Asianet Suvarna News Asianet Suvarna News

ಆಗಸ್ಟ್‌ನಲ್ಲಿ 19 ಜಿಲ್ಲೆಗಳಿಗೆ ಮಳೆ ಕೊರತೆ

*  ದ.ಕನ್ನಡ, ರಾಮನಗರ ಜಿಲ್ಲೆಗಳಲ್ಲಿ ಅತಿ ಕಡಿಮೆ ಮಳೆ
*  ಕೋಲಾರ, ಚಿತ್ರದುರ್ಗದಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆ
*  ಇಂದು ಕರಾವಳಿ, ಉ.ಒಳನಾಡಿನಲ್ಲಿ ಮಳೆ 
 

Lack of Rain 19 Districts of Karnataka in August grg
Author
Bengaluru, First Published Aug 20, 2021, 9:07 AM IST

ಬೆಂಗಳೂರು(ಆ.20):  ನೈಋುತ್ಯ ಮುಂಗಾರು ರಾಜ್ಯಕ್ಕೆ ಕಾಲಿಟ್ಟು ಎರಡೂವರೆ ತಿಂಗಳಾಗಿದ್ದು, ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿದೆ. ಹಾಗೆಯೇ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಒಳನಾಡಿನಲ್ಲಿ ತಕ್ಕಮಟ್ಟಿಗೆ ಉತ್ತಮ ಮಳೆಯಾಗಿದೆ. ಆದರೆ ಆಗಸ್ಟ್‌ನಲ್ಲಿ ಮಳೆ ತನ್ನ ಬಿರುಸು ಕಳೆದುಕೊಂಡಿದ್ದು, 19 ಜಿಲ್ಲೆಯಲ್ಲಿ ಕೊರತೆ ಕಂಡು ಬಂದಿದೆ.

ದಕ್ಷಿಣ ಕನ್ನಡ ಮತ್ತು ರಾಮನಗರದಲ್ಲಿ ಮಳೆಯ ಕೊರತೆ ಹೆಚ್ಚಿದೆ. ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿಯೂ ವಾಡಿಕೆಯಷ್ಟುಅಥವಾ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನ 16 ಜಿಲ್ಲೆಯ ಪೈಕಿ 10 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಕರಾವಳಿಯ ಮೂರು ಜಿಲ್ಲೆಯಲ್ಲಿಯೂ ಮಳೆ ಕೈಕೊಟ್ಟಿದೆ. ಕರಾವಳಿಯಲ್ಲಿ ವಾಡಿಕೆಗಿಂತ ಶೇ.18 ಕಡಿಮೆ ಮಳೆಯಾಗಿದ್ದು ಉತ್ತರ ಒಳನಾಡಿನಲ್ಲಿ ಶೇ.31 ಮತ್ತು ದಕ್ಷಿಣ ಒಳನಾಡಿನಲ್ಲಿ ಶೇ.7ರಷ್ಟುಮಳೆ ಹೆಚ್ಚು ಬಿದ್ದಿದೆ. ಒಟ್ಟಾರೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.2ರಷ್ಟು ಮಳೆಯಾಗಿದೆ. ಅತಿ ಹೆಚ್ಚು ಮಳೆಯ ಕೊರತೆ ದಕ್ಷಿಣ ಕನ್ನಡ (ಶೇ.25), ರಾಮನಗರ (ಶೇ.23)ದಲ್ಲಿ ಆಗಿದೆ. ಕೋಲಾರ (ಶೇ.121), ಚಿತ್ರದುರ್ಗ (ಶೇ.101)ದಲ್ಲಿ ಅಲ್ಲಿನ ವಾಡಿಕೆಗಿಂತ ಅತಿ ಹೆಚ್ಚು ಮಳೆ ಸುರಿದಿದೆ.

ದಕ್ಷಿಣ ಕನ್ನಡದಲ್ಲಿ ಆ.20ರವರೆಗೆ ಭಾರಿ ಮಳೆ ಸಂಭವ

ಆಗಸ್ಟ್‌ನಲ್ಲಿ ಮಳೆಯ ಕೊರತೆ: 

ಸದ್ಯ ರಾಜ್ಯದಲ್ಲಿ ಮಳೆ ಕ್ಷೀಣಿಸಿದೆ. ಆ.12ರಿಂದ ಆ.18ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ 19 ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿದೆ. 4 ಜಿಲ್ಲೆಯಲ್ಲಿ ವಾಡಿಕೆಯ ಮಳೆಯಾಗಿದ್ದು, 7 ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಈ ಅವಧಿಯಲ್ಲಿ ಶೇ.39ರಷ್ಟುಮಳೆ ಕೈಕೊಟ್ಟಿದೆ. ಕರಾವಳಿ (ಶೇ.58) ಮತ್ತು ದಕ್ಷಿಣ ಒಳನಾಡಿನಲ್ಲಿ (ಶೇ.48) ಮಳೆ ಕಡಿಮೆಯಾಗಿದೆ. ಆದರೆ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.10ರಷ್ಟುಹೆಚ್ಚು ಮಳೆ ಸುರಿದಿದೆ.

ಕಳೆದ ವಾರ ಉತ್ತರ ಕನ್ನಡ, ರಾಯಚೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆಯ ಭಾರಿ ಕೊರತೆಯಾಗಿದೆ. ಈ ಪೈಕಿ ಕೋಲಾರ (ಶೇ. 83), ಹಾಸನ (ಶೇ.73), ಚಿಕ್ಕಮಗಳೂರು (ಶೇ.72) ಜಿಲ್ಲೆಯಲ್ಲಿ ಮಳೆಯ ಹೆಚ್ಚು ಕೊರತೆಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿದೆ. ಬೆಳಗಾವಿ, ಯಾದಗಿರಿ, ದಾವಣಗೆರೆ ಮತ್ತು ಮೈಸೂರು ಜಿಲ್ಲೆಯಲ್ಲಿ ವಾಡಿಕೆಯ ಮಳೆಯಾಗಿದೆ. ಚಿತ್ರದುರ್ಗ ಮತ್ತು ಚಾಮರಾಜನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬಾಗಲಕೋಟೆ, ಕೊಪ್ಪಳ, ವಿಜಯಪುರ, ಬಳ್ಳಾರಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಗಿಂತ ತುಂಬಾ ಜಾಸ್ತಿ ಮಳೆಯಾಗಿದೆ. ವಿಜಯಪುರ (ಶೇ.172), ಕೊಪ್ಪಳ (ಶೇ.141) ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದಿದೆ.

ಇಂದು ಕರಾವಳಿ, ಉ.ಒಳನಾಡಿನಲ್ಲಿ ಮಳೆ: 

ಶುಕ್ರವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
 

Follow Us:
Download App:
  • android
  • ios