ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಎಆರ್‌ಪಿಎಫ್‌) ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಕೇವಲ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ರಾಜ್ಯದ ಪ್ರತಿಪಕ್ಷಗಳ ನಾಯಕರು ಹಾಗೂ ಕನ್ನಡ ಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಏ.11) : ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಎಆರ್‌ಪಿಎಫ್‌) ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಕೇವಲ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ರಾಜ್ಯದ ಪ್ರತಿಪಕ್ಷಗಳ ನಾಯಕರು ಹಾಗೂ ಕನ್ನಡ ಪರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಖಾಲಿ ಇರುವ 466 ಹುದ್ದೆ ಸೇರಿದಂತೆ ಸಿಆರ್‌ಪಿಎಫ್‌(CRPF Jobs )ನ 9212 ಹುದ್ದೆಗಳಿಗೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಕೇವಲ ಇಂಗ್ಲಿಷ್‌, ಹಿಂದಿ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಗ್ಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಇಲ್ಲ..!

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ(Siddaramaiah), ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಜ್ಞಾನ, ಅರ್ಹತೆ ಇರುವ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ ಅನ್ಯಾಯ ಸರಿಪಡಿಸಬೇಕು. ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದ್ಯಮ, ಉದ್ಯೋಗ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದಿ ಭಾಷೆಯ ಯಜಮಾನಿಕೆ ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಸಾಧ್ಯ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಸಂವಿಧಾನ ವಿರೋಧಿ:

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ಕೇಂದ್ರ ಬಿಜೆಪಿ ಸರ್ಕಾರ ಮತ್ತೆ ಕನ್ನಡಿಗರಿಗೆ(Kannadiga) ಉಂಡೆನಾಮ ಹಾಕಿದೆ. ಭಾನುವಾರ ಸಿಆರ್‌ಪಿಎಫ್‌ ನೇಮಕಾತಿಗೆ ನಡೆಸಿದ ಕಂಪ್ಯೂಟರ್‌ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಷ್ಟೇ ಪರೀಕ್ಷೆಗೆ ಅವಕಾಶ ಕೊಡಲಾಗಿದ್ದು, ಇದು ಖಂಡನೀಯ ಎಂದು ಹೇಳಿದ್ದಾರೆ.

ಒಟ್ಟು 9212 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ದುರಂತವೆಂದರೆ, ಇಷ್ಟುಹುದ್ದೆಗಳನ್ನು ಬಯಸುವ ಆಭ್ಯರ್ಥಿಗಳು ಹಿಂದಿ, ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದಿದ್ದಾರೆ. ಬರೆಯುವ ಅನಿವಾರ್ಯ ಸೃಷ್ಟಿಸಲಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ನಿರಾಕರಣೆ ಸಂವಿಧಾನ ವಿರೋಧಿ ನಡೆ ಎಂದು ಕಿಡಿ ಕಾರಿದ್ದಾರೆ.

ಅವಕಾಶ ನೀಡದಿದ್ದರೆ ಹೋರಾಟಕ್ಕೆ ನಾಂದಿ:

ಕೇಂದ್ರದ ಸುಪರ್ದಿಯಲ್ಲಿ ನಡೆಯುವ ಎಲ್ಲಾ ನೇಮಕಾತಿಯನ್ನೂ ಕೇವಲ ಹಿಂದಿ ಕೇಂದ್ರಿತ ನೇಮಕಾತಿ ಪ್ರಕ್ರಿಯೆಯಂತೆ ಮಾಡಿ ಇತರೆ ಭಾಷಿಕರನ್ನು ವಂಚಿಸಲಾಗುತ್ತಿದೆ. ಇದು ಅನ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ. ಕೇಂದ್ರವು ಮುಲಾಜಿಲ್ಲದೆ ಸಿಆರ್‌ಪಿಎಫ್‌ ಮರು ಪರೀಕ್ಷೆ ನಡೆಸಬೇಕು. ಕನ್ನಡ ಸೇರಿ ದೇಶದ ಎಲ್ಲಾ ಭಾಷೆಗಳಲ್ಲೂ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿಯಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಅಧಿಸೂಚನೆ ಹಿಂಪಡೆಯಬೇಕು:

ಈ ಬಗ್ಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ(TA Narayanagowda) ಅವರೂ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರವು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ಮುಂದಾಗುವ ಮೂಲಕ ಹಿಂದಿಯೇತರರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿದೆ. ಸ್ವತಂತ್ರ ಭಾರತದಲ್ಲಿ ಹಿಂದಿಯೇತರರು ಸಮಾನತೆಯ ಹಕ್ಕು ಇಲ್ಲದಂತೆ ಬದುಕುವಂತಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾರತೀಯ ಭಾಷೆ. ಹಿಂದಿ ಭಾಷಿಕರಿಗೆ ಇರುವ ಅವಕಾಶಗಳು ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಇತರೆ ಭಾಷಿಕರಿಗೆ ಯಾಕೆ ನೀಡಲಾಗುತ್ತಿಲ್ಲ? ಈ ರೀತಿಯ ಅಸಮಾನತೆ ಸಂವಿಧಾನದ ಹದಿನಾಲ್ಕನೇ ವಿಧಿಯ ಉಲ್ಲಂಘನೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅತಿ ಗಣ್ಯರ ಭದ್ರತಾ ಪಡೆಗೆ ಮಾನಸಿಕ ತಜ್ಞರ ನೇಮಕ!

ಕೇಂದ್ರ ಸರ್ಕಾರ(Central government) ಕೂಡಲೇ ನೋಟಿಫಿಕೇಷನ್‌ ಹಿಂದಕ್ಕೆ ಪಡೆದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು. ಆಯಾ ರಾಜ್ಯದ ಖಾಲಿ ಹುದ್ದೆಗಳನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಾಗಿರಿಸಬೇಕು ಎಂದು ಆಗ್ರಹಿಸಿದರು.