ಕೃಷ್ಣಾ ಮೇಲ್ದಂಡೆ: ಡಿ.12ರಿಂದ ಕಾಲುವೆಗೆ ನೀರು ಬಿಡುಗಡೆ ಹಿಂಗಾರು ಬೆಳೆಗೆ ಒಟ್ಟು 69 ದಿನಗಳ ಕಾಲ ನೀರು ಬಿಡುಗಡೆಗೆ ನಿರ್ಧಾರ
ಬೆಂಗಳೂರು (ನ.23) : ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಡಿ.12 ರಿಂದ ಮಾ.30 ರವರೆಗೆ 69 ದಿನಗಳ ಕಾಲ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಾಗಲಕೋಟೆ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಿ.ಸಿ. ಪಾಟಿಲ್ ಅಧ್ಯಕ್ಷತೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧರಿಸಲು ಸಭೆ ನಡೆಸಲಾಯಿತು.
ಕೃಷ್ಣಾ ಮೇಲ್ದಂಡೆ: ಜಮೀನು ಪರಿಹಾರ ಹೆಚ್ಚಳಕ್ಕೆ ನಿರ್ಧಾರ: ಸಚಿವ ಅಶೋಕ್
ಈ ವೇಳೆ ನ.23ರ ವೇಳೆಗೆ ಆಲಮಟ್ಟಿಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಲಭ್ಯವಿರುವ 108.66 ಟಿಎಂಸಿ (ಆಲಮಟ್ಟಿ103.47 ಟಿಎಂಸಿ, ನಾರಾಯಣಪುರ 5.19 ಟಿಎಂಸಿ) ನೀರನ್ನು ಹಿಂಗಾರು ಹಂಗಾಮಿನ ಬೆಳೆಗಳಿಗೆ ಸಮರ್ಪಕವಾಗಿ ಹರಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
2022ರ ನ.24 ರಿಂದ 2023ರ ಜೂ.30 ರವರೆಗೆ ಅಗತ್ಯ ಬಳಕೆಗಳಾದ ಕುಡಿಯುವ ನೀರು, ಆವಿಯಾಗುವಿಕೆ, ಹಿನ್ನೀರಿನ ಬಳಕೆ, ಕೈಗಾರಿಕೆ ಇತ್ಯಾದಿಗಳಿಗೆ ಒಟ್ಟು 38.54 ಟಿಎಂಸಿ ನೀರು ಅಗತ್ಯವಾಗಲಿದೆ. ಉಳಿದಂತೆ ನೀರಾವರಿಗೆ ಅಂದಾಜು 68.97 ಟಿಎಂಸಿ ಲಭ್ಯವಾಗಲಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 5.91 ಟಿಎಂಸಿ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ರೈತರಿಗೆ ಉಪಯೋಗವಾಗುವಂತೆ ಮಾಡುವ ಕುರಿತು ಚರ್ಚಿಸಿದರು.
119 ದಿನ ಪೂರೈಕೆ:
2022-23ನೇ ಸಾಲಿನ ಹಿಂಗಾರು ಹಂಗಾಮಿಗೆ ಡಿ.12 ರಿಂದ 2023ರ ಮಾ.30ರವರೆಗೆ 14 ದಿನ ಚಾಲೂ ಹಾಗೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಿ 5 ಪಾಳಿಯಲ್ಲಿ 69 ದಿನಗಳು ನೀರು ಪೂರೈಸಲಾಗುವುದು. ಜತೆಗೆ ಪಾಳಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಒಟ್ಟು 119 ದಿನಗಳ ಕಾಲ ಹಿಂಗಾರು ಹಂಗಾಮಿಗೆ ನೀರು ಹರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜತೆಗೆ ನ.24 ರಿಂದ ಡಿ.11 ರವರೆಗೆ ಹಿಂಗಾರು ಹಂಗಾಮಿಗೆ ಬಿತ್ತನೆ ಕಾರ್ಯವನ್ನು ಏಕಕಾಲಕ್ಕೆ ಕೈಗೊಳ್ಳಲು ರೈತ ಸಮುದಾಯದ ಮನವೊಲಿಸಬೇಕು. ತನ್ಮೂಲಕ ರೈತರಿಗೆ ಸಮಸ್ಯೆಯಾಗದಂತೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದೂ ನಿರ್ಧರಿಸಲಾಯಿತು ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.
2 ರೀತಿಯ ಬೆಳೆಗಳಿಗೆ ನೀರು:
ಲಭ್ಯವಿರುವ ಶೇ.50 ರಷ್ಟುನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಬೆಳೆ ಪದ್ಧತಿ ಅನುಸಾರವಾಗಿ (ಹಿಂಗಾರು ಶೇ.35, ದ್ವಿಋುತು 15%) ಹಿಂಗಾರು ಹಂಗಾಮಿಗೆ ಲಘು ನೀರಾವರಿ ಬೆಳೆಗಳಿಗೆ ಮಾತ್ರ ಹಾಗೂ ಹಾಲಿ ಬೆಳೆದು ನಿಂತಿರುವ ದ್ವಿಋುತು ಬೆಳೆಗಳಿಗೆ ನೀರು ಹಂಚಿಕೆ ಮಾಡಲಾಗಿದೆ.
ಕೃಷ್ಣಾ ಮೇಲ್ದಂಡೆಗೆ ಡಿಸೆಂಬರೊಳಗೆ 3000 ಕೋಟಿ ವೆಚ್ಚ: ಸಚಿವ ಕಾರಜೋಳ
ನಿಷೇಧಿತ ಬೆಳೆಗಳಾದ ಭತ್ತ, ಕಬ್ಬು, ಬಾಳೆ ಇತ್ಯಾದಿ ಬೆಳೆಯದಿರಲು ಹಾಗೂ ಲಘು ನೀರಾವರಿ ಬೆಳೆಗಳಾದ ಜೋಳ, ಮೆಕ್ಕೆಜೋಳ, ಗೋದಿ, ಸೂರ್ಯಕಾಂತಿ, ಸಾಸಿವೆ, ಕಡಲೆ, ಶೇಂಗಾ, ಕುಸುಬಿ, ಸಜ್ಜೆ, ಸೊಪ್ಪು, ತರಕಾರಿ ಇತ್ಯಾದಿಗಳನ್ನು ಮಾತ್ರ ಬೆಳೆಯಲು ರೈತರಲ್ಲಿ ಮನವಿ ಮಾಡಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಸಚಿವ ಮುರುಗೇಶ್ ನಿರಾಣಿ, ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಜರಿದ್ದರು.
