ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ; ಸಿಸಿಬಿ ತನಿಖೆ ಶುರು!
ನಾಡಿನ ಪ್ರಮುಖ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಪ್ರಕರಣ ಸಂಬಂಧ ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ ನವೀನ್ ಕುಲಕರ್ಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಬೆಂಗಳೂರು (ಆ.29): ನಾಡಿನ ಪ್ರಮುಖ ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಪ್ರಕರಣ ಸಂಬಂಧ ಸಿಸಿಬಿ ವಿಶೇಷ ವಿಚಾರಣಾ ದಳದ ಎಸಿಪಿ ನವೀನ್ ಕುಲಕರ್ಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಇತ್ತೀಚೆಗೆ ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣ(life threat case)ದ ಕುರಿತು ಸಿಸಿಬಿ ತನಿಖೆಗೆ ಡಿಜಿಪಿ ಅಲೋಕ್ ಮೋಹನ್(DGP Alok mohan IPS) ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಎಸಿಪಿ ನವೀನ್ ಕುಲಕರ್ಣಿ ಅವರನ್ನು ತನಿಖಾಧಿಕಾರಿಯಾಗಿ ನಗರ ಜಂಟಿ ಆಯುಕ್ತ (ಅಪರಾಧ) ಡಾ.ಎಸ್.ಡಿ.ಶರಣಪ್ಪ ನೇಮಿಸಿದ್ದಾರೆ.
ಸಾಹಿತಿಗಳಿಗೆ ಬೆದರಿಕೆ ಬಗ್ಗೆ ಸೂಕ್ತ ತನಿಖೆ: ಸಿಎಂ ಸಿದ್ದರಾಮಯ್ಯ
ಖ್ಯಾತ ಸಾಹಿತಿಗಳಾದ ಕುಂ.ವೀರಭದ್ರಪ್ಪ, ಬಿ.ಎಲ್.ವೇಣು, ಬಂಜಗೆರೆ ಜಯಪ್ರಕಾಶ್, ಬಿ.ಟಿ.ಲಲಿತಾ ನಾಯಕ್ ಹಾಗೂ ವಸುಂಧರಾ ಭೂಪತಿ ಅವರಿಗೆ ಬೆದರಿಕೆ ಪತ್ರಗಳ ಬಂದಿದ್ದವು. ಈ ಬಗ್ಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಜೀವ ಬೆದರಿಕೆಕ್ಕೊಳಗಾಗಿದ್ದ ಸಾಹಿತಿಗಳನ್ನು ಸಿಸಿಬಿ ಪೊಲೀಸರು ಭೇಟಿಯಾಗಿ ಹೇಳಿಕೆ ಪಡೆಯಲಿದ್ದಾರೆ. ಈ ವೇಳೆ ಯಾರ ಮೇಲಾದರೂ ಸಾಹಿತಿಗಳ ಶಂಕೆ ವ್ಯಕ್ತಪಡಿಸಿದರೆ ಆ ವ್ಯಕ್ತಿಗಳನ್ನು ಕರೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಸಿಸಿಬಿಗೆ ಕಡತಗಳು ವರ್ಗಾವಣೆ:
ಇನ್ನು ಈ ಕೃತ್ಯ ಸಂಬಂಧ ರಾಜ್ಯದ ವಿವಿಧೆಡೆ ದಾಖಲಾಗಿದ್ದ ಪ್ರಕರಣಗಳನ್ನು ಸಿಸಿಬಿಗೆ ಸ್ಥಳೀಯ ಪೊಲೀಸರು ಹಸ್ತಾಂತರಿಸಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರು ಠಾಣೆಯಲ್ಲಿ ಕುಂ.ವೀರಭದ್ರಪ್ಪ, ಚಿತ್ರದುರ್ಗ ನಗರದ ಹೊಸಬಡಾವಣೆ ಠಾಣೆಯಲ್ಲಿ ಬಿ.ಎಲ್.ವೇಣು, ರಾಮನಗರ ಜಿಲ್ಲೆ ಹಾರೋಹಳ್ಳಿ ಠಾಣೆಯಲ್ಲಿ ಬಂಜಗೆರೆ ಜಯಪ್ರಕಾಶ್ ಹಾಗೂ ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ಲಲಿತಾ ನಾಯಕ್ ಮತ್ತು ಬಸವೇಶ್ವರ ನಗರ ಠಾಣೆಯಲ್ಲಿ ವಸುಂಧರ ಭೂಪತಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದವು.
ಕಳೆದ ವರ್ಷದಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಸಾಹಿತಿಗಳಿಂದ ಸರ್ಕಾರಕ್ಕೆ ಮೊರೆ!
ಈ ಎಫ್‌ಐಆರ್‌ಗಳು ಸೇರಿದಂತೆ ಇದುವರೆಗೆ ನಡೆದಿದ್ದ ತನಿಖೆಯಲ್ಲಿ ಸಂಗ್ರಹಿಸಿದ್ದ ಪುರಾವೆಗಳ ಕಡತಗಳನ್ನು ಸಿಸಿಬಿಗೆ ಪೊಲೀಸರು ವರ್ಗಾಯಿಸಿದ್ದಾರೆ.