ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಜಮೀನು ವಾಪಸ್‌ ಕೇಳಲು ಅವಕಾಶವಿಲ್ಲ, ಯೋಜನೆ ವಿಳಂಬವಾದರೂ ಜಮೀನು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ

ಬೆಂಗಳೂರು(ಜೂ.10): ಮಾಸ್ಟರ್‌ ಪ್ಲಾನ್‌ನಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಮೀಸಲಿಟ್ಟು ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಭೂಮಿಯ ಮೇಲಿನ ಹಕ್ಕನ್ನು ಮಾಲೀಕರು ವಾಪಸ್‌ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ತರಬನಹಳ್ಳಿಯ ನಿವಾಸಿಗಳಾದ ಕೆ.ಗೋಪಾಲಗೌಡ ಮತ್ತು ಆರ್‌.ರವಿಚಂದ್ರನ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸ್ಪಷ್ಟನೆ ನೀಡಿದೆ.

ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಶಾಸಕ ಪೂಂಜಾಗೆ ರಿಲೀಫ್, ತನಿಖೆಗೆ ಹೈಕೋರ್ಟ್ ತಡೆ!

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961ರ ಸೆಕ್ಷನ್‌ 69(2)ರ ಪ್ರಕಾರ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಭವಿಷ್ಯದ ಅವಶ್ಯಕತೆ ಪೂರೈಸುವಂತಹ ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಮೀಸಲಿಟ್ಟು ಯೋಜನೆ ಜಾರಿ ಮಾಡದೇ ಐದು ವರ್ಷ ಕಳೆದರೂ ಆ ಯೋಜನೆ ಮುಂದುವರೆಯುತ್ತದೆ, ಭೂಮಿ ವಾಪಸ್‌ಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಪೀಠ ತಿಳಿಸಿದೆ.

ಪ್ರಕರಣದ ವಿವರ:

ಅರ್ಜಿದಾರ ಗೋಪಾಲಗೌಡ ಯಲಹಂಕ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ 1 ಎಕರೆ ಕೃಷಿ ಜಮೀನಿನ ಮಾಲೀಕರಾಗಿದ್ದಾರೆ. ರವಿಚಂದ್ರನ್‌ 1 ಎಕರೆ 32 ಗುಂಟೆ ಕೃಷಿ ಜಮೀನು ಮಾಲೀಕರಾಗಿದ್ದಾರೆ. 2010ರಲ್ಲಿ ಈ ಜಮೀನನ್ನು ಬೇರೆಯವರಿಂದ ಖರೀದಿಸಿದ್ದರು. ಆದರೆ, 2004ರ ವೇಳೆಗೆ ಜಮೀನಿನ ಅಕ್ಕಪಕ್ಕದ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಐಎಎಪಿಎ) ಮಾಸ್ಟರ್‌ ಪ್ಲಾನ್‌ನಲ್ಲಿ ಗುರುತಿಸಲಾಗಿತ್ತು. ಆ ವೇಳೆಗೆ ಅವುಗಳ ಮಾಲೀಕರು ಈ ಜಮೀನನ್ನು ಅಭಿವೃದ್ಧಿಪಡಿಸಿದ್ದರು. ಹೀಗಾಗಿ ಉದ್ದೇಶಿಸಿದ ರಸ್ತೆ ನಿರ್ಮಾಣದ ಅಲೈನ್‌ಮೆಂಟ್‌ ಬದಲಾಯಿಸಿದ್ದರಿಂದ ಅರ್ಜಿದಾರರ ಜಮೀನು ರಸ್ತೆ ನಿರ್ಮಾಣಕ್ಕೆ ಗುರುತಿಸಲಾಗಿತ್ತು. ಈ ವಿಷಯ ತಿಳಿಯದ ಅರ್ಜಿದಾರರು ಜಮೀನು ಖರೀದಿಸಿದ್ದರು. ಮಾಸ್ಟರ್‌ ಪ್ಲಾನ್‌ಗೆ 2004ರಲ್ಲಿ ಪ್ರಾಥಮಿಕ ಮತ್ತು 2009ರಲ್ಲಿ ಅಂತಿಮ ಅನುಮೋದನೆ ಸಿಕ್ಕಿತ್ತು.

ಮಗಳನ್ನು ಗಂಡನಿಗೆ ಒಪ್ಪಿಸದೆ ಕೋರ್ಟ್‌ನಲ್ಲಿ ಪತ್ನಿಯ ಹೈಡ್ರಾಮಾ: ಯಾಕೆ ಗೊತ್ತಾ?

ಅರ್ಜಿದಾರರು 2016ರಲ್ಲಿ ಈ ಜಮೀನು ಕೃಷಿಯೇತರ ಬಳಕೆಗೆ ಬಳಸಲು ಕೋರಿದ ತಿರಸ್ಕರಿಸಿದ್ದ ಬಿಐಎಎಪಿಎ, ಈ ಜಾಗವು ರಸ್ತೆ ನಿರ್ಮಾಣಕ್ಕೆ ಮೀಸಲಾಗಿದ್ದು, ಅನ್ಯ ಉದ್ದೇಶಕ್ಕೆ ಬಳಸಲಾಗದು ಎಂದು ತಿಳಿಸಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, 2009ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಿದರೂ ಈವರೆಗೂ ಮಾಸ್ಟರ್‌ ಪ್ಲಾನ್‌ನಂತೆ ರಸ್ತೆ ನಿರ್ಮಾಣ ಮಾಡಿಲ್ಲ. ಆದ್ದರಿಂದ ಯೋಜನೆ ರದ್ದುಪಡಿಸಬೇಕು, ಜಮೀನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿದ್ದರು.

ಈ ಮನವಿ ಒಪ್ಪದ ಹೈಕೋರ್ಟ್‌, ಬಿಐಎಎಪಿಎ ಮಾಸ್ಟರ್‌ ಪ್ಲಾನ್‌ ಅನ್ನು ಈಗಾಗಲೇ ಕಾನೂನು ಪ್ರಕಾರ ಒಪ್ಪಿಕೊಳ್ಳಲಾಗಿದೆ. ಆದ್ದರಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಕೆಟಿಸಿಪಿ ಕಾಯ್ದೆಯ ಸೆಕ್ಷನ್‌ 12ರ ಪ್ರಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಜಮೀನು ಯೋಜನಾ ಪ್ರಾಧಿಕಾರದ ವಶದÜಲ್ಲಿರುತ್ತದೆ. ಇದರ ಹಕ್ಕನ್ನು ಮಾಲೀಕರು ಮತ್ತೆ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಜಮೀನು ಭೂಮಾಲೀಕರಿಗೆ ಹಿಂದಿರುಗಿಸುವಂತೆ ಸೂಚಿಸಿದರೆ ಕಾನೂನು ವಿರುದ್ಧದ ನಡೆಯಾಗಲಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.