್ತಿವೆ. ಸಣ್ಣದಾಗಿ ಹರಿಯುತ್ತಿರುವ ನೀರಿನಲ್ಲಿ ಸಣ್ಣ ಸಣ್ಣ ಮೀನು, ಕಪ್ಪೆಗಳು ಸೇರಿದಂತೆ ಸಾವಿರಾರು ಜಲಚರಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಅಲ್ಲಲ್ಲಿ ನಿಂತಿರುವ ನೀರಿನಲ್ಲಿ ಪಕ್ಷಿಗಳು ಆಹಾರ ಹುಡುಕಿಕೊಳ್ಳುತ್ತಿವೆ. ಇದು ಜಲಚರಗಳ ಪರಿಸ್ಥಿತಿಯಾದರೆ, ಕಾವೇರಿ ನದಿಯ ನೀರನ್ನೇ ಅವಲಂಬಿಸಿರುವ ಪಟ್ಟಣಗಳ ಜನರಿಗೂ ಕುಡಿಯುವ ನೀರಿಗೆ ಆಹಾಕಾರ ಎದುರಾಗುವ ದುಃಸ್ಥಿತಿ ಎದುರಾಗುತ್ತಿದೆ. ಇನ್ನೂ ಮೂರು ತಿಂಗಳ ಕಾಲ ಬಿರು ಬೇಸಿಗೆ ಇರಲಿದ್ದು, ಈಗಾಗಲೇ ಬತ್ತಿ ಹೋಗುತ್ತಿರುವ ಕಾವೇರಿ ನದಿ ಆ ಬೇಸಿಗೆಯಲ್ಲಿ ಯಾವ ದುಃಸ್ಥಿತಿ ಎದುರಾಗುವುದೋ ಗೊತ್ತಿಲ್ಲ. ಕುಶಾಲನಗರ, ಮುಳ್ಳುಸೋಗೆ, ಹೆಬ್ಬಾಲೆ, ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿಗೆ ಈಗಾಗಲೇ ಸಮಸ್ಯೆ ಎದುರಾಗಿದೆ.
Kodagu: ಸಚಿವರೊಬ್ಬರ ಬೇನಾಮಿ ತೋಟದಲ್ಲಿ ನಿರ್ಮಾಣವಾಗುವ ರೆಸಾರ್ಟ್‌ಗಾಗಿ ಎರಡೆರಡು ಕಿಂಡಿ ಅಣೆಕಟ್ಟು!
ಇದುವರೆಗೆ ನಿತ್ಯ ನೀರು ಪೂರೈಸುತ್ತಿದ್ದ ಜಲಮಂಡಳಿ, ಈಗ ವಾರದಲ್ಲಿ ಮೂರು ದಿನಗಳು ನೀರು ಪೂರೈಸುತ್ತಿದೆ ಎಂದು ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಕೃಷ್ಣ ಆತಂಕ ವ್ಯಕ್ತಪಡಿಸಿದುತ್ತಿದ್ದಾರೆ. ಒಂದೆಡೆ ಕಾವೇರಿ ನದಿ ಒಡಲು ಖಾಲಿ ಆಗುತ್ತಿದ್ದರೆ, ಕಾವೇರಿ ನದಿಯನ್ನು ಅವಲಂಬಿಸಿ ನಿತ್ಯ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು ಅಷ್ಟೇ ಅಲ್ಲ ಕುಡಿಯುವುದಕ್ಕೂ ಇದೇ ನೀರನ್ನು ಬಳಸುತ್ತಿದ್ದ ಜನರು ಇದೀಗ ಬಟ್ಟೆ ತೊಳೆಯುವುದಕ್ಕೂ ನದಿಯಲ್ಲಿ ಸರಿಯಾದ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಅಷ್ಟಕ್ಕೂ ಮಳೆಗಾಲದಲ್ಲಿ ಅಷ್ಟೊಂದು ತುಂಬಿ ಭೋರ್ಗರೆದು ಹರಿಯುವ ಕಾವೇರಿ ನದಿಯಲ್ಲಿ ಬೇಸಿಗೆಯ ಆರಂಭದಲ್ಲಿಯೇ ಇಷ್ಟು ಪ್ರಮಾಣದಲ್ಲಿ ನೀರು ಕಡಿಮೆ ಆಗುವುದಕ್ಕೂ ದೊಡ್ಡ ಕಾರಣಗಳಿವೆ ಎನ್ನುವುದು ಪರಿಸರ ಪ್ರೇಮಿಗಳ ಆತಂಕ. ಜಿಲ್ಲೆಯಲ್ಲಿ ನಿರಂತರವಾಗಿ ಪರಿಸರ ನಾಶವಾಗುತ್ತಿದೆ.
ಕುಲದೇವಿ ಕಾವೇರಿಗೆ ಅಪಮಾನಿಸಿದ ಕುಟುಂಬಸ್ಥರಿಗೆ ಮತ ಹಾಕ್ತೀರಾ: ಅಪ್ಪಚ್ಚು ರಂಜನ್ ಪ್ರಶ್ನೆ
ಜೊತೆಗೆ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಕಾಡು ವಿನಾಶದಿಂದ ಜಿಲ್ಲೆಯಲ್ಲಿ ಅಷ್ಟೊಂದು ಮಳೆ ಸುರಿದರೂ ಬೇಸಿಗೆ ಆರಂಭದ ದಿನಗಳಲ್ಲಿಯೇ ನದಿಯಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗುತ್ತಿದೆ. ಇದರಿಂದ ಜಿಲ್ಲೆ ಅಷ್ಟೇ ಅಲ್ಲ, ಕಾವೇರಿ ನದಿ ನೀರನ್ನೇ ಅವಲಂಬಿಸಿರುವ, ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳು ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ಪರಿಸರ ಪ್ರೇಮಿ ಬಾರವಿ ಕನ್ನಡ ಸಂಘದ ಮುಖಂಡ ರವೀಂದ್ರ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿಯುವ ಕಾವೇರಿ ನದಿಯು ತವರು ಜಿಲ್ಲೆಯಲ್ಲಿಯೇ ಒಡಲು ಖಾಲಿ, ಖಾಲಿ ಆಗುತ್ತಿರುವುದುದು ಆತಂಕ ತಂದೊಡ್ಡಿರುವುದಂತು ಸತ್ಯ.