Asianet Suvarna News Asianet Suvarna News

ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಇಲ್ಲ..!

9212 ಹುದ್ದೆಗಳ ಪೈಕಿ ಕರ್ನಾಟಕದಲ್ಲಿ ಖಾಲಿ ಇರುವ 466, ತಮಿಳುನಾಡಿನ 579 ಹುದ್ದೆಗಳು ಸೇರಿವೆ. ಸಿಆರ್‌ಪಿಎಫ್‌ನ ಷರತ್ತಿನಿಂದಾಗಿ ಹಿಂದಿ, ಇಂಗ್ಲಿಷ್‌ ಬರದವರು ಈ ಹುದ್ದೆಗಳಿಗೆ ಪರೀಕ್ಷೆ ಬರೆಯುವಂತಿಲ್ಲ ಎಂಬಂತಾಗಿದೆ. ಹೀಗಾಗಿ ಈ ನೇಮಕಾತಿ ಪ್ರಕ್ರಿಯೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

No Kannada in CRPF Recruitment Exam grg
Author
First Published Apr 10, 2023, 12:00 AM IST

ನವದೆಹಲಿ(ಏ.10): ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯಲ್ಲಿ ಖಾಲಿ ಇರುವ 9212 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಿರುವ ಕೇಂದ್ರ ಸರ್ಕಾರ, ಅಭ್ಯರ್ಥಿಗಳು ಕಂಪ್ಯೂಟರ್‌ ಆಧರಿತ ಪರೀಕ್ಷೆಯನ್ನು ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರವೇ ಬರೆಯಬಹುದು ಎಂಬ ಷರತ್ತು ಹಾಕಿದೆ. ‘ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ’ ಎಂಬ ಆರೋಪಗಳ ನಡುವೆಯೇ ಈ ವಿದ್ಯಮಾನ ನಡೆದಿದೆ.

9212 ಹುದ್ದೆಗಳ ಪೈಕಿ ಕರ್ನಾಟಕದಲ್ಲಿ ಖಾಲಿ ಇರುವ 466, ತಮಿಳುನಾಡಿನ 579 ಹುದ್ದೆಗಳು ಸೇರಿವೆ. ಸಿಆರ್‌ಪಿಎಫ್‌ನ ಷರತ್ತಿನಿಂದಾಗಿ ಹಿಂದಿ, ಇಂಗ್ಲಿಷ್‌ ಬರದವರು ಈ ಹುದ್ದೆಗಳಿಗೆ ಪರೀಕ್ಷೆ ಬರೆಯುವಂತಿಲ್ಲ ಎಂಬಂತಾಗಿದೆ. ಹೀಗಾಗಿ ಈ ನೇಮಕಾತಿ ಪ್ರಕ್ರಿಯೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಕೇಂದ್ರ ಸರ್ಕಾರ ಕೂಡಲೇ ಕನ್ನಡ ಸೇರಿದಂತೆ ದಕ್ಷಿಣದ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು’ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಸುಮಾರು 10 ಲಕ್ಷ ಹುದ್ದೆ ಖಾಲಿ: ರೈಲ್ವೇಲಿ 3 ಲಕ್ಷ ಬಾಕಿ

ಸ್ಟಾಲಿನ್‌ ಆಕ್ರೋಶ:

ಅಭ್ಯರ್ಥಿಗಳ ಬೇಡಿಕೆಗೆ ಧ್ವನಿಗೂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ‘ಸಿಆರ್‌ಪಿಎಫ್‌ ಹುದ್ದೆ ಭರ್ತಿ ವೇಳೆ ಕೇವಲ ಹಿಂದಿ, ಇಂಗ್ಲಿಷ್‌ಗೆ ಮಣೆ ಹಾಕಿರುವುದು ಆಕ್ಷೇಪಾರ್ಹ. ಕೂಡಲೇ ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿ, ತಮಿಳು ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದಾರೆ.

‘ಸಿಆರ್‌ಪಿಎಫ್‌ ಕಂಪ್ಯೂಟರ್‌ ಟೆಸ್ಟ್‌ನಲ್ಲಿ ತಮಿಳು ಸೇರಿಸಿಲ್ಲ. ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ಕುರಿತ ಅಧಿಸೂಚನೆಯು ತಾರತಮ್ಯ ಮತ್ತು ಏಕಪಕ್ಷೀಯವಾಗಿದೆ. ಇದು ತಮಿಳುನಾಡಿನ ಅರ್ಜಿದಾರರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಯೋಧರಾಗಲು ಬಯಸುವ ಆಕಾಂಕ್ಷಿಗಳ ಮೂಲಭೂತ ಹಕ್ಕು ಕಸಿಯುತ್ತದೆ’ ಎಂದು ಕಿಡಿಕಾರಿದ್ದಾರೆ.

UPSC ಪೂರ್ವ ಪರೀಕ್ಷೆಯಲ್ಲೇ ಫೇಲ್ ಆಗಿದ್ದ ದೇವಯಾನಿ ಸಿಂಗ್ ಮತ್ತೆ ಯಶಸ್ಸು ಗಳಿಸಿದ್ದು ಹೇಗೆ?

ಇದಲ್ಲದೆ, ‘100ರಲ್ಲಿ 25 ಅಂಕಗಳು ಹಿಂದಿ ಬರವಣಿಗೆಗೆ ಸಂಬಂಧಿಸಿವೆ. ಇದು ಹಿಂದಿ ಮಾತನಾಡುವ ಅಭ್ಯರ್ಥಿಗಳಿಗೆ ಮಾತ್ರ ಲಾಭ ತರುತ್ತದೆ. ಇದು ತಮಿಳುನಾಡಿನ ಆಕಾಂಕ್ಷಿಗಳಿಗೆ ಅವರ ಸ್ವಂತ ರಾಜ್ಯದಲ್ಲಿ ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅಡ್ಡಿಯಾಗಿದೆ’ ಎಂದು ಸ್ಟಾಲಿನ್‌ ಪತ್ರದಲ್ಲಿ ಹೇಳಿದ್ದಾರೆ. ಪರೀಕ್ಷೆಯ ಅಂತಿಮ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಜುಲೈ 1ರಿಂದ 11ರ ನಡುವೆ ಪರೀಕ್ಷೆ ನಡೆಯಬಹುದು ಎಂಬ ಸಂಭಾವ್ಯ ದಿನಾಂಕ ಪ್ರಕಟಿಸಲಾಗಿದೆ.

ಏನಿದು ವಿವಾದ?

- ಖಾಲಿ ಇರುವ 9212 ಹುದ್ದೆ ಭರ್ತಿಗೆ ಸಿಆರ್‌ಪಿಎಫ್‌ನಿಂದ ಅರ್ಜಿ ಆಹ್ವಾನ
- ಕರ್ನಾಟಕದ 466, ತಮಿಳುನಾಡಿನ 579 ಹುದ್ದೆಗಳ ಭರ್ತಿಗೂ ನಿರ್ಧಾರ
- ಕಂಪ್ಯೂಟರ್‌ ಮೂಲಕ ಪರೀಕ್ಷೆ. ಹಿಂದಿ, ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ
- ಈ ಭಾಷೆ ಗೊತ್ತಿಲ್ಲದ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಅನ್ಯಾಯ ಆರೋಪ
- ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗೆ ಅವಕಾಶ ನೀಡಲು ಆಗ್ರಹ
- ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ತ.ನಾಡು ಸಿಎಂ ಪತ್ರ

Follow Us:
Download App:
  • android
  • ios