ಡಿ.ಕೆ.ಶಿವಕುಮಾರ್‌ಗೆ ನಿಜವಾಗಿಯೂ ದೇಶ- ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬ್ರದರ್ಸ್‌ಗಳನ್ನು, ನಾಗಮಂಗಲ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ ಬ್ರದರ್ಸ್ ಗಳನ್ನು ಒದ್ದು ಒಳಗೆ ಹಾಕಬೇಕು. ಅದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ನಾಟಕ ಮಾಡಿದರೆ ಆ ತಾಯಿ ಕಾವೇರಿ ಮೆಚ್ಚುತ್ತಾಳಾ ಎಂದು ಕಟುವಾಗಿ ಪ್ರಶ್ನಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆ‌ರ್. ಅಶೋಕ್ 

ಬೆಂಗಳೂರು(ಸೆ.24):  ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಅಧ್ಯಯನಕ್ಕೆಂದು ಮಂಡ್ಯ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದ ತಂಡ ಹರಿದ್ವಾರ, ಕಾಶಿಗೆ ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ತೆರಳಿತ್ತಾ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆ‌ರ್. ಅಶೋಕ್ ಕಿಡಿಕಾರಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಶೋಕ್, 'ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಬಂದಿರುವಾಗ ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಕಳುಹಿಸುತ್ತಿರುವುದು ಯಾವ ಕಾರಣಕ್ಕಾಗಿ' ಎಂದು ಪ್ರಶ್ನಿಸಿದ್ದಾರೆ. 

ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್‌ ಕಚೇರಿಗಳಾಗಿವೆ: ಅಶೋಕ್‌

ಈಗ ಮತ್ತೊಮ್ಮೆ ಅಧಿಕಾರಿಗಳ ನಿಯೋಗ ಹೋಗಬೇಕು ಎನ್ನುವುದಾದರೆ ಸಚಿವರು ತಮ್ಮ ತಂಡದೊಂದಿಗೆ ಅಲ್ಲಿ ಹೋಗಿ ಮಾಡಿದ್ದಾದರೂ ಏನು? ಸರ್ಕಾರಿ ಹಣದಲ್ಲಿ ಮೋಜು-ಮಸ್ತಿ ಮಾಡಲು ಹೋಗಿ ಬಂದರಾ? ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ಹಿಂದೂ ಧರ್ಮದ ಬಗ್ಗೆ, ಹಿಂದೂಗಳ ಆಚಾರ-ವಿಚಾರದ ಬಗ್ಗೆ, ಸಂಪ್ರದಾಯ-ಪರಂಪರೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ತೋರುವ ನಾಟಕ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ. 

ಡಿಸಿಎಂ.ಡಿ.ಕೆ.ಶಿವಕುಮಾರ್‌ಗೆ ನಿಜವಾಗಿಯೂ ದೇಶ- ಧರ್ಮದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಬ್ರದರ್ಸ್‌ಗಳನ್ನು, ನಾಗಮಂಗಲ, ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಎಬ್ಬಿಸಿದ ಬ್ರದರ್ಸ್ ಗಳನ್ನು ಒದ್ದು ಒಳಗೆ ಹಾಕಬೇಕು. ಅದು ಬಿಟ್ಟು ಬರೀ ತೋರಿಕೆಗೆ ಕಾವೇರಿ ಆರತಿ ನಾಟಕ ಮಾಡಿದರೆ ಆ ತಾಯಿ ಕಾವೇರಿ ಮೆಚ್ಚುತ್ತಾಳಾ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.