ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಒತ್ತು ನೀಡುವುದು ಹಾಗೂ ರೈತರನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಆರಂಭಿಸಲಾದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ (ಐಟಿಎಫ್‌) ಆರೇ ವರ್ಷಕ್ಕೆ ಸ್ಥಗಿತಗೊಂಡಿದೆ.

ಗಿರೀಶ್‌ ಗರಗ

ಬೆಂಗಳೂರು (ಡಿ.15): ಸಾವಯವ ಮತ್ತು ಸಿರಿಧಾನ್ಯ ಕೃಷಿಗೆ ಒತ್ತು ನೀಡುವುದು ಹಾಗೂ ರೈತರನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಆರಂಭಿಸಲಾದ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ (ಐಟಿಎಫ್‌) ಆರೇ ವರ್ಷಕ್ಕೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ಅಸಹಕಾರದಿಂದಾಗಿ ಮೇಳ ಸ್ಥಗಿತಗೊಂಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದಿಂದಲೇ ಪ್ರತ್ಯೇಕ ಅಂತಾರಾಷ್ಟ್ರೀಯ ಮೇಳ ಆಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡಲು ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಆಯೋಜಿಸುತ್ತಿತ್ತು. ಕೃಷಿ ಇಲಾಖೆಯಡಿ 2017ರಲ್ಲಿ ಐಟಿಎಫ್‌ ಮೊದಲ ಬಾರಿಗೆ ಆಯೋಜನೆಗೊಂಡು, ಬಿ2ಬಿ ಸಭೆಗೆ ಸೀಮಿತವಾಗಿತ್ತು. ಅದಾದ ನಂತರ 2018ರಲ್ಲಿ ದೊಡ್ಡಮಟ್ಟದಲ್ಲಿ ಮೇಳಕ್ಕೆ ಚಾಲನೆ ನೀಡಲಾಯಿತು. ಅದಾದ ನಂತರ, 2020-22ರ ಅವಧಿಯಲ್ಲಿ ಮೇಳ ನಡೆದಿರಲಿಲ್ಲ.

ಬಳಿಕ, 2023-24ರಲ್ಲಿ ಉತ್ತಮ ರೀತಿಯಲ್ಲಿ ಐಟಿಎಫ್‌ ಆಯೋಜನೆಗೊಂಡಿತ್ತು. 2024ರ ಜನವರಿಯಲ್ಲಿ ನಡೆದ ಮೇಳದಲ್ಲಿ ವಿವಿಧ ಒಪ್ಪಂದ ಸೇರಿ ಸುಮಾರು ₹160 ಕೋಟಿಗೂ ಹೆಚ್ಚಿನ ಮೌಲ್ಯದ ವಹಿವಾಟುಗಳು ನಡೆದಿದ್ದವು. 2025ರ ಜನವರಿಯಲ್ಲಿ ನಡೆದ 6ನೇ ಐಟಿಎಫ್‌ನಲ್ಲಿ ₹183 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿತ್ತು. ಇದರ ಪರಿಣಾಮ ಸಿರಿಧಾನ್ಯ ಬೆಳೆಯುವ ಮತ್ತು ಸಾವಯವ ಕೃಷಿ ಪ್ರದೇಶಗಳಲ್ಲಿ ಭಾರೀ ಏರಿಕೆಯಾಗಿದೆ. ಈ ಬಾರಿಯೂ 2026ರ ಜನವರಿಯಲ್ಲಿ 7ನೇ ಐಟಿಎಫ್‌ ಆಯೋಜನೆಗೆ ಕೃಷಿ ಇಲಾಖೆ ನಿರ್ಧರಿಸಿತ್ತು. ಆದರೆ, ಕೇಂದ್ರ ಸರ್ಕಾರ ಐಟಿಎಫ್‌ ಸ್ಥಗಿತಕ್ಕೆ ಸೂಚನೆ ನೀಡಿದ್ದು, ಆ ಮೂಲಕ ಸಿರಿಧಾನ್ಯ ಮತ್ತು ಸಾವಯವ ಕೃಷಿಗೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಕ್ರಮಕ್ಕೆ ತಡೆಯೊಡ್ಡಿದಂತಾಗಿದೆ.

96 ಸಾವಿರ ಹೆಕ್ಟೇರ್‌ ಸಾವಯವ ಕೃಷಿ ಭೂಮಿ: ರಾಜ್ಯದಲ್ಲಿ 1.47 ಕೋಟಿ ಹೆಕ್ಟೇರ್‌ ಸಾಗುವಳಿ ಕೃಷಿ ಭೂಮಿಯಿದೆ. ಅದರಲ್ಲಿ ಸುಮಾರು 96 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಸಾವಯವ ಕೃಷಿ ಮಾಡಲಾಗುತ್ತಿದೆ. ಇನ್ನು, ರಾಜ್ಯದಲ್ಲಿ 18.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಕೃಷಿ ಮಾಡಲಾಗುತ್ತಿದ್ದು, 22.16 ಲಕ್ಷ ಟನ್‌ಗಳಷ್ಟು ಸಿರಿಧಾನ್ಯ ಉತ್ಪಾದನೆ ಮಾಡಲಾಗುತ್ತಿದೆ. ಸಾಗುವಳಿ ಭೂಮಿಯ ಪ್ರಮಾಣಕ್ಕೆ ಹೋಲಿಸಿದರೆ ಸಾವಯವ ಕೃಷಿ ಪ್ರಮಾಣ ತೀರಾ ಕಡಿಮೆಯಿದೆ. ಆದರೆ, ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ ಆರಂಭದ ನಂತರದಿಂದ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆ ಕುರಿತಂತೆ ಹೆಚ್ಚಿನ ಆಸಕ್ತಿ ಬೆಳೆದಿತ್ತು.

ಶೇ.60ರಷ್ಟು ಮಾತ್ರ ಕೇಂದ್ರದ ಪಾಲು

ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳಕ್ಕಾಗಿ ಅಂದಾಜು 7ರಿಂದ 10 ಕೋಟಿ ರು. ಖರ್ಚು ಮಾಡಲಾಗಿತ್ತು. ಅದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರು ಸಿರಿಧಾನ್ಯ ಮತ್ತು ಸಾವಯವ ಕೃಷಿ ಕುರಿತಂತೆ ಮಾಹಿತಿ ನೀಡಲಿದ್ದರು. ಜತೆಗೆ, ಸಿರಿಧಾನ್ಯ ಮತ್ತು ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ, ಹೊಸಬಗೆಯ ಬೆಳವಣಿಗೆ ಕುರಿತಂತೆ ಮಾಹಿತಿ ನೀಡುವುದೂ ಸೇರಿದಂತೆ ಸಿರಿಧಾನ್ಯ ಮತ್ತು ಸಾವಯವ ಕೃಷಿ ಕುರಿತಂತೆ ಆಸಕ್ತಿ ಹೊಂದಿದವರಿಗೆ ಅನುಕೂಲವಾಗುತ್ತಿತ್ತು. ಈ ಯೋಜನೆಗಾಗಿ ಕೇಂದ್ರ ಸರ್ಕಾರ ಐಟಿಎಫ್‌ನ ಶೇ.60ರಷ್ಟು (4ರಿಂದ 5 ಕೋಟಿ ರು.) ಮೊತ್ತವನ್ನು ನೀಡುತ್ತಿತ್ತು.

ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಆ ಮೊತ್ತವನ್ನೂ ನೀಡದೇ ಐಟಿಎಫ್‌ ಸ್ಥಗಿತಕ್ಕೆ ನೇರವಾಗಿ ಸೂಚನೆ ನೀಡಿದೆ. ಪ್ರತ್ಯೇಕ ಕಾರ್ಯಕ್ರಮಕೇಂದ್ರ ಸರ್ಕಾರದ ಅಸಹಕಾರಕ್ಕೆ ಬದಲಾಗಿ ರಾಜ್ಯ ಸರ್ಕಾರದಿಂದಲೇ ಐಟಿಎಫ್‌ ಮಾದರಿ ಮೇಳ ಅಥವಾ ಅದಕ್ಕೆ ಸಮಾನವಾದ ಕಾರ್ಯಕ್ರಮ ಆಯೋಜಿಸಲು ಕೃಷಿ ಇಲಾಖೆ ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಯಾವಾಗ ಪರ್ಯಾಯ ಮೇಳ ಆಯೋಜಿಸಬೇಕು ಮತ್ತು ಅದು ಯಾವ ಮಾದರಿಯಲ್ಲಿರಬೇಕು ಎಂದು ಕೃಷಿ ಇಲಾಖೆ ನಿರ್ಧರಿಸಲಿದೆ.