SSC GD CAPF Exam: ಎಸ್‌ಎಸ್‌ಸಿ ಜಿಡಿ ಸಿಎಪಿಎಫ್ ಪರೀಕ್ಷೆ: ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ಉಂಟಾಗಿರುವ ಭಾಷಾ ವಿವಾದದ ಮಧ್ಯೆ, ಕೇಂದ್ರ ಗೃಹ ಸಚಿವಾಲಯ ಕಾನ್ಸ್‌ಟೇಬಲ್ (ಜಿಡಿ) ಸಿಎಪಿಎಫ್ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ನಿರ್ಧರಿಸಿದೆ.  

ನವದೆಹಲಿ (ಏ.15):  ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಪ್‌) ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ನೇಮಕಾತಿ ಪರೀಕ್ಷೆಯ ವಿಚಾರದಲ್ಲಿ ಭಾಷಾ ವಿವಾದ ಉಂಟಾಗಿರುವ ನಡುವೆ ಕೇಂದ್ರ ಗೃಹ ಸಚಿವಾಲಯ (MHA) ಕಾನ್‌ಸ್ಟೆಬಲ್ (GD) ಸಿಎಪಿಎಫ್‌ ಪರೀಕ್ಷೆಯನ್ನು ಹಿಂದಿ, ಇಂಗ್ಲೀಷ್‌ ಹಾಗೂ ಕನ್ನಡದೊಂದಿಗೆ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ನಿರ್ಧಾರ ಮಾಡಿದೆ. ಈ ನಿರ್ಧಾರದಿಂದಾಗಿ ಸಿಎಪಿಎಫ್‌ ಅಂದರೆ ದೆಹಲಿ ಪೊಲೀಸ್ ಸೇರಿದಂತೆ ಎಲ್ಲಾ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಪಡೆಗಳ ನೇಮಕಾತಿ ಪರೀಕ್ಷೆಯನ್ನು ಆಯಾ ರಾಜ್ಯದ ಭಾಷೆಗಳಲ್ಲಿ ಬರೆಯಬಹುದಾಗಿದೆ.

ಈ ವಾರದ ಆರಂಭದಲ್ಲಿ ತಮಿಳುನಾಡು ಮತ್ತು ತೆಲಂಗಾಣದ ನಾಯಕರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) 9,212 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬಳಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಾದ ಕನ್ನಡದ ಕಡೆಗಣನೆಯನ್ನು ಆಕ್ಷೇಪಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆ ಬಳಿಕ ಸಿಆರ್‌ಪಿಎಫ್‌ ಪರೀಕ್ಷೆಯ ಭಾಷೆಗಳಿಗೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಇದೀಗ ಈ ವಿವಾದಕ್ಕೆ ಅಂತ್ಯ ಹಾಡಿರುವ ಕೇಂದ್ರ ಗೃಹ ಸಚಿವಾಲಯ ಹೊಸ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಎಲ್ಲಾ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಯಲಿವೆ.

2024ರ ಜನವರಿ 1 ರಿಂದ ಹೊಸ ವ್ತವಸ್ಥೆ: ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ ನೇಮಕಾತಿ ಸಿಎಪಿಎಫ್‌ ಪರೀಕ್ಷೆಯನ್ನು 2024ರ ಜನವರಿ 1 ರಿಂದ ಹಿಂದಿ, ಇಂಗ್ಲೀಷ್‌ ಹಾಗೂ ಕನ್ನಡದೊಂದಿಗೆ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಈ ನಿರ್ಧಾರ ಬಳಿಕ ಲಕ್ಷಗಟ್ಟಲೆ ಅಭ್ಯರ್ಥಿಗಳು ತಮ್ಮ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲಿದೆ. ಇದು ಅವರ ಆಯ್ಕೆಯ ಅವಕಾಶವನ್ನು ಇನ್ನಷ್ಟು ಹೆಚ್ಚಳ ಮಾಡಲಿದೆ. ಆದರೆ, ಈ ಹೊಸ ವ್ಯವಸ್ಥೆ 2024ರ ಜನವರಿ 1 ರಿಂದ ಸಿಬ್ಬಂದಿ ಆಯ್ಕೆ ಆಯೋಗ ಜಾರಿ ಮಾಡಲಿದೆ.

ಈ ಪರೀಕ್ಷೆಗಳೀಗ ಒಟ್ಟು 15 ಭಾಷೆಗಳಲ್ಲಿ ನಡೆಯಲಿದೆ. ಅಂದರೆ ಹಿಂದಿ ಮತ್ತು ಇಂಗ್ಲಿಷ್ ಅಲ್ಲದೆ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲಿಯೂ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ.

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಇಲ್ಲ..!

ಸ್ಪಷ್ಟನೆ ನೀಡಿದ್ದ ಸಿಆರ್‌ಪಿಎಫ್‌: ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಭಾಷಾ ವಿವಾದದ ಮಧ್ಯೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನೀಡಿರುವ ಸ್ಪಷ್ಟೀಕರಣ ನೀಡಿದೆ. ಪ್ರಾದೇಶಿಕ ಭಾಷೆಯನ್ನು ಪತ್ರಿಕೆಯಲ್ಲಿ ತೆಗೆದುಹಾಕಲಾಗಿದೆ ಅನ್ನೋದೆಲ್ಲಾ ಸುಳ್ಳು ಹಾಗೂ ಆಧಾರರಹಿತ. ಸಿಆರ್‌ಪಿಎಫ್‌ ತನ್ನ ಆಂತರಿಕ ನೇಮಕಾತಿಗಾಗಿ ಈ ಹಿಂದೆ ನಡೆಸಿದ್ದ ಯಾವುದೇ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಿರಲಿಲ್ಲ. ಹಾಗಾಗಿ ಪತ್ರಿಕೆಯ ಭಾಷೆಗಳಿಂದ ಕನ್ನಡವನ್ನು ಕೈಬಿಡಲಾಗಿದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಎಂದಿದೆ.

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆಗೆ ಕನ್ನಡ ಇಲ್ಲ: ಸಿದ್ದರಾಮಯ್ಯ, ಎಚ್‌ಡಿಕೆ ಆಕ್ರೋಶ

ಸಿಆರ್‌ಪಿಎಫ್ ಹೇಳಿಕೆಯಲ್ಲಿ ಸಿಟಿ/ಜಿಡಿಯನ್ನು ಎಸ್‌ಎಸ್‌ಸಿ ಮೂಲಕ ಮತ್ತು ಕಾನ್ಸ್‌ಟೇಬಲ್ (ಟೆಕ್ ಮತ್ತು ಟ್ರೇಡ್ಸ್‌ಮ್ಯಾನ್) ಆಂತರಿಕ ನೇಮಕಾತಿ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ. ಎರಡೂ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ದ್ವಿಭಾಷಾ ವಿಧಾನದಲ್ಲಿ ನಡೆಸಲಾಗುತ್ತದೆ.