Asianet Suvarna News Asianet Suvarna News

ಮುಂಗಾರು ಮಳೆ ಕೊರತೆ: ರಾಜ್ಯದ 508 ಕೆರೆಗಳಲ್ಲಿ ಒಂದು ಹನಿ ನೀರಿಲ್ಲ!

ಮುಂಗಾರು ಮಳೆಯ ಕೊರತೆಯಿಂದ ಜಲ ಮೂಲಗಳು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ರಾಜ್ಯದ ಕೆರೆಗಳಲ್ಲಿ ನೀರಿನ ಪ್ರಮಾಣ ಕಳೆದ ನಾಲ್ಕು ವರ್ಷಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. 

Lack of Monsoon Rain There is not a drop of water in the 508 lakes of the state gvd
Author
First Published Jun 30, 2023, 3:40 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.30): ಮುಂಗಾರು ಮಳೆಯ ಕೊರತೆಯಿಂದ ಜಲ ಮೂಲಗಳು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ರಾಜ್ಯದ ಕೆರೆಗಳಲ್ಲಿ ನೀರಿನ ಪ್ರಮಾಣ ಕಳೆದ ನಾಲ್ಕು ವರ್ಷಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದೇ ಜಲಾಶಯಗಳಲ್ಲಿ ನೀರಿನ ಮಟ್ಟಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿಯ ನಡುವೆ ಸಣ್ಣ ಪ್ರಮಾಣದ ನೀರಿನ ಸಂಗ್ರಹ ಮೂಲಗಳಾದ ಕೆರೆಗಳಲ್ಲಿಯೂ ಸಹ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಕಳವಳ ಉಂಟುಮಾಡಿದೆ.

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3,673 ಕೆರೆಗಳಿದ್ದು, ಜೂನ್‌ ಮುಗಿಯುತ್ತಾ ಬಂದರೂ ಕೇವಲ 45 ಕೆರೆಗಳು ಮಾತ್ರ ಭರ್ತಿಯಾಗಿವೆ. ಮಳೆ ಕಡಿಮೆ ಆಗಿರುವುದರಿಂದ ಈ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಕಳೆದ ಮೂರು ವಾರದ ಹಿಂದೆ ಭರ್ತಿಯಾಗಿದ್ದ 33 ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ 9 ಕೆರೆಗಳು ಹಾಗೂ 24 ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಯ ಕೆರೆಗಳಾಗಿವೆ.

ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಿ: ಶಾಸಕ ಲಕ್ಷ್ಮಣ ಸವದಿ ಸೂಚನೆ

ನಾಲ್ಕು ವರ್ಷದಲ್ಲಿ ಕನಿಷ್ಠ: ಕಳೆದ 2020ರ ಜೂನ್‌ ಕೊನೆಯ ವಾರದ ವೇಳೆಗೆ ರಾಜ್ಯದಲ್ಲಿ ಶೇ.29 ರಷ್ಟುಮಳೆ ಕೊರತೆಯಾಗಿದ್ದರೂ 74 ಕೆರೆಗಳು ಭರ್ತಿಯಾಗಿದ್ದವು. 2021ರ ಇದೇ ವೇಳೆಗೆ 69, 2022ರಲ್ಲಿ 181 ಕೆರೆಗಳು ಭರ್ತಿಯಾಗಿದ್ದವು. ಆದರೆ ಈಗ ಮಳೆಯ ಕೊರತೆ ಪ್ರಮಾಣ ಶೇ.64 ರಷ್ಟುಉಂಟಾಗಿರುವುದರಿಂದ ಭರ್ತಿ ಕೆರೆಗಳ ಸಂಖ್ಯೆ 45ಕ್ಕೆ ಇಳಿಕೆಯಾಗಿದೆ. ಇದು ಕಳೆದ ನಾಲ್ಕು ವರ್ಷದಲ್ಲಿ ಕನಿಷ್ಠವಾಗಿದೆ.

508 ಕೆರೆಯಲ್ಲಿ ಹನಿ ನೀರಿಲ್ಲ: ದಕ್ಷಿಣ ಕರ್ನಾಟಕದ ಭಾಗದ 17 ಜಿಲ್ಲೆಯಲ್ಲಿ 1,990 ಕೆರೆಗಳಿವೆ. ಈ ಪೈಕಿ 85 ಕೆರೆಗಳಲ್ಲಿ ಹನಿ ನೀರಿಲ್ಲ. ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಯಲ್ಲಿ 1,683 ಕೆರೆಗಳ ಪೈಕಿ 423 ಕೆರೆಗಳಲ್ಲಿ ಹನಿ ನೀರಿಲ್ಲ. ಒಟ್ಟಾರೆ, ರಾಜ್ಯದ 508 ಕೆರೆಗಳಲ್ಲಿ ಜನ-ಜಾನುವಾರು ಮತ್ತು ಪ್ರಾಣಿ ಪಕ್ಷಿಗಳಿಗೂ ಕುಡಿಯುವುದಕ್ಕೆ ನೀರಿಲ್ಲ.

ಉ.ಕ ಭಾಗದಲ್ಲಿ ಪರಿಸ್ಥಿತಿ ಗಂಭೀರ: ದಕ್ಷಿಣ ಕರ್ನಾಟಕ ಭಾಗದಲ್ಲಿ ಅಲ್ಪ ಸ್ವಲ್ಪ ಪ್ರಮಾಣ ಮಳೆಯಾಗಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕೆರೆಗಳ ಪರಿಸ್ಥಿತಿ ಭಾರೀ ಗಂಭೀರವಾಗಿದೆ. ಸಣ್ಣ ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಯ ಒಂದೇ ಒಂದು ಕೆರೆಯೂ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಉಳಿದಂತೆ 42 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರಿದೆ. 946 ಕೆರೆಗಳಲ್ಲಿ ದನ ಕರುಗಳಿಗೆ, ಪ್ರಾಣಿ ಪಕ್ಷಿಗಳು ಕುಡಿಯುವುದಕ್ಕೆ ಅಗತ್ಯವಿರುವಷ್ಟುಶೇ.30 ರಷ್ಟುನೀರಿದೆ. 272 ಕೆರೆಗಳಲ್ಲಿ ಶೇ.30 ರಿಂದ 50 ರಷ್ಟುನೀರು ಭರ್ತಿಯಾಗಿದೆ.

5 ಜಿಲ್ಲೆಯ 45 ಕೆರೆ ಭರ್ತಿ: ಬರದ ನಾಡು ಎಂದು ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ 138 ಕೆರೆಗಳಿದ್ದು, ಈ ಪೈಕಿ 31 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಉಳಿದಂತೆ ಬೆಂಗಳೂರು ನಗರದ 6 ಕೆರೆ, ಚಾಮರಾಜ ನಗರದ 5, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡು ಹಾಗೂ ರಾಮನಗರದ ಎರಡು ಕೆರೆ ಮಾತ್ರ ಭರ್ತಿಯಾಗಿವೆ. ಮಳೆ ಕೈಕೊಟ್ಟರೆ ಈ ಸಂಖ್ಯೆಯೂ ಕಡಿಮೆಯಾಗಲಿದೆ. ಉಳಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ಯಾವೊಂದು ಕೆರೆಯೂ ಭರ್ತಿಯಾಗಿಲ್ಲ.

ಕೆರೆಗಳಲ್ಲಿ ನೀರಿನ ಸಂಗ್ರಹ ವಿವರ
ನೀರಿನ ಸಂಗ್ರಹ ಪ್ರಮಾಣ ಕೆರೆಗಳ ಸಂಖ್ಯೆ

ಖಾಲಿ 508
ಶೇ.30ರಷ್ಟು 1,283
ಶೇ.31-50ರಷ್ಟು 897
ಶೇ.51-99ರಷ್ಟು 940
ಭರ್ತಿ 45
ಒಟ್ಟು ಕೆರೆ 3,673

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ವಿಭಾಗವಾರು ಅಧಿಕಾರಿಗಳ ಸಭೆ ನಡೆಸಿ ವಿವಿಧ ಯೋಜನೆಯಡಿ ಕೆರೆಗಳಿಗೆ ನೀರು ತುಂಬಲು ಸೂಚಿಸಿದ್ದೇನೆ. ಪ್ರಾಣಿ ಪಕ್ಷಿ ಹಾಗೂ ಜಲಚರಗಳಿಗೆ ಅಗತ್ಯವಿರುಷ್ಟು ನೀರು ಹರಿಸಲಾಗುವುದು. ಮಳೆ ನೀರನ್ನು ಅವಲಂಬಿಸಿರುವ ಕೆರೆಗಳಿಗೆ ನೀರು ತುಂಬುವುದು ಕಷ್ಟ.
- ಎನ್‌.ಎಸ್‌.ಬೋಸರಾಜು, ಸಚಿವ, ಸಣ್ಣ ನೀರಾವರಿ ಇಲಾಖೆ

Latest Videos
Follow Us:
Download App:
  • android
  • ios