ಕೊಪ್ಪಳ: ಮಸೀದಿ ಉದ್ಘಾಟಿಸಿದ ಶ್ರೀಗಳಿಗೆ ಪಾದಪೂಜೆ ನೆರವೇರಿಸಿದ ಮುಸ್ಲಿಂ ಮುಖಂಡರು

ಕೊಪ್ಪಳ ಜಿಲ್ಲೆಯ ಕುಕನೂರಿನ ಇಟಗಿ ಮಸೀದಿಯಲ್ಲಿ ಕೋಮು ಸಾಮರಸ್ಯದ ಅಪರೂಪದ ಕ್ಷಣ, ಸತ್ಕಾರ್ಯ ಭಾವವೇ ಬದುಕಿನ ಸತ್ಯ ಎಂದು ಪ್ರತಿಪಾದಿಸಿದ ಸ್ವಾಮೀಜಿ. 

Muslims Performed Padapuja to Swamiji Who Inaugurated the Mosque at Kuknoor in Koppal grg

ಕುಕನೂರು(ಜು.25):  ಪಟ್ಟಣದ ಇಟಗಿಯ ನೂತನ ಮಸೀದಿಯನ್ನು ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು, ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಅಭಿನವ ಅನ್ನದಾನೀಶ್ವರ ಶ್ರೀಗಳು ಉದ್ಘಾಟಿಸಿದ್ದು, ಮಸೀದಿಯ ಪದಾಧಿಕಾರಿಗಳು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಈ ಅಪರೂಪದ ಕ್ಷಣಕ್ಕೆ ಸೋಮವಾರ ನೂರಾರು ಜನರು ಸಾಕ್ಷಿಯಾದರು. ಈ ಮೂಲಕ ಪಟ್ಟಣವು ಸೌಹಾರ್ದದ ಕೇಂದ್ರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶ್ರೀಗಳು ಮಸೀದಿ ಉದ್ಘಾಟಿಸಿ, ಲೋಬಾನ ಹಾಕಿ ಪ್ರಾರ್ಥಿಸಿ, ಶುಭ ಹಾರೈಸಿದರು.

ಬಳಿಕ ಮಾತನಾಡಿದ ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯರು, ಮನುಷ್ಯ ಸಾರ್ಥಕ ಜೀವನ ನಡೆಸಬೇಕು. ಸಾಧು, ಸಂತರು, ಸೂಫಿಗಳು ಮನುಷ್ಯನ ಮನಸ್ಸು ಪರಿವರ್ತಿಸಿದ್ದರು. ಪ್ರತಿಯೊಬ್ಬರಲ್ಲಿ ಭಾವೈಕ್ಯತೆ ಬಿಂಬಿಸಬೇಕು. ಬಿದ್ದವರನ್ನು, ಬೀಳುತ್ತಿರುವವರನ್ನು ಮೇಲಕ್ಕೆತ್ತಿ ಸರಿಯಾದ ಹಾದಿಯಲ್ಲಿ ಮುನ್ನಡೆಸುವುದೇ ನಿಜವಾದ ಧರ್ಮವಾಗಿದೆ. ಬಡವರನ್ನು, ಅನಾಥರನ್ನು ರಕ್ಷಿಸುವ ಕೆಲಸ ಆಗಬೇಕು. ಹುಟ್ಟು ಖಚಿತ, ಸಾವು ಅನಿವಾರ್ಯ. ಇವರೆಡರ ನಡುವೆ ಸಮಾಜದಲ್ಲಿ ಒಂದಾಗಿ ಬಾಳುವ ಕಾರ್ಯ ಆಗಬೇಕು ಎಂದರು.

ರಾಜಕಾರಣ ನೆಪದಲ್ಲಿ ಅಂಜನಾದ್ರಿಗೆ ಜೀವಕಳೆ: ಭಕ್ತರಿಂದ ಹರಿದುಬಂತು 6 ಕೋಟಿ ಹಣದ ಹೊಳೆ

ಸಂತರ ನುಡಿಯಲ್ಲಿ ಮೋಕ್ಷ ಇದೆ. ಅವರ ನುಡಿ ಆಲಿಸಿ ಕೃತಾರ್ಥರಾಗಬೇಕು. ಮನುಜ ಸತ್ಕಾರ್ಯದ ಭಾವ ತಾಳಬೇಕು. ಜ್ಞಾನದ ಬೆಳಕು ಪಡೆಯುವಾಗ ಕೊಂಚ ಮನುಷ್ಯನಲ್ಲಿ ಮಂಕು ಬರುವುದು ಸಹಜ. ಆ ಮಂಕು ಸರಿಸಿ ದೀಪದ ಬೆಳಕು ಪಡೆಯಬೇಕು. ಸಾಧಕ-ಬಾಧಕಗಳ ಅರಿವು ಮನುಷ್ಯನಿಗೆ ಇರಬೇಕು ಎಂದರು.

ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಅಭಿನವ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ತಿದ್ದುವ ಕೆಲಸವನ್ನು ಹಿಂದೂ-ಮುಸ್ಲಿಮರು ಒಂದಾಗಿ ಮಾಡುತ್ತಿದ್ದಾರೆ. ಇಸ್ಲಾಂ ಅಂದರೆ ಶಾಂತಿ. ದೇವರ ಪೂಜೆ, ಕಾಯಕ ಮಾಡಲು ಬಂದಿದ್ದೇವೆ ಎನ್ನುವುದನ್ನು ಇಸ್ಲಾಂ ಸಾರುತ್ತದೆ. ಸಮಾಜಕ್ಕೆ ನಾವು ಏನು ನೀಡುತ್ತೇವೆಯೋ ಅದೇ ನಮಗೆ ಹಿಂದಿರುಗುತ್ತದೆ. ಪುಣ್ಯದ ಕಾರ್ಯ ಮಾಡಿದರೆ ಪುಣ್ಯ, ಪಾಪದ ಕಾರ್ಯ ಮಾಡಿದರೆ ಪಾಪ ಮರಳುತ್ತದೆ. ಧರ್ಮದಿಂದ ಧರ್ಮ ಕಟ್ಟಲು ಆಗದು. ಪ್ರೀತಿಯಿಂದ ಧರ್ಮ ಕಟ್ಟಬಹುದು. ಈ ಹಿಂದೆ ಎಲ್ಲ ಜಾತಿಗಳನ್ನು ಒಗ್ಗೂಡಿಸುವ ಕಾರ್ಯವನ್ನು ವೀರಶೈವ ಮಠಾಧೀಶರು ಮಾಡಿದರು. ಹಾಗೆ ಮಹಮ್ಮದ್‌ ಪೈಗಂಬರರು ಸಮಾಜದ ಶಾಂತಿ, ನೆಮ್ಮದಿಗಾಗಿ ಶ್ರಮಿಸಿದರು ಎಂದರು.

ಮಸೀದಿಯ ಧರ್ಮಗುರು ಮಹಮ್ಮದ್‌ ಅಲಿ ಮಾತನಾಡಿ, ಹಿಂದೂ-ಮುಸ್ಲಿಮರು ಸಮಾಜದ ಎರಡು ಕಣು ಇದ್ದಂತೆ. ಹಿಂದೂಗಳ ಹಬ್ಬವನ್ನು ಮುಸ್ಲಿಮರು, ಮುಸ್ಲಿಮರ ಹಬ್ಬವನ್ನು ಹಿಂದೂಗಳು ಸಾಮರಸ್ಯದಿಂದ ಆಚರಣೆ ಮಾಡುವುದು ಸಹೋದರತ್ವದ ಸಂಕೇತ ಎಂದರು. ನಂತರ ಪ್ರಾರ್ಥನೆ ಸಲ್ಲಿಸಿದರು.

Latest Videos
Follow Us:
Download App:
  • android
  • ios