ಬೆಂಗಳೂರು(ಡಿ.17): ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಗಾಗಿ ಒತ್ತಾಯಿಸಿ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಿರುವ ಕುರುಬ ಸಮುದಾಯದ ನಾಯಕರು ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ನಗರದ ಮೌರ್ಯ ಸರ್ಕಲ್‌ನಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ್‌ ಮೂರ್ತಿ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಎಸ್‌ಟಿ ಮೀಸಲಾತಿ ಪಡೆಯುವ ಸಂಬಂಧ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಮಾವೇಶದಲ್ಲಿ ಮಾಡಬೇಕಾದ ಹಕ್ಕೋತ್ತಾಯಗಳು, ಸಮುದಾಯದವರನ್ನು ಸೇರಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆ

ಈ ವೇಳೆ ಮಾತನಾಡಿದ ಸಚಿವ ಕೆ.ಎಸ್‌.ಈಶ್ವರಪ್ಪ, ನಾವು ಸುಮ್ಮನೆ ಕುಳಿತುಕೊಂಡರೆ ಎಸ್‌ಟಿ ಮೀಸಲು ಸಿಗುವುದಿಲ್ಲ. ಕೇಂದ್ರ ಸರ್ಕಾರದ ಒಲವು ಗಳಿಸಿಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಗಮನಕ್ಕೆ ಬರುವ ರೀತಿಯಲ್ಲಿ ಆಂದೋಲನ ನಡೆಸಬೇಕು. ಯಾಕೆ ಕೆಲವರು ಬಂದಿಲ್ಲ ಎಂದು ನೋಡಲು ಹೋಗದೆ, ಚರ್ಚೆಗಳು ಮಾಡುತ್ತಾ ಹೋದರೆ ಪ್ರಯೋಜನ ಇಲ್ಲ. ನಮ್ಮ ಉದ್ದೇಶ ಎಸ್‌ಟಿ ಮೀಸಲು ಪಡೆಯುವುದು. ಸ್ವಾಮೀಜಿಗಳ ನೇತೃತ್ವದಲ್ಲಿ ಎಸ್‌ಟಿ ಮೀಸಲು ಪಡೆಯುವವರೆಗೂ ಹೋರಾಟ ನಿಲ್ಲಿಸುವುದು ಬೇಡ ಎಂದು ಹೇಳಿದರು.

ಕೇಂದ್ರದ ನಾಯಕರನ್ನು ಭೇಟಿಯಾಗಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಬೇಕು ಎನ್ನುವ ಬೇಡಿಕೆಯನ್ನು ಗಮನಕ್ಕೆ ತಂದಿದ್ದೇವೆ. ಎಸ್‌ಟಿ ಮೀಸಲು ಕುರಿತು ರಾಜ್ಯದಲ್ಲಿ ದೊಡ್ಡ ಆಂದೋಲನವೇ ನಡೆಯುತ್ತಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ನಮ್ಮ ಆಂದೋಲನವು ಜಾತ್ರೆ ರೂಪದಲ್ಲಿ ನಡೆಯುತ್ತಿದೆ. ಇನ್ನೂ ಕೆಲವರು ನಮ್ಮನ್ನು ಕರೆದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಇದು ಕರೆಯುವುದಲ್ಲ, ಅವರೇ ಬಂದು ಸೇರ್ಪಡೆಯಾಗುವಂತಹ ಆಂದೋಲನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು.