ರಾಜ್ಯದ ಹಲವು ಲೇಖಕರು, ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಜೀವ ಬೆದರಿಕೆ ಪತ್ರ ಬರುತ್ತಿದ್ದು ರಕ್ಷಣೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ.

ಬೆಂಗಳೂರು (ಆ.18) :  ರಾಜ್ಯದ ಹಲವು ಲೇಖಕರು, ಸಾಹಿತಿಗಳಿಗೆ ಕಳೆದ ಒಂದು ವರ್ಷದಿಂದ ಜೀವ ಬೆದರಿಕೆ ಪತ್ರ ಬರುತ್ತಿದ್ದು ರಕ್ಷಣೆ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. ಚಿಂತಕ ಪ್ರೊ.ಕಲ್ರ್ಬುಗಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ಬಳಿಕ ಈಗ ಪುನಃ ಕೋಮುವಾದ, ಜಾತಿವಾದ, ಮೌಢ್ಯ ವಿರೋಧಿಸುವ ಲೇಖಕರು, ಬುದ್ಧಿ ಜೀವಿಗಳಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದಿರುವ ಸಾಹಿತಿಗಳು ಭೇಟಿಗೆ ಅವಕಾಶ ನೀಡಬೇಕು, ಸೂಕ್ತ ರಕ್ಷಣೆ ನೀಡಬೇಕು, ಬೆದರಿಕೆ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ.19 ರಂದು ಸಾಹಿತಿಗಳ ನಿಯೋಗದ ಭೇಟಿಗೆ ಪರಮೇಶ್ವರ್‌ ಅವರು ಸಮಯಾವಕಾಶ ನೀಡಿದ್ದಾರೆ.

ನಾವು ಸಂವಿಧಾನದ ಬಲದಲ್ಲಿದ್ದೀವಾ, ನೆರಳಲ್ಲಿದ್ದೀವಾ ಎಂಬ ಅರಿವು ಅಗತ್ಯ: ಹಂಸಲೇಖ

ಒಂದು ಗುಂಪಿನ ಕೆಲಸ:

ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ(Pro K marulasiddappa), ಕಳೆದ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿವೆ. ಗೌರಿ ಲಂಕೇಶ್‌, ಕಲ್ಬುರ್ಗಿ ಅವರಿಗಾದಂತೆ(ಹತ್ಯೆ) ನಿಮಗೂ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಯಾರೋ ಒಬ್ಬರೆ ಸರಣಿ ಪತ್ರಗಳನ್ನು ಬರೆಯುತ್ತಿದ್ದಾರೆ. ಇದರ ಹಿಂದೆ ಒಂದು ಗುಂಪು ಕೆಲಸ ಮಾಡುತ್ತಿದೆ ಎಂದರು. ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಹಿಂದಿನ ಸರ್ಕಾರವಿದ್ದಾಗಲೂ ಜೀವ ಬೆದರಿಕೆ ಪತ್ರಗಳು ಬರುತ್ತಿದ್ದವು. ಈಗಲೂ ಅದು ಮುಂದುವರೆದಿದೆ. ಸರ್ಕಾರ ಪೊಲೀಸ್‌ ಭದ್ರತೆ ನೀಡುತ್ತೇವೆ ಎಂದಾಗ ನಿರಾಕರಿಸಿದ್ದೆ. ಈ ರೀತಿ ಬೆದರಿಕೆ ಹಾಕುವುದಕ್ಕೆ ಅಂತ್ಯ ಹಾಡಬೇಕಿದೆ ಎಂದು ಒತ್ತಾಯಿಸಿದರು.

ಚಂದ್ರಯಾನ-3 ಯಶಸ್ವಿಗೆ ತಿರುಪತಿ ತಿಮ್ಮಪ್ಪನ ದರ್ಶನ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಸಾಹಿತಿಗಳು ಖಂಡನೆ

ಭದ್ರತೆಗೆ ಸೂಚನೆ

ಸಾಹಿತಿಗಳಿಗೆ ಯಾರು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿಲ್ಲ. ಸಾಹಿತಿಗಳಿಗೆ ರಕ್ಷಣೆ ನೀಡಲು ಈಗಾಗಲೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ನಗರ ಪೊಲೀಸ್‌ ಆಯುಕ್ತರಿಗೂ ಸೂಚನೆ ನೀಡಿದ್ದೇನೆ.

ಡಾ.ಜಿ.ಪರಮೇಶ್ವರ್‌, ಗೃಹ ಸಚಿವ