Asianet Suvarna News Asianet Suvarna News

ಸಾರಿಗೆ ನೌಕರರ ವಿರುದ್ಧ ಕೆಎಸ್‌ಆರ್‌ಟಿಸಿ ಕೇಸ್‌

*     ನಷ್ಟ ವಸೂಲಿ ಮಾಡಲು ಸಿಟಿ ಸಿವಿಲ್‌ ಕೊರ್ಟ್‌ನಲ್ಲಿ ದಾವೆ
*     2020ರ ಡಿ.11ರಿಂದ 14ರವರೆಗೆ ನಡೆದಿದ್ದ ಅನಧಿಕೃತ ಮುಷ್ಕರ
*     ಮುಷ್ಕರದಲ್ಲಿ ಕೆಎಸ್‌ಆರ್‌ಟಿಸಿಗೆ 28.52 ಕೋಟಿ ರು. ನಷ್ಟ  
 

KSRTC Case Against Employees grg
Author
Bengaluru, First Published Sep 15, 2021, 9:48 AM IST

ಬೆಂಗಳೂರು(ಸೆ.15):  ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ನಡೆಸಿದ ಅನಧಿಕೃತ ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಸಿಟಿ ಸಿವಿಲ್‌ ಕೊರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ಹೈಕೋರ್ಟ್‌ಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಮಾಹಿತಿ ನೀಡಿದೆ.

ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ನೌಕರರಿಂದಲೇ ವಸೂಲಿ ಮಾಡಲು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ನಿರ್ದೇಶಿಸಲು ಕೋರಿ ಸಮರ್ಪಣಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು

ವಿಚಾರಣೆ ವೇಳೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ, 2020ರ ಡಿ.11ರಿಂದ 14ರವರೆಗೆ ಸಾರಿಗೆ ನೌಕರರ ಕೂಟ ಅನಧಿಕೃತವಾಗಿ ಮುಷ್ಕರ ನಡೆಸಿದೆ. ಮುಷ್ಕರದಲ್ಲಿ ಬಿಎಂಟಿಸಿಯ ನಾಲ್ಕು ವಲಯದಿಂದ ಒಟ್ಟು 3,676 ನೌಕರರು ಭಾಗವಹಿಸಿದ್ದರು. 23 ಬಿಎಂಟಿಸಿ ಬಸ್‌ಗಳು ಹಾನಿ ಮಾಡಲಾಗಿತ್ತು. ಈ ಸಂಬಂಧ 12 ಎಫ್‌ಐಆರ್‌ ಮತ್ತು 11 ಎನ್‌ಸಿಆರ್‌ ದಾಖಲಿಸಲಾಗಿದೆ. 43 ಪ್ರಕರಣದಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಒಟ್ಟು 2,66,24,510 ರು. ನಷ್ಟ ವಸೂಲು ಮಾಡುವ ಸಂಬಂಧ ನಗರದ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಸಾರಿಗೆ ಮುಷ್ಕರ ವೇಳೆ ಆಸ್ತಿ ನಷ್ಟ ಮಾಡಿದವರನ್ನೇಕೆ ಬಂಧಿಸಿಲ್ಲ?: ಹೈಕೋರ್ಟ್‌

2021ರ ಏ.7ರಿಂದ 21ರವರೆಗೆ ಮತ್ತೆ ಅನಧಿಕೃತ ಮುಷ್ಕರ ಸಂಬಂಧ ಒಟ್ಟು 2,494 ನೌಕರರು ವಿರುದ್ಧ ಅಮಾನತು ಆದೇಶ ಹೊರಡಿಸಲಾಗಿತ್ತು. ಅದರಲ್ಲಿ 2,421 ನೌಕರರ ವಿರುದ್ಧದ ಅಮಾನತು ಆದೇಶವನ್ನು ಹಿಂಪಡೆಯಲಾಯಿತು. ಉಳಿದ 73 ನೌಕರರ ವಿರುದ್ಧ ಅಮಾನತು ಆದೇಶ ಹಿಂಪಡೆದಿಲ್ಲ. ಮುಷ್ಕರದಲ್ಲಿ ಭಾಗಿಯಾದ ನೌಕರರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.

2020ರ ಡಿ.11ರಿಂದ 14ರವರೆಗೆ ನಡೆಸಿದ ಅನಧಿಕೃತ ಮುಷ್ಕರದಲ್ಲಿ ಕೆಎಸ್‌ಆರ್‌ಟಿಸಿಗೆ 28.52 ಕೋಟಿ ರು. ನಷ್ಟ ಉಂಟಾಗಿದೆ. 56 ಬಸ್‌ಗಳನ್ನು ಹಾನಿಗೊಳಿಸಿದ ಪರಿಣಾಮ 2.50 ಲಕ್ಷ ರು. ನಷ್ಟ ಉಂಟಾಗಿದೆ. 2021ರ ಏ.7ರಿಂದ 21ರವರೆಗೆ ನಡೆದ ಅನಧಿಕೃತ ಮುಷ್ಕರ ಸಂಬಂಧ 152 ನೌಕರರನ್ನು ಅಮಾನತು ಮಾಡಲಾಗಿತ್ತು. ಅದರಲ್ಲಿ 11 ಜನರ ಅಮಾನತು ಆದೇಶ ಹಿಂಪಡೆಯಲಾಗಿದೆ. 136 ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 839 ನೌಕರರನ್ನು ವರ್ಗಾವಣೆ ಮಾಡಲಾಗಿತ್ತು. ಅದರಲ್ಲಿ 511 ಆದೇಶಗಳನ್ನು ಹಿಂಪಡೆಯಲಾಯಿತು. ಉಳಿದ 328 ನೌಕರರ ಪೈಕಿ 81 ನೌಕರರ ವಿರುದ್ಧ ಆಸ್ತಿ ಹಾನಿಗೊಳಿಸಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನೆ ನೀಡಿದ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ. ತಪ್ಪು ಮಾಡಿರುವ ನೌಕರರ ವಿರುದ್ಧ ತನಿಖೆಯನ್ನು ಮುಂದುವರಿಸಲಾಗುವುದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಗತ್ಯ ಕ್ರಮ ಕೈಗೊಂಡಿರುವುದರಿಂದ ನ್ಯಾಯಾಲಯ ಹೆಚ್ಚಿನ ನಿರ್ದೇಶನ ನೀಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್‌ ವಾದ ಮಂಡಿಸಿದ್ದರು.
 

Follow Us:
Download App:
  • android
  • ios