* ಮುಷ್ಕರ ವೇಳೆ ನಡೆದ ದಾಂಧಲೆ* ತಪ್ಪಿತಸ್ಥರನ್ನು ಪತ್ತೆ ಹಚ್ಚುವುದು ಕಷ್ಟ* ಆ.12 ರೊಳಗೆ ತನಿಖಾ ವಿಚಾರಣೆ ಮುಂದೂಡಿದ ನ್ಯಾಯಾಲಯ
ಬೆಂಗಳೂರು(ಜು.03): ಕಳೆದ ಡಿಸೆಂಬರ್ ವೇಳೆ ನಡೆದ ಸಾರಿಗೆ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದವರನ್ನು ಏಕೆ ಪತ್ತೆ ಹಚ್ಚಿ ಬಂಧಿಸಿಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಅರ್ಜಿ ಶುಕ್ರವಾರ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಹಾಜರಾಗಿ, ಮುಷ್ಕರ ವೇಳೆ ನಡೆದ ದಾಂಧಲೆಗೆ ಸಂಬಂಧಿಸಿದಂತೆ ದಾಖಲಿಸಿದ ಹತ್ತು ಪ್ರಕರಣಗಳ ಕುರಿತ ತನಿಖೆಯ ವಿವರ ಒಳಗೊಂಡ ವರದಿಯನ್ನು ಸಲ್ಲಿಸಿದರು.
ವರದಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ, ನೇತೃತ್ವದ ವಿಭಾಗೀಯ ಪೀಠ, ಒಂದು ಪ್ರಕರಣದಲ್ಲಿ ಸಿ ರಿಪೋರ್ಟ್ ಸಲ್ಲಿಸಲಾಗಿದೆ, ಉಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಆದರೆ, ಸಿಸಿಟಿವಿ ದೃಶ್ಯಾವಳಿ ಇದ್ದರೂ ತಪ್ಪಿತಸ್ಥರನ್ನು ಪತ್ತೆ ಹಚ್ಚಿಸಲು ಏಕೆ ಸಾಧ್ಯವಾಗಿಲ್ಲ. ಕಲ್ಲು ಹೊಡೆಯುವವರನ್ನು ಏಕೆ ಬಂಧಿಸಿಲ್ಲ. ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡಿರಬೇಕಲ್ಲವೇ? ಎಂದು ಪ್ರಶ್ನಿಸಿತು.
ಸಾರಿಗೆ ಇಲಾಖೆಗೆ 4000 ಕೋಟಿ ನಷ್ಟ: ಡಿಸಿಎಂ ಸವದಿ
ಸಾರಿ ಮುಷ್ಕರದ ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದಲೇ ನಷ್ಟ ಮೊತ್ತವನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣಾ ಸಾಂಸ್ಕತಿಕ ಸಾಮಾಜಿಕ ಸೇವಾ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಸರ್ಕಾರಿ ವಕೀಲರು ಉತ್ತರಿಸಿ, ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ತಪ್ಪಿತಸ್ಥರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆದರೂ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಆ ಪ್ರಕರಣಗಳ ಸಂಬಂಧ ಆ.12 ರೊಳಗೆ ತನಿಖಾ ವರದಿಯನ್ನು ವಿಚಾರಣೆಯನ್ನು ಮುಂದೂಡಿತು.
