ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಬೈಕ್ ಮತ್ತು ಸ್ಕೂಟರ್‌ಗಳನ್ನು ಖರೀದಿಸುವುದರಿಂದ ಹಣ ಉಳಿಸಬಹುದು. ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ CT-110X, ಟಿವಿಎಸ್ ರೇಡಿಯನ್, ಯಮಹಾ ರೇ-ಜೆಡ್‌ಆರ್ ಇತ್ಯಾದಿ.

ಬೆಂಗಳೂರು (ಫೆ.13): ರಾಜ್ಯದಲ್ಲಿ ಪ್ರತಿದಿನ ಎನ್ನುವಂತೆ ಬಡವ ದಿನನಿತ್ಯ ಬಳಕೆ ಮಾಡುವ ಅಗತ್ಯ ಸೇವೆಗಳು ವಸ್ತುಗಳ ದರ ಏರಿಕೆ ಮಾಡಲಾಗುತ್ತಿದೆ. ಕಳೆದ ತಿಂಗಳು ಸಾರಿಗೆ ನಿಗಮಗಳು ತಮ್ಮ ಬಸ್‌ ದರವನ್ನು ಶೇ. 15ರಷ್ಟು ಭರ್ಜರಿಯಾಗಿ ಏರಿಕೆ ಮಾಡಿದ ಬರೆ ತಾಳಿಕೊಳ್ಳುವ ಹೊತ್ತಿಗೆ ಬೆಂಗಳೂರಿನ ಬಡವರಿಗೆ ಮೆಟ್ರೋ ದರ ಏರಿಕೆ ಬರೆಯನ್ನು ಸರ್ಕಾರ ನೀಡಿದೆ. ಮೆಟ್ರೋ ದರ ಏರಿಕೆ ಬಗ್ಗೆ ಪ್ರತಿದಿನ ಎನ್ನುವಂತೆ ಮಾತನಾಡಿದ್ದ ಸರ್ಕಾರ, ದರ ಇಳಿಕೆ ಮಾಡುವ ವಿಚಾರ ಬಂದಾಗ ಚಿಂತನೆ ಮಾಡುತ್ತೇವೆ ಅನ್ನೋ ಮಾತನಾಡಿದ್ದಾರೆ. ಮೊದಲು ಪ್ರತಿದಿನದ ಮೆಟ್ರೋ ಖರ್ಚು 50 ರೂಪಾಯಿ ಆಗಿದ್ದರೆ, ಈಗ ಅದು 100 ರೂಪಾಯಿ ಆಗಿದೆ. ಅಂದರೆ, ದುಪಟ್ಟು. ಅದರ ಬದಲು 100 ರೂಪಾಯಿ ಪೆಟ್ರೋಲ್‌ ಹಾಕಿಸಿಕೊಂಡು ಒಳ್ಳೆ ಮೈಲೇಜ್‌ ಇರುವ ಬೈಕ್‌ ಅಥವಾ ಸ್ಕೂಟರ್‌ ಖರೀದಿ ಮಾಡಿದರೆ, ತಿಂಗಳಿಗೆ ಕನಿಷ್ಠವೆಂದರೂ 2 ಸಾವಿರ ರೂಪಾಯಿ ಉಳಿತಾಯ ಮಾಡಬಹುದಾಗಿದೆ. ಮೊದಲೇ ಹಣದುಬ್ಬರದಿಂದ ಬೇಸತ್ತಿದ್ದ ಜನಕ್ಕೆ ಬಸ್‌ ಹಾಗೂ ಮೆಟ್ರೋ ದರ ಏರಿಕೆ ಬೆನ್ನಲ್ಲೇ ತಿಂಗಳ ಉಳಿತಾಯ ಮಾಯವಾಗಿದೆ. ತಿಂಗಳ ಕೊನೆಯಲ್ಲಿ ಅಲ್ಲಿ-ಇಲ್ಲಿ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸುಮ್ಮನೆ ಬಸ್‌, ಮೆಟ್ರೋಗೆ ತಿಂಗಳ ದುಡಿಮೆಯ ಹೆಚ್ಚಿನ ಹಣವನ್ನು ಹಾಕುವ ಬದಲು, ಟ್ರಾಫಿಕ್‌ನಲ್ಲೂ ಕಿರಿಕಿರಿ ಇಲ್ಲದೆ ಸಾಗುವಂಥ ಮೈಲೇಜ್‌ ಗಾಡಿಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಈ ಬೈಕ್‌ ಅಥವಾ ಸ್ಕೂಟರ್‌ ಖರೀದಿ ಆರಂಭದಲ್ಲಿ ಕಿಸೆಗೆ ಭಾರಿ ಹೊಡೆತ ಎನ್ನಬಹುದಾದರೂ, ಕೆಲ ವರ್ಷಗಳಲ್ಲಿಯೇ ನಿಮಗೆ ಉಳಿತಾಯ ಆಗೋದು ಖಂಡಿತ.


ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus): ಮೈಲೇಜ್‌ ಬೈಕ್‌ ಎಂದಾಗ ಮೊದಲಿಗೆ ಬರೋ ಹೆಸರು ಹೀರೋ ಮೋಟೋಕಾರ್ಪ್‌ ಕಂಪನಿಯ 'ಹೀರೋ ಸ್ಪ್ಲೆಂಡರ್ ಪ್ಲಸ್'. ಹಲವು ವರ್ಷಗಳಿಂದ ಇದು ಮಾರುಕಟ್ಟೆಯಲ್ಲಿದೆ. ದೇಶದಲ್ಲಿ ಅತ್ಯಂತ ಬೇಡಿಕೆ ಇರುವ ಬೈಕ್‌ ಇದು. ಇದರ ಎಕ್ಸ್‌ಶೋ ರೂಮ್‌ಬೆಲೆ 77,026 ರೂಪಾಯಿಯಿಂದ ಆರಂಭವಾಗುತ್ತದೆ. 1 ಲೀಟರ್‌ಪೆಟ್ರೋಲ್‌ಗೆ 70 ರಿಂ 80 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ.

ಬಜಾಜ್ ಸಿ‌ಟಿ-110ಎಕ್ಸ್ (Bajaj CT-110X): ಸ್ಪ್ಲೆಂಡರ್ ಪ್ಲಸ್ ರೀತಿಯಲ್ಲೇ ಮೈಲೇಜ್‌ ನೀಡುವ ಇನ್ನೊಂದು ಬೈಕ್‌ ಬಜಾಜ್‌ ಕಂಪನಿಯ ಸಿಟಿ-110ಎಕ್ಸ್. ಸ್ಪ್ಲೆಂಡರ್ ಪ್ಲಸ್‌ಗಿಂತ ಸ್ವಲ್ಪ ಕಡಿಮೆ ಬೆಲೆಯೂ ಇದಕ್ಕಿದೆ.ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 68,328 ರೂಪಾಯಿ. ಇದು ಸುಮಾರು 70 ಕಿ.ಮೀವರೆಗೆ ಮೈಲೇಜ್‌ ನೀಡುತ್ತದೆ.

ಬಜಾಜ್ ಪ್ಲಾಟಿನಾ ( Bajaj Platina):  ಬಜಾಜ್ ಕಂಪನಿಯ ಮತ್ತೊಂದು ಬೈಕ್‌ 'ಬಜಾಜ್ ಪ್ಲಾಟಿನಾ 100'. ಇದರ ಎಕ್ಸ್ ಶೋ ರೂಂ ಬೆಲೆ 68,890 ರೂ. ಈ ಬೈಕ್ 70 ಕಿ.ಮೀ. ಮೈಲೆಜ್ ನೀಡುವ ಸಾಮರ್ಥ್ಯ ಹೊಂದಿದೆ.

ಟಿ‌ವಿ‌ಎಸ್ ರೇಡಿಯನ್ (TVS Radeon): ಟಿವಿಎಸ್‌ ಕಂಪನಿಯ ರೇಡಿಯನ್ ಬೈಕ್ ಕೂಡ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇದರ ಎಕ್ಸ್ ಶೋ ರೂಂ ಮೌಲ್ಯ 69,429 ರೂ. ಆಗಿದ್ದು ಇದು 74 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ. 

ದರ ಇಳಿಕೆಗೆ ಮುಂದಾದ ನಮ್ಮ ಮೆಟ್ರೋ; ಎಷ್ಟು ಕಡಿಮೆಯಾಗುತ್ತೆ? BMRCL ಎಂಡಿ ಹೇಳಿದ್ದೇನು?

ಯಮಹಾ ರೇ-ಜೆಡ್‌ಆರ್ (Yamaha Ray-ZR): ಯುವಕ-ಯುವತಿಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ್ದ ದ್ವಿಚಕ್ರ ವಾಹನ ಯಮಹಾ ರೇ-ಜೆಡ್‌ಆರ್. ಬಲಿಷ್ಠ ಎಂಜಿನ್‌ನೊಂದಿಗೆ ತಯಾರಿಸಲ್ಪಟ್ಟಿರುವ ಯಮಹಾ ರೇ-ಜೆಡ್‌ಆರ್ 125 ಎಫ್‌ಐ ಹೈಬ್ರಿಡ್ ಸ್ಕೂಟರ್ ಆಗಿದ್ದು ಬರೋಬ್ಬರಿ 71.33ಕಿ.ಮೀ. ನಷ್ಟು ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ 87,888 ರೂ. ಗಳು. 

ನಮ್ಮ ಮೆಟ್ರೋ ದರ ಏರಿಕೆ ಬಳಿಕ ನಾಲ್ಕೇ ದಿನದಲ್ಲಿ 80 ಸಾವಿರ ಪ್ರಯಾಣಿಕರು ಕಡಿಮೆ!