ಬೆಂಗಳೂರು(ಡಿ.22): ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಕೆಎಸ್‌ಆರ್‌ಟಿಸಿ ಕೊರೋನಾ ಸೋಂಕಿಗೆ ಬಲಿಯಾದ ನೌಕರರ ಕುಟುಂಬಕ್ಕೆ 30 ಲಕ್ಷ ರು. ನೀಡುವ ಸಂಬಂಧ ಮೃತ ನೌಕರರ ಪಟ್ಟಿ ಸಿದ್ಧಪಡಿಸಲು ಮುಂದಾಗಿದೆ. 

ಇತ್ತೀಚೆಗೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ನಾಲ್ಕು ರಸ್ತೆ ಸಾರಿಗೆ ನಿಗಮಗಳು ಮುಷ್ಕರ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಹೊರತುಪಡಿಸಿ ಉಳಿದೆಲ್ಲ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ್ದ ರಾಜ್ಯ ಸರ್ಕಾರ ಇದೀಗ ಒಂದೊಂದೇ ಬೇಡಿಕೆ ಈಡೇರಿಕೆಗೆ ಮುಂದಾಗಿದೆ. ಮೊದಲಿಗೆ ಕೊರೋನಾಗೆ ಬಲಿಯಾದ ಸಾರಿಗೆ ನೌಕರರ ಪಟ್ಟಿಸಿದ್ಧಪಡಿಸಿ ನೀಡುವಂತೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೋನಾದಿಂದ 50ಕ್ಕೂ ಹೆಚ್ಚಿನ ನೌಕರರು ಮೃತರಾಗಿದ್ದಾರೆ. ಇದೀಗ ನಿಖರ ಮಾಹಿತಿ ಹಾಗೂ ವೈದ್ಯಕೀಯ ದೃಢೀಕರಣ ಪತ್ರದೊಂದಿಗೆ ಮೃತ ನೌಕರರ ಪಟ್ಟಿಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ.

ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳೇನು? ಇಲ್ಲಿದೆ ಡಿಟೇಲ್ಸ್

ವೈದ್ಯಕೀಯ ಪ್ರಮಾಣ ಪತ್ರ:

ಈ ಸೂಚನೆ ಅನ್ವಯ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೊರೋನಾದಿಂದ ಮೃತಪಟ್ಟ ನೌಕರರ ಪಟ್ಟಿ ಸಿದ್ಧಪಡಿಸಬೇಕು. ಇದಕ್ಕೆ ಪೂರಕವಾಗಿ ಆಯಾ ಜಿಲ್ಲಾ ವೈದ್ಯಾಧಿಕಾರಿಗಳಿಂದ ನೌಕರರು ಕೊರೋನಾದಿಂದ ಮೃತರಾದ ಬಗ್ಗೆ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಬಳಿಕ ಈ ದಾಖಲೆ ಪರಿಶೀಲಿಸಲಿರುವ ನಿಗಮದ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪರಿಹಾರ ನೀಡುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಪ್ರಸ್ತಾವನೆ ಪರಿಶೀಲಿಸಿ ಸರ್ಕಾರ ಮೃತ ನೌಕರರ ಕುಟುಂಬಕ್ಕೆ ತಲಾ 30 ಲಕ್ಷ ರು. ಪರಿಹಾರ ನೀಡಲು ಕ್ರಮ ಕೈಗೊಳ್ಳಲಿದೆ.