ಸೂರಜ್ ರೇವಣ್ಣ ಅವರ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಈ ಹಿಂದೆ ಎಸ್‌ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ ಮರುತನಿಖೆಗೆ ಆದೇಶಿಸಿದ್ದ ನ್ಯಾಯಾಲಯ.

ಬೆಂಗಳೂರು: ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ನ್ಯಾಯಾಲಯದಿಂದ ಮತ್ತೊಂದು ಹಿನ್ನಡೆ ಎದುರಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಸೂರಜ್‌ ರೇವಣ್ಣ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಅರ್ಜಿಯನ್ನು ತಿರಸ್ಕರಿಸಿ ಆದೇಶ ಪ್ರಕಟಿಸಿದರು. ಈ ಆದೇಶದೊಂದಿಗೆ ಸೂರಜ್‌ ರೇವಣ್ಣ ಅವರಿಗೆ ಮುಂದಿನ ಹಂತದ ಕಾನೂನು ಹೋರಾಟ ಅನಿವಾರ್ಯವಾಗಿದೆ.

ಈ ಪ್ರಕರಣದ ಹಿನ್ನೆಲೆಯಾಗಿ, ಜೆಡಿಎಸ್ ಕಾರ್ಯಕರ್ತನೊಬ್ಬರು ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಸಂಬಂಧ 2024ರ ಜೂನ್‌ 22ರಂದು ಹೊಳೆನರಸೀಪುರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಜೂನ್‌ 23ರಂದು ಸೂರಜ್‌ ರೇವಣ್ಣ ಅವರನ್ನು ಬಂಧಿಸಿದ್ದರು. ಬಂಧನದ ಬಳಿಕ ಅವರು ಸುಮಾರು ಒಂದು ತಿಂಗಳ ಕಾಲ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

ಪ್ರತಿದೂರು ಮತ್ತು ಎಸ್‌ಐಟಿ ತನಿಖೆ

ಈ ನಡುವೆ ಸೂರಜ್‌ ರೇವಣ್ಣ ಅವರ ಆಪ್ತ ಶಿವಕುಮಾರ್‌ ಅವರು ದೂರುದಾರನ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ಸಂತ್ರಸ್ತನೆಂದು ಹೇಳಿಕೊಂಡ ವ್ಯಕ್ತಿ ಐದು ಕೋಟಿ ರೂಪಾಯಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಹಣ ನೀಡಲು ನಿರಾಕರಿಸಿದ ಕಾರಣ ಸೂರಜ್‌ ರೇವಣ್ಣ ವಿರುದ್ಧ ಸುಳ್ಳು ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ ಎಂದು ಪ್ರತಿದೂರಿನಲ್ಲಿ ಆರೋಪಿಸಿದ್ದರು. ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆಗೆ ಆದೇಶಿಸಿತು. ಎಸ್‌ಐಟಿ ತನಿಖೆ ನಡೆಸಿ, ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಉಲ್ಲೇಖಿಸಿ 2025ರ ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿತು.

‘ಬಿ’ ರಿಪೋರ್ಟ್‌ ತಿರಸ್ಕಾರ, ಮರುತನಿಖೆ ಆದೇಶ

ಆದರೆ ನ್ಯಾಯಾಲಯವು ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ನ್ನು ತಿರಸ್ಕರಿಸಿ, ಪ್ರಕರಣದ ಮರುತನಿಖೆಗೆ ಆದೇಶಿಸಿತು. ಈ ಬೆಳವಣಿಗೆಯ ನಡುವೆಯೇ ಸೂರಜ್‌ ರೇವಣ್ಣ ಅವರು ಈ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕು ಎಂದು ಕೋರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಆ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿರುವುದರಿಂದ, ಪ್ರಕರಣದ ವಿಚಾರಣೆ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಈ ತೀರ್ಪು ಸೂರಜ್‌ ರೇವಣ್ಣ ಅವರಿಗೆ ಕಾನೂನು ಮಟ್ಟದಲ್ಲಿ ಮಹತ್ವದ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಅವರು ಉಚ್ಚ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳ ಕುರಿತು ಚರ್ಚೆಗಳು ಆರಂಭವಾಗಿವೆ.