ಪೆನ್‌ಡ್ರೈವ್ ಹಂಚಿ ಸಂಸದರಾಗಿದ್ದೀರಿ, ಹಾಸನಕ್ಕೆ ನಿಮ್ಮ ಕೊಡುಗೆ ಏನು?: ಶ್ರೇಯಸ್ ವಿರುದ್ಧ ಸೂರಜ್‌ ರೇವಣ್ಣ ವಾಗ್ದಾಳಿ

ಸಂಸದನಾಗಿ ಆರು ತಿಂಗಳಾಗಿದ್ದು, ಈವರೆಗೆ ಏನೇನು ಕೆಲಸ ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಅದನ್ನು ಬಿಟ್ಟು ಅವರಿಗೆ ಬುದ್ಧಿಭ್ರಮಣೆ ಆದವರಂತೆ ಮಾತನಾಡುತ್ತಿದ್ದಾರೆ. ಸಂಸದರಿಗೆ ಮಾಹಿತಿ ಕೊರತೆ ಇರಬೇಕು. ನಾನು ಮಾಡಿರುವ ಕೆಲಸ ಕಣ್ಣೆದುರು ಇದೆ: ಎಂಎಲ್‌ಸಿ ಸೂರಜ್‌ ರೇವಣ್ಣ 
 

JDS MLC Suraj Revanna slams Hassan Congress MP Shreyas Patel grg

ಹಾಸನ(ಜ.09):  ಜಿಲ್ಲೆಯ ಸಂಸದರು ದೆಹಲಿಯಲ್ಲಿ ಸಚಿವರಿಗೆ ಕೇವಲ ಮನವಿ ಪತ್ರ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟು ನಮ್ಮಂತೆ ಕೆಲಸ ಮಾಡಿ ತೋರಿಸಲಿ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ವಿರುದ್ಧ ಎಂಎಲ್‌ಸಿ ಡಾ. ಸೂರಜ್‌ ರೇವಣ್ಣ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಂಸದನಾಗಿ ಆರು ತಿಂಗಳಾಗಿದ್ದು, ಈವರೆಗೆ ಏನೇನು ಕೆಲಸ ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಅದನ್ನು ಬಿಟ್ಟು ಅವರಿಗೆ ಬುದ್ಧಿಭ್ರಮಣೆ ಆದವರಂತೆ ಮಾತನಾಡುತ್ತಿದ್ದಾರೆ. ಸಂಸದರಿಗೆ ಮಾಹಿತಿ ಕೊರತೆ ಇರಬೇಕು. ನಾನು ಮಾಡಿರುವ ಕೆಲಸ ಕಣ್ಣೆದುರು ಇದೆ. ಕೇವಲ ಒಂದು ಕ್ಷೇತ್ರಕ್ಕೆ ನಾನು ಹಣ ನೀಡಿಲ್ಲ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿಲ್ಲ, ಇಡೀ ಜಿಲ್ಲೆಗೆ ಸಹಕಾರ ಆಗುವ ರೀತಿ ಅನುದಾನ ಕೊಟ್ಟಿದ್ದೇವೆ. ಮೂರು ವರ್ಷದಲ್ಲಿ ಐವತ್ತು ಕೋಟಿ ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಸಾವಿರ ಹಳ್ಳಿಗಳಿಗೆ ಭೇಟಿ ಕೊಟ್ಟು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ಮಾಡಿದ್ದೇನೆ. 

ಉದ್ಭವಮೂರ್ತಿ ಸೂರಜ್ ರೇವಣ್ಣ ಅವರದ್ದು ಬಾಲಿಶ ಹೇಳಿಕೆ: ಸಂಸದ ಶ್ರೇಯಸ್ ಪಟೇಲ್ ತಿರುಗೇಟು

ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಜಿ.ಪಂ. ಸದಸ್ಯರಾಗಿದ್ದಾಗ ಒಂದು ಹೋಬಳಿಗೆ ಹತ್ತು ರುಪಾಯಿ ಕೆಲಸ ಮಾಡಿಲ್ಲ. ಬೆರಳು ಮಾಡಿ ತೋರಿಸುವ ಒಂದು ಕೆಲಸ ಮಾಡಿಲ್ಲ. ಪೆನ್‌ಡ್ರೈವ್ ಹಂಚಿ ಅಚಾನಕ್ಕಾಗಿ ಸಂಸದರಾಗಿದ್ದೀರಾ! ಹಾಸನ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಸಂಸದನಾಗಿದ್ದೀನಿ ಎಂದು ದೊಡ್ಡದಾಗಿ ಕೇಂದ್ರ ಸಚಿವರಿಗೆ ಮನವಿ ಕೊಡುವುದಲ್ಲ. ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರದ್ದೇ ಇದೆ, ರೈಲ್ವೆ ಬ್ಯಾರಿಕೇಡ್ ಎಷ್ಟು ಕಡೆ ಅಳವಡಿಸಿದ್ದಾರೆ. ಕೇಂದ್ರ ಸರ್ಕಾರದ ಬಳಿ ಏಕೆ ಹೋಗಬೇಕು, ರಾಜ್ಯದಲ್ಲೇ ನಿಮ್ಮ ಸರ್ಕಾರ ಇದೆ. ಎಷ್ಟು ಕಡೆ ರೈಲ್ವೆ ಬ್ಯಾರಿಕೇಡ್ ಆಗಿದೆ ಮೊದಲು ಮಾಹಿತಿ ಕೊಡಿ, ಹಳ್ಳಿಗಳಿಗೆ ಹೋಗಿ ನಾನು ತಬ್ಬಲಿ ಮಗ ಎಂದು ಜನರಿಗೆ ಮಂಕುಬೂದಿ ಎರಚಿದ್ದೀರ. ಮುಂದೆ ನಿಮ್ಮ ಕುಟುಂಬದ ಕೊಡುಗೆ ಏನಿದೆ, ನಮ್ಮ ಕೊಡುಗೆ ಏನಿದೆ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಆರೋಗ್ಯ ಕೇಂದ್ರಗಳು, ಮೆಡಿಕಲ್ ಕಾಲೇಜು, ರಸ್ತೆಗಳನ್ನು ಹೋಗಿ ಒಮ್ಮೆ ನೋಡಿ ರೈತರಿಗೆ ಶಾಶ್ವತವಾಗಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಕೆಲಸ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಮೈಕ್ ಇಟ್ಕಂಡು ಪುಕ್ಸಟ್ಟೆ ಪ್ರಚಾರ ತಗೊಳೋದನ್ನ ಹೇಳಿಕೊಟ್ಟಿಲ್ಲ. ವಾರಕ್ಕೆ ಒಂದು ದಿನ ಪ್ರೆಸ್‌ಮೀಟ್ ಮಾಡಿ ಪ್ರಚಾರ ತೆಗೆದುಕೊಳ್ಳುವುದಲ್ಲ ಎಂದರು.

ಸಂಸದರಿಂದ ವರ್ಗಾವಣೆ ದಂಧೆ:

ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬಳಿಕ ಶ್ರೇಯಸ್ ಪಟೇಲ್ ಸಂಸದರಾಗಿ ಆಯ್ಕೆಯಾದ ಬಳಿಕ ವರ್ಗಾವಣೆಗಾಗಿ ಸಣ್ಣ ಸಣ್ಣ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಅವರ ವರ್ಗಾವಣೆಗೆ ಪತ್ರ ಮುಖೇನ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ತಮ್ಮ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದು, ಜಿಲ್ಲೆಯಾದ್ಯಂತ ಕೆಳ ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಪತ್ರ ಬರೆಯುವ ಹವ್ಯಾಸ ರೂಢಿಸಿಕೊಂಡಿರುವ ಸಂಸದರು ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. 

ವಿಧಾನಸೌಧದಲ್ಲಿ ಯಾವ ಕೊಠಡಿಗೆ ಹೋದರು ಎಂಪಿ ಲೆಟರ್‌ಹೆಡ್. ವರ್ಗಾವಣೆಗೆ ದಂಧೆ ನಡೆಸುತ್ತಿದ್ದಾರೆ. ಲೆಟರ್‌ಹೆಡ್ ದಂಧೆ ಮಾಡಿಕೊಂಡಿದ್ದಾರೆ. ಲೆಟರ್‌ಹೆಡ್ ಕೊಡಲು ಎರಡು ಲಕ್ಷ ಹಣ ಪಡೆಯುತ್ತಿದ್ದಾರೆ. ನಾನು ಒಂದು ಲೆಟರ್ ವರ್ಗಾವಣೆ ಕೊಟ್ಟಿರುವುದನ್ನು ತೋರಿಸಿ! ದೇವೇಗೌಡರ ಪರಿಶ್ರಮದಿಂದ ಐಐಟಿ ಬರಬಹುದು. ಎಂಪಿ ಯಾರಿಗೆ ಹೋಗಿ ಮನವಿ ಕೊಟ್ಟರೂ ಐಐಟಿ ಬರುವುದಿಲ್ಲ. ಐಐಟಿ ಬಂದರೆ ದೇವೇಗೌಡರು, ಮೋದಿಯಿಂದ ಅಷ್ಟೇ ಎಂದು ಖಾರವಾಗಿ ನುಡಿದರು.

'ನಾನು, ನನ್ನಿಂದಲೇ ಎನ್ನುವ ನೀವು ಸ್ಮಶಾನಕ್ಕೆ ಹೋಗಿ ಬನ್ನಿ..' ರಾಜ್ಯ ಸರ್ಕಾರದ ವಿರುದ್ಧ ಸೂರಜ್‌

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು, ನಗರಸಭೆ ಸದಸ್ಯ ಮಂಜುನಾಥ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ಇತರರು ಉಪಸ್ಥಿತರಿದ್ದರು.

ಮರಳು ದಂಧೆಯಲ್ಲಿ ಡಿವೈಎಸ್ಪಿಯೇ ಭಾಗಿ

ಜಿಲ್ಲೆಯಲ್ಲಿ ಮರಳು ದಂಧೆ ಹೆಚ್ಚಾಗಿದೆ. ಸಕಲೇಶಪುರ ಭಾಗದಲ್ಲಿ ಅಲ್ಲಿನ ಡಿವೈಎಸ್ಪಿ ಅವರೇ ಶಾಮೀಲಾಗಿ ದಂಧೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ. ಅವರ ಡ್ರೈವರ್‌ಗೆ ಹಣ ನೀಡಿದರೆ ಸಾಕು ಮರಳು ಮಾಫಿಯಾಗೆ ಯಾವುದೇ ರೀತಿ ಅಡ್ಡಿ ಆಗುವುದಿಲ್ಲ ಎಂಬುದು ಜನಾಭಿಪ್ರಾಯ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಎಂಎಲ್‌ಸಿ ಸೂರಜ್‌ ರೇವಣ್ಣ ಮನವಿ ಮಾಡಿದರು.

Latest Videos
Follow Us:
Download App:
  • android
  • ios