ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜತೆಗೆ ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು(ಆ.24): ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಹಿರಿಯ ಸಾಹಿತಿಗಳೊಂದಿಗೆ ಸಭೆ ನಡೆಸಿ ಹಲವು ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದಿರುವ ಕುರಿತಂತೆ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ ಬರೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜತೆಗೆ ಎಲ್ಲ ಆಯಾಮದಲ್ಲೂ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳಿಗೆ ಗನ್‌ಮ್ಯಾನ್: ಗೃಹ ಸಚಿವ ಪರಮೇಶ್ವರ
ಈ ವೇಳೆ ಬಹುತೇಕ ಸಾಹಿತಿಗಳು ಲೇಖಕಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ ಗುಂಪೇ ಈ ರೀತಿ ಬೆದರಿಕೆಯೊಡ್ಡುತ್ತಿದೆ ಎಂಬ ಅನುಮಾನವಿದೆ. ಹೀಗಾಗಿ ಬಂಧನದಲ್ಲಿರುವ ಗುಂಪನ್ನು ವಿಚಾರಣೆ ನಡೆಸಿದರೆ ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ, ಈ ಕುರಿತು ಸಂಬಂಧಪಟ್ಟಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಶಿಕ್ಷಣ ನೀತಿ ಬಗ್ಗೆ ಚರ್ಚೆ:
ನಂತರ ರಾಜ್ಯದಲ್ಲಿ ನೂತನವಾಗಿ ರಚಿಸಲಾಗುವ ರಾಜ್ಯ ಶಿಕ್ಷಣ ನೀತಿ ಕುರಿತು ಚರ್ಚಿಸಲಾಗಿದ್ದು, ಶಿಕ್ಷಣ ನೀತಿ ಯಾವ ಸ್ವರೂಪದಲ್ಲಿರಬೇಕು? ಅದರ ಉದ್ದೇಶ ಏನಿರಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಸಾಹಿತಿಗಳಿಂದ ಸಲಹೆಗಳನ್ನು ಪಡೆದರು. ಈ ವೇಳೆ ವ್ಯಕ್ತವಾದ ಅಭಿಪ್ರಾಯವನ್ನು ಶಿಕ್ಷಣ ತಜ್ಞರಿಗೆ ತಿಳಿಸಿ, ಎಸ್‌ಇಪಿ ರಚನೆ ವೇಳೆ ಪರಿಗಣಿಸುವಂತೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಹಿರಿಯ ಸಾಹಿತಿಗಳಾದ ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ವಿಜಯಮ್ಮ, ದಿನೇಶ್ ಅಮೀನ್‌ಮಟ್ಟು, ಎಲ್.ಎನ್. ಮುಕುಂದರಾಜ್, ರುದ್ರಪ್ಪ ಹನಗವಾಡಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಇತರರಿದ್ದರು.
