ಮಸೀದಿ ಉದ್ಘಾಟಿಸಿದ ಸ್ವಾಮೀಜಿ ಪಾದಪೂಜೆ ಮಾಡಿದ ಮುಸ್ಲಿಮರು
ಕೊಪ್ಪಳ ಜಿಲ್ಲೆಯ ತಳಬಾಳು ಗ್ರಾಮದಲ್ಲಿ ನಿರ್ಮಿಸಲಾದ ಮಸೀದಿಯೊಂದನ್ನು ಕುಕನೂರು ಸ್ವಾಮೀಜಿ ಉದ್ಘಾಟನೆ ಮಾಡಿದ್ದು, ಮುಸ್ಲಿಂ ಸಮುದಾಯದವರು ಸ್ವಾಮೀಜಿ ಪಾದಪೂಜೆ ಮಾಡಿ ಗೌರವಿಸಿದ್ದಾರೆ.
ಕೊಪ್ಪಳ (ಜು.27): ದೇಶದಲ್ಲಿ ಧಾರ್ಮಿಕವಾಗಿ ಭಾರಿ ಸಾಕಷ್ಟು ವಿವಾದಗಳು ಹಾಗೂ ಗಲಭೆಗಳು ನಡೆಯುತ್ತಿವೆ. ಆದರೆ, ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಕೊಪ್ಪಳ, ಗದಗ ಸೇರಿ ಕೆಲವು ಕಲ್ಯಾಣ ಕರ್ನಾಟದ ಜಿಲ್ಲೆಗಳಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಭಾವೈಕ್ಯತೆ ದೇಶಕ್ಕೆ ಮಾದರಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಮಸೀದಿಯೊಂದನ್ನು ಉದ್ಘಾಟನೆ ಮಾಡಿದ ಸ್ವಾಮೀಜಿಯ ಪಾದ ಪೂಜೆಯನ್ನು ಮಾಡಿ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ತಳಬಾಳು ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬವಿದೆ. ಇವರು ಪ್ರತಿ ಬಾರಿ ನಾಮಜ್ ಮಾಡುವುದಕ್ಕಾಗಿ ಬೇರೆ ಬೇರೆ ಗ್ರಾಮಗಳಿಗೆ ಹೋಗಬೇಕಾಗುತ್ತು. ಇನ್ನು ಶುಕ್ರವಾರ ಪ್ರಾರ್ಥನೆಗೆ ಹೋದಾಗ ಕೆಲಸ ಕಾರ್ಯಗಳಿಗೆ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದ ಗ್ರಾಮಸ್ಥರ ನೆರವಿನೊಂದಿಗೆ ಮುಸ್ಲಿಂ ಕುಟುಂಬವು ತಳಬಾಳು ಗ್ರಾಮದಲ್ಲಿಯೇ ಹೊಸದಾಗಿ ಮಸೀದಿಯೊಂದನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಇನ್ನು ಉದ್ಘಾಟನೆಗೆ ಯಾವ ಮೌಲ್ವಿಗಳೂ ಬೇಡವೆಂದು ಹಿಂದೂ ಸ್ವಾಮೀಜಿಯನ್ನು ಕರೆಯಲು ತೀರ್ಮಾನಿಸಿದ್ದಾರೆ.
ಕೊಪ್ಪಳ: ಮಸೀದಿ ಉದ್ಘಾಟಿಸಿದ ಶ್ರೀಗಳಿಗೆ ಪಾದಪೂಜೆ ನೆರವೇರಿಸಿದ ಮುಸ್ಲಿಂ ಮುಖಂಡರು
ಸ್ವಾಮೀಜಿ ಕೂರಿಸಿ ಪಾದಪೂಜೆ ನೆರವೇರಿಸಿದ ಮುಸ್ಲಿಮರು: ಇನ್ನು ಈ ಬಗ್ಗೆ ಕುಕನೂರಿನ ಶ್ರೀ ಅಭಿನವ ಅನ್ನದಾನೀಶ್ವರ ಸ್ವಾಮೀಜಿ ಅವರ ಬಳಿಗೆ ಹೋಗಿ ಮಸೀದಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲು ಆಮಂತ್ರಿಸಿದ್ದಾರೆ. ಇದಕ್ಕೆ ಒಪ್ಪಿದ ಸ್ವಾಮೀಜಿ ಬರುವುದಾಗಿ ಭರವಸೆ ನೀಡಿದ್ದರು. ಇದಾದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಬಂದು ಹಲವು ಮುಸ್ಲಿಂ ಸಮುದಾಯದ ಮುಖಂಡರ ನೃತೃತ್ವದಲ್ಲಿ ಮಸೀದಿಯನ್ನು ಉದ್ಘಾಟನೆ ಮಾಡಿದ್ದಾರೆ. ಇದಾದ ನಂತರ ಹಿಂದೂಗಳ ಸಂಪ್ರದಾಯದಂತೆ ಸ್ವಾಮೀಜಿ ಅವರನ್ನು ಮಸೀದಿಯಲ್ಲಿ ಕೂರಿಸಿ ಪೂಜೆ ಮಾಡಿದ್ದಾರೆ. ಈ ವೇಳೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೌಹಾರ್ದತೆಯಿಂದ ಪೂಜೆ ಮಾಡಿದ್ದಾರೆ.
ಗ್ರಾಮದಲ್ಲಿರುವುದು ಒಂದೇ ಮುಸ್ಲಿಂ ಕುಟುಂಬ: ಕಳೆದ ಎರಡು ವರ್ಷಗಳ ಹಿಂದೆ ಮುಸ್ಲಿಂ ಕುಟುಂಬದ ವ್ಯಕ್ತಿ ಸಾವನ್ನಪ್ಪಿದ್ದಾಗ, ಹಿಂದೂಗಳು ಬಂದು ಅವರ ಅಂತ್ಯಕ್ರಿಯೆಗೆ ಭಾಗವಹಿಸಿದ್ದರು. ಮುಸ್ಲಿಂ ಪದ್ದತಿಯಂತೆ ಅಂತ್ಯಕ್ರಿಯೆ ನೆರವೇರಿಸಲು ಮುಂದಾದಾಗ ಹಿಂದೂಗಳು ಕೂಡ ಅವರ ಸ್ನೇಹ ಹಾಗೂ ಧಾರ್ಮಿಕ ಭಾವೈಕ್ಯತಾ ಮನೋಭಾವದಿಂದ ಕಾಯಿ ಒಡೆದು, ಕರ್ಪೂರ ಬೆಳಗಿ ನಮನ ಸಲ್ಲಿಸಿದ್ದರು. ಇದು ಗ್ರಾಮದ ಹಿಂದೂ ಮುಸ್ಲಿಂ ಸಹೋದರತೆಗೆ ಸಾಕ್ಷಿಯಾಗಿತ್ತು. ಇದಾದ ನಂತರ ತಳಬಾಳ ಗ್ರಾಮದಲ್ಲಿರುವ ಮುಸ್ಲಿಂ ಕುಟುಂಬ ಪ್ರಾರ್ಥನೆಗೆ ಬೇರೆ ಗ್ರಾಮಕ್ಕೆ ಹೋಗುವುದನ್ನು ತಪ್ಪಿಸಿ ತಮ್ಮ ಗ್ರಾಮದಲ್ಲಿಯೇ ಒಂದು ಮಸೀದಿ ನಿರ್ಮಾಣಕ್ಕೆ ನೆರವಾಗಿದ್ದಾರೆ.
ಭಾನಾಪುರದ ಮಸೀದಿ ಉದ್ಘಾಟಿಸಿದ ಗವಿಸಿದ್ದೇಶ್ವರ ಶ್ರೀ
ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುತ್ತಿರುವ ಕುಕನೂರು: ಇನ್ನು ಕಳೆದ ಮೂರು ವಾರಗಳ ಹಿಂದೆ ಇದೇ ಕುಕನೂರು ತಾಲೂಕಿನ ಭಾನಾಪೂರದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಮಸೀದಿಯನ್ನು ಉದ್ಘಾಟನೆ ಮಾಡಿದ್ದರು. ಇದಾದ ನಂತರ ಯಲಬುರ್ಗಾ, ಕುಕನೂರು ಉಭಯ ಶ್ರೀಗಳು ಕಳೆದ ನಾಲ್ಕು ದಿನಗಳ ಹಿಂದೆ ಕುಕನೂರು ಪಟ್ಟಣದಲ್ಲಿಯೂ ಸಹ ಮಸೀದಿ ಉದ್ಘಾಟಿಸಿದ್ದರು. ಈಗ ಗುರುವಾರ ತಾಲೂಕಿನ ತಳಬಾಳು ಗ್ರಾಮದಲ್ಲಿ ಮಸೀದಿ ಕುಕನೂರಿನ ಶ್ರೀಗಳು ಮಸೀದಿ ಉದ್ಘಾಟಿಸಿ ಧಾರ್ಮಿಕ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಸದಾ ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದೆ.