Asianet Suvarna News Asianet Suvarna News

ಭಾರತ ವಿಶ್ವಗುರುವಾಗುವ ಕನಸು ಕಂಡಿದ್ದ ಅಂಬೇಡ್ಕರ್‌: ಶಾಸಕ ಪಿ.ರಾಜೀವ್‌

ಡಾ.ಅಂಬೇಡ್ಕರ್‌ ಜಾಗತಿಕ ರಾಜಕೀಯದ ಅತ್ಯಂತ ಪ್ರಮುಖ ವಿಶ್ಲೇಷಕರಾಗಿದ್ದರು. ಅಮೆರಿಕ, ಯುರೋಪ್‌ ಖಂಡಗಳಲ್ಲಿ ಹಲವು ವರ್ಷಗಳ ಕಾಲ ಇದ್ದ ಅನುಭವವೂ ಅವರಿಗೆ ನೆರವಾಗಿತ್ತು. ಚೀನಾ ದೇಶವು ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚಿಕೊಳ್ಳಲಿದೆಯೆಂಬುದನ್ನು ಮೊದಲು ಗುರುತಿಸಿದ್ದು ಡಾ.ಅಂಬೇಡ್ಕರ್‌: ಕುಡಚಿ ಶಾಸಕ ಪಿ.ರಾಜೀವ್‌ 

Kudachi MLA P Rajeev Talks Over Dr BR Ambedkar grg
Author
First Published Apr 14, 2023, 12:20 PM IST

ಬೆಂಗಳೂರು(ಏ.14):  ಅರ್ಥತಜ್ಞ, ಸಮಾಜ ವಿಜ್ಞಾನಿ, ಮುತ್ಸದ್ದಿ, ಲೇಖಕ, ಪತ್ರಕರ್ತ, ಪತ್ರಿಕೋದ್ಯಮಿ, ವಾಗ್ಮಿ, ಕಾನೂನುತಜ್ಞ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಎಲ್ಲವೂ ಆಗಿದ್ದ ಅಂಬೇಡ್ಕರರು ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಮಾನವತಾವಾದಿಯಾಗಿದ್ದರು.

ಡಾ.ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌ ಎಂಬುದು ಕೇವಲ ಹೆಸರೇ? ಅಲ್ಲ, ಅದೊಂದು ಧೀಃಶಕ್ತಿ. ದೇಶದ ಕೋಟ್ಯಂತರ ಮನಗಳಿಗೆ ಭರವಸೆ ತುಂಬುವ ಚೈತನ್ಯ. ದೇಶದ ಉದ್ದಗಲದಲ್ಲಿ ನಾವು ಡಾ.ಅಂಬೇಡ್ಕರರ ಪ್ರತಿಮೆಗಳನ್ನು ನೋಡುತ್ತೇವೆ. ಸಮಾಜದ ದಮನಿತ ಸಮುದಾಯದ ಕೋಟ್ಯಂತರ ಮಂದಿ ಆ ಪ್ರತಿಮೆಯಲ್ಲಿ ತಮ್ಮ ಬದುಕಿನ ಬಹು ದೊಡ್ಡ ಚಾಲಕಶಕ್ತಿಯನ್ನು ಗುರುತಿಸುತ್ತಾರೆ. ಸಮಾಜದ ದಲಿತ, ದಮನಿತ ವರ್ಗದ ಅಸಂಖ್ಯಾತ ಹೃದಯಗಳಿಗೆ ಜೈ ಭೀಮ್‌ ಎಂಬುದು ಕೇವಲ ಘೋಷಣೆಯಲ್ಲ, ಪ್ರೇರಣಾದಾಯಿ ಮಂತ್ರವೇ ಆಗಿದೆ.

ದೇಶದ ಏಕತೆ, ಪ್ರಜಾಪ್ರಭುತ್ವ ಉಳಿಯಲು ಅಂಬೇಡ್ಕರ್‌ ಹೆಣೆದ ಸೂತ್ರ ಕಾರಣ: ಸಿಎಂ ಬೊಮ್ಮಾಯಿ

ಬಾಬಾಸಾಹೇಬರ ಜೀವನ ಶುರುವಾದದ್ದು ತೀರ ಸಾಮಾನ್ಯವರ್ಗದ ಕುಟುಂಬದಲ್ಲಿ ಜನಿಸುವ ಮೂಲಕ. ಆರ್ಥಿಕವಾಗಿ ತೀರ ಬಡತನವೆಂಬುದಿರದಿದ್ದರೂ ಜಾತಿಯಿಂದ ಅಸ್ಪೃಶ್ಯನಾಗಿ ಸಮಾಜದ ತೀವ್ರ ಉಪೇಕ್ಷೆಗೆ ಗುರಿಯಾದ ಅಂಬೇಡ್ಕರ್‌ ಬದುಕಿನ ಹಲವು ಕಹಿಸತ್ಯಗಳನ್ನು ಬಾಲ್ಯದಲ್ಲೇ ಕಂಡರು, ಉಂಡರು. ಶಾಲೆಯಲ್ಲಿ ಎಲ್ಲರಿಗಿಂತ ಓದಿನಲ್ಲಿ ಮುಂದಿದ್ದರೂ ಮುಂದಿನ ಸಾಲಿನಲ್ಲಿ ಕೂತು ಪಾಠ ಕೇಳುವ ಭಾಗ್ಯ ಅವರಿಗಿರಲಿಲ್ಲ. ಸಾರ್ವಜನಿಕರಿಗಾಗಿ ಮೀಸಲಾದ ಬಾವಿ, ಕೆರೆಗಳಲ್ಲಿ ಅವರ ಜಾತಿಯವರು ನೀರು ಸೇದುವಂತಿರಲಿಲ್ಲ. ಸಮಾಜದ ಎಲ್ಲ ಮುಖ್ಯ ಕಾರ್ಯಕ್ರಮಗಳಲ್ಲೂ ಇದೊಂದು ಸಮುದಾಯವನ್ನು ಹೊರಗಿಡಲಾಗಿತ್ತು. ಇಂಥ ನೂರು ನೋವು, ಅಪಮಾನಗಳು ಅಂಬೇಡ್ಕರರ ವ್ಯಕ್ತಿತ್ವಕ್ಕೆ ಒಂದೊಂದು ಉಳಿಪೆಟ್ಟುಗಳಾಗಿ ಒದಗಿಬಂದವು. ಈ ಜಾತಿ ಅಸಮಾನತೆ, ಅಸ್ಪೃಶ್ಯತೆಗಳ ಶೃಂಖಲೆ ಕಡಿಯಬೇಕಾದರೆ ವಿದ್ಯೆ, ಅಧಿಕಾರಗಳಿಂದ ಮಾತ್ರ ಸಾಧ್ಯ ಎಂಬುದನ್ನರಿತ ಅಂಬೇಡ್ಕರ್‌ ಆ ದಾರಿಯಲ್ಲಿ ಯಾರೂ ನಿಬ್ಬೆರಗಾಗಿ ನೋಡುವಂಥ ಸಾಧನೆ ಮಾಡಿದರು. ವಿದೇಶಕ್ಕೆ ಹೋಗಿ ಎರಡೆರಡು ಡಿಗ್ರಿಗಳನ್ನು ಸಂಪಾದಿಸಿದರು, ಭಾರತದಲ್ಲಿ ವಕೀಲಿ ವೃತ್ತಿಯನ್ನು ಕೈಗೆತ್ತಿಕೊಂಡು ದಮನಿತರ ದನಿಯಾದರು. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಮಟ್ಟದ ನಾಯಕನಾಗಿ ಬೆಳೆದುನಿಂತರು. ದೇಶವು ಸ್ವತಂತ್ರವಾಗುವುದು ಖಚಿತವಾದಾಗ ಸ್ವತಂತ್ರ ಸರ್ಕಾರವನ್ನು ರಚಿಸಿಕೊಳ್ಳಬೇಕಾದ, ಅದಕ್ಕೆ ತಕ್ಕ ಸ್ವತಂತ್ರ ಸಂವಿಧಾನವನ್ನು ರೂಪಿಸಬೇಕಾದ ಅವಶ್ಯಕತೆ ಬಂದಾಗ ಅದಕ್ಕೆ ಡಾ.ಅಂಬೇಡ್ಕರರಿಗಿಂತ ಸೂಕ್ತ ವ್ಯಕ್ತಿಗಳಿಲ್ಲವೆಂಬುದು ನಿಶ್ಚಿತವಾಗಿತ್ತು. ಜಗತ್ತಿನ ಹತ್ತಾರು ದೇಶಗಳ ಸಂವಿಧಾನಗಳನ್ನು ತುಲನಾತ್ಮಕವಾಗಿ ಅವಲೋಕಿಸಿ, ಅದಕ್ಕಾಗಿ ನೂರಾರು ಚರ್ಚೆ-ಸಂವಾದಗಳಲ್ಲಿ ಪಾಲ್ಗೊಂಡು, ದಾಖಲೆಯ ಅವಧಿಯಲ್ಲಿ ಸಂವಿಧಾನವನ್ನು ರಚಿಸಿಕೊಟ್ಟ ಕೀರ್ತಿ ಡಾ.ಅಂಬೇಡ್ಕರರಿಗೆ ಸಲ್ಲುತ್ತದೆ. ಅರ್ಥತಜ್ಞ, ಸಮಾಜ ವಿಜ್ಞಾನಿ, ಮುತ್ಸದ್ದಿ, ಲೇಖಕ, ಪತ್ರಕರ್ತ, ಪತ್ರಿಕೋದ್ಯಮಿ, ವಾಗ್ಮಿ, ಕಾನೂನುತಜ್ಞ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಎಲ್ಲವೂ ಆಗಿದ್ದ ಅಂಬೇಡ್ಕರರು ಎಲ್ಲಕ್ಕಿಂತ ಮುಖ್ಯವಾಗಿ ಮಾನವತಾವಾದಿಯಾಗಿದ್ದರು.

ಧರ್ಮ, ರಿಲಿಜನ್ನುಗಳ ವಿಶ್ಲೇಷಕ

ಡಾ.ಅಂಬೇಡ್ಕರರು ಸಂವಿಧಾನ ತಜ್ಞರಾಗಿ, ಕಾನೂನು ವಿದ್ವಾಂಸರಾಗಿ ಮಾಡಿದ ಸಾಧನೆಯೇನೋ ಗೊತ್ತೇ ಇದೆ. ಆದರೆ ಅದರ ಜೊತೆಗೆ ಅವರು ಧರ್ಮ ಮತ್ತು ರಿಲಿಜನ್‌ಗಳ ಅತ್ಯಂತ ಸೂಕ್ಷ್ಮ ವಿಶ್ಲೇಷಕರೂ ಆಗಿದ್ದರೆಂಬುದು ಬಹಳ ಮಂದಿಗೆ ಗೊತ್ತಿಲ್ಲ. ಇಸ್ಲಾಂ ರಿಲಿಜನ್ನಿನ ಅತ್ಯಂತ ಸೂಕ್ಷ್ಮಸಂಗತಿಗಳನ್ನು ಮೊದಲ ಬಾರಿಗೆ ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿದ ವ್ಯಕ್ತಿ ಡಾ.ಅಂಬೇಡ್ಕರ್‌. ಮುಸ್ಲಿಂ ಬ್ರದರ್‌ಹುಡ್‌, ಟಕಿಯ, ಬುರ್ಖಾ, ದಾರುಲ್‌-ಇಸ್ಲಾಂ ಮುಂತಾದ ಹಲವು ವಿಷಯಗಳನ್ನು ಅವರು ನಿರ್ಭೀತಿಯಿಂದ ಚರ್ಚಿಸಿದ್ದಾರೆ. ಭಾರತದ ವಿಭಜನೆಯಾಗುವ ಸಂದರ್ಭದಲ್ಲಿ ಅವರು, ಧರ್ಮದ ಆಧಾರದಲ್ಲೇ ಈ ವಿಭಜನೆಯಾಗುವುದಾದರೆ ದೇಶಗಳ ನಡುವೆ ನಾಗರಿಕರ ವಿನಿಮಯ ಕೂಡ ಆಗಲಿ ಎಂಬುದನ್ನು ಬಲವಾಗಿ ಪ್ರತಿಪಾದಿಸಿದರು. ಅಲ್ಲದೆ ಇಸ್ಲಾಂ ಮತೀಯರು ತಮ್ಮ ಮತಗ್ರಂಥಗಳಲ್ಲಿರುವ ಹುಳುಕುಗಳನ್ನು ತ್ಯಜಿಸಿ ಆಧುನಿಕರಾಗದೆ ಹೋದರೆ ಅದು ವಿಶ್ವಶಾಂತಿಗೆ ಅಪಾಯವನ್ನು ತಂದೊಡ್ಡಬಲ್ಲುದೆಂಬುದನ್ನು ತಮ್ಮ ಗ್ರಂಥ ಥಾಟ್ಸ್‌ ಆನ್‌ ಪಾಕಿಸ್ತಾನ್‌ ಕೃತಿಯಲ್ಲಿ ಅಂಬೇಡ್ಕರ್‌ ಪ್ರತಿಪಾದಿಸಿದರು.

ಜಾಗತಿಕ ರಾಜಕೀಯ ತಜ್ಞ

ಡಾ.ಅಂಬೇಡ್ಕರ್‌ ಜಾಗತಿಕ ರಾಜಕೀಯದ ಅತ್ಯಂತ ಪ್ರಮುಖ ವಿಶ್ಲೇಷಕರಾಗಿದ್ದರು. ಅಮೆರಿಕ, ಯುರೋಪ್‌ ಖಂಡಗಳಲ್ಲಿ ಹಲವು ವರ್ಷಗಳ ಕಾಲ ಇದ್ದ ಅನುಭವವೂ ಅವರಿಗೆ ನೆರವಾಗಿತ್ತು. ಚೀನಾ ದೇಶವು ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚಿಕೊಳ್ಳಲಿದೆಯೆಂಬುದನ್ನು ಮೊದಲು ಗುರುತಿಸಿದ್ದು ಡಾ.ಅಂಬೇಡ್ಕರ್‌. 1951ರಲ್ಲಿ ಲಖ್ನೋ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತಾಡುತ್ತಿದ್ದಾಗ ಅಂಬೇಡ್ಕರ್‌ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ, ಜಾಗತಿಕ ಮಟ್ಟದಲ್ಲಿ ದೇಶದ ಸ್ಥಿತಿಯನ್ನು ಉತ್ತಮಪಡಿಸುವಂತಿರಬೇಕೇ ಹೊರತು ಅದನ್ನು ಕೆಳಕ್ಕೆ ತಳ್ಳುವಂತಿರಬಾರದು. ಭಾರತವೇಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸ್ಥಾನ ಪಡೆಯುವ ಬಗ್ಗೆ ಯೋಚಿಸುತ್ತಿಲ್ಲ? ದೇಶದ ಪ್ರಧಾನಿಗಳು ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಯಾವೊಂದು ಪ್ರಯತ್ನವನ್ನೂ ಮಾಡುತ್ತಿಲ್ಲವೇಕೆ? ಭಾರತ ಕಮ್ಯುನಿಸ್ಟ್‌ ಮಾದರಿಯ ಸರ್ವಾಧಿಕಾರಿ ಧೋರಣೆಯನ್ನು ಕೈಬಿಟ್ಟು ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ ಕೆಲಸ ಮಾಡಬೇಕು ಎಂದು ಕರೆಕೊಟ್ಟಿದ್ದರು. ಅಲ್ಲದೆ ಮಾವೋನಿಗೆ ಪಂಚಶೀಲ ತತ್ತ್ವದಲ್ಲಿ ಯಾವುದೇ ನಂಬಿಕೆ ಇಲ್ಲ. ಇಂಥವರ ಜೊತೆ ಭಾರತ ಪಂಚಶೀಲವನ್ನು ಅನುಸರಿಸುತ್ತದೆಂಬುದೇ ಹಾಸ್ಯಾಸ್ಪದ ಎಂದೂ ಗುಡುಗಿದ್ದರು (ಅದಾಗಿ 11 ವರ್ಷಗಳ ನಂತರ ಭಾರತದ ಭಾಯಿ ಭಾಯಿ ಘೋಷಣೆಯನ್ನು ಬದಿಗೆ ತಳ್ಳಿ ಚೀನಾ ಯುದ್ಧಘೋಷಣೆ ಮಾಡಿತು!). ಸ್ವತಂತ್ರ ಭಾರತದಲ್ಲಿ ಪ್ರಧಾನಮಂತ್ರಿಯ ಹುದ್ದೆ ನೆಹರೂ ಬದಲಿಗೆ ಡಾ.ಅಂಬೇಡ್ಕರರಿಗೆ ಸಂದಿದ್ದರೆ ಭಾರತದ ಜಾಗತಿಕ ಸ್ಥಾನಮಾನಗಳು ಎಂದೋ ಬದಲಾಗುತ್ತಿದ್ದವು!

ತ್ಯಾಗ, ಬಲಿದಾನದ ಫಲವಾಗಿ ಭಾರತ ಬಲಿಷ್ಠವಾಗಿದೆ: ಡಾ.ಜಿ.ಪರಮೇಶ್ವರ್‌

ನಿಜವಾದ ಭಾರತ ರತ್ನ

ಡಾ.ಅಂಬೇಡ್ಕರ್‌ ಸಂವಿಧಾನವನ್ನು ರಚಿಸಿಕೊಟ್ಟನಂತರ ಆಗಿನ ಕಾಂಗ್ರೆಸ್‌ ಸರ್ಕಾರವು ಅವರನ್ನು ಕೆಟ್ಟದಾಗಿ ನಡೆಸಿಕೊಂಡಿತು. 1952ರ ಸಾರ್ವತ್ರಿಕ ಚುನಾವಣೆ ಹಾಗೂ 1954ರ ಮಧ್ಯಂತರ ಚುನಾವಣೆ - ಈ ಎರಡೂ ಸಂದರ್ಭಗಳಲ್ಲಿ ನೆಹರೂ ಅವರು ಅಂಬೇಡ್ಕರ್‌ ಪರ ನಿಲ್ಲಲಿಲ್ಲ. ದಾದರ್‌ ಲೋಕಸಭಾ ಕ್ಷೇತ್ರದಲ್ಲಿ ಅಂಬೇಡ್ಕರರಿಗೆ ಸೋಲುಣ್ಣಿಸಬೇಕೆಂಬುದು ಕೆಲ ಕಾಂಗ್ರೆಸಿಗರ ಗುರಿಯಾಗಿತ್ತು. ಸೋಷಲಿಸ್ಟ್‌ ಪಾರ್ಟಿ ಮತ್ತು ಸಿಎಸ್‌ಎಫ್‌ ಎಂಬೆರಡು ಪಕ್ಷಗಳ ಜೊತೆ ಸೇರಿಕೊಂಡ ಜನಸಂಘವು ಕೊನೆಗೆ ಡಾ.ಅಂಬೇಡ್ಕರರು ರಾಜ್ಯಸಭೆಯ ಸದಸ್ಯರಾಗುವಂತೆ ನೊಡಿಕೊಂಡಿತು. 1950ರ ದಶಕದಿಂದ ಸತತ ನಾಲ್ಕು ದಶಕಗಳುದ್ದಕ್ಕೂ ಕಾಂಗ್ರೆಸ್‌ ಸರ್ಕಾರ ಡಾ.ಅಂಬೇಡ್ಕರರ ಸಾಹಿತ್ಯವನ್ನು ಮುದ್ರಿಸಲು ಉತ್ಸಾಹ ತೋರಲಿಲ್ಲ. ಅವರಿಗೆ ಯಾವುದೇ ಪ್ರಶಸ್ತಿಗಳನ್ನೂ ಕೊಡಲಿಲ್ಲ. ಅಧಿಕಾರಕ್ಕೆ ಬಂದ ಪ್ರಧಾನಿಗಳು ತಮಗೆ ತಾವೇ ಭಾರತರತ್ನ ಕೊಟ್ಟುಕೊಂಡರೂ ಅಂಬೇಡ್ಕರರಿಗೆ ದೇಶದ ಉನ್ನತ ನಾಗರಿಕ ಸನ್ಮಾನಗಳನ್ನು ಕೊಡಬೇಕೆಂದು ಅವರಿಗನ್ನಿಸಲೇ ಇಲ್ಲ. ಕೊನೆಗೆ 1990ರಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲವಿದ್ದ ಜನತಾ ಸರ್ಕಾರ ಡಾ.ಅಂಬೇಡ್ಕರರಿಗೆ ಮರಣೋತ್ತರ ಭಾರತ ರತ್ನವನ್ನು ಪ್ರದಾನಿಸಿ ಐತಿಹಾಸಿಕ ತಪ್ಪನ್ನು ಸರಿಪಡಿಸಿತು.

ಅಂಬೇಡ್ಕರ್‌ಗೆ ಶಾಶ್ವತ ಗೌರವ

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ.ಅಂಬೇಡ್ಕರರ ಜೀವನದ ಐದು ಮಹತ್ವದ ಸ್ಥಳಗಳನ್ನು (ಸ್ಮೃತಿಸ್ಥಳ) ಒಟ್ಟಾಗಿ ಪಂಚತೀರ್ಥ ಎಂದು ಗುರುತಿಸಿ ಅಭಿವೃದ್ಧಿಪಡಿಸಿತು. ಅಲ್ಲದೆ ಅಂಬೇಡ್ಕರರ ಪರಿನಿರ್ವಾಣದ ದಿನವನ್ನು (ನವೆಂಬರ್‌ 26) ಪ್ರತಿ ವರ್ಷ ಸಂವಿಧಾನ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹೀಗೆ ಚರಿತ್ರೆಯಲ್ಲಿ ತಪ್ಪಿಹೋಗಿದ್ದ ಗೌರವವನ್ನು ಮತ್ತೆ ಅಂಬೇಡ್ಕರರಿಗೆ ದೊರಕಿಸಿಕೊಡುವ ಕೆಲಸವು ತಡವಾಗಿಯಾದರೂ ಆಗಿದೆ ಎಂಬುದೇ ಸಮಾಧಾನದ ವಿಷಯ. ಅಂಬೇಡ್ಕರರು ಕಂಡ ಕನಸಿನ ಸಾಕಾರ ಈಗಾಗುತ್ತಿದೆ. ದಲಿತ, ದಮನಿತ, ಶೋಷಿತ ವರ್ಗಗಳ ನಿಜವಾದ ಸಬಲೀಕರಣ ಇತ್ತೀಚೆಗೆ ನಡೆಯುತ್ತಿದೆ. ಎಸ್ಸಿ/ಎಸ್ಟಿಸಮುದಾಯಗಳಿಗೆ ಹತ್ತಾರು ಆರ್ಥಿಕ ನೆರವಿನ ಯೋಜನೆಗಳು ಬಂದಿವೆ; ಆ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಗುರಿ ಈಡೇರುತ್ತಿದೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಇಂದು ಸಮಾಜದ ಅತ್ಯಂತ ನಿಮ್ನ ವರ್ಗದ ಮಹಿಳೆಯೊಬ್ಬರು ಅಲಂಕರಿಸಿರುವುದೇ ಈ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯ ಅತ್ಯುನ್ನತ ವಿಜಯ ಎನ್ನಬಹುದು. ಇದು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರರ ಜೀವನ-ಸಾಧನೆ-ಸಂಕಲ್ಪಗಳಿಗೆ ಈ ದೇಶವು ಸಲ್ಲಿಸಬಹುದಾದ ನಿಜವಾದ ಗೌರವ.

Follow Us:
Download App:
  • android
  • ios