ಕೃಷ್ಣಾ ಮೇಲ್ದಂಡೆ: ಜಮೀನು ಪರಿಹಾರ ಹೆಚ್ಚಳಕ್ಕೆ ನಿರ್ಧಾರ: ಸಚಿವ ಅಶೋಕ್
26 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಪರಿಹಾರ ನೀಡಲಾಗಿದೆ. ಇನ್ನೂ 50 ಸಾವಿರ ಎಕರೆಗೆ ಪರಿಹಾರ ನೀಡಬೇಕಿದೆ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಲು ತೀರ್ಮಾನ
ಬೆಂಗಳೂರು(ಅ.30): ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ ಭೂಸ್ವಾಧೀನ ವಿಚಾರವಾಗಿ ರೈತರ ಜಮೀನಿಗೆ ಹೆಚ್ಚಿನ ಪರಿಹಾರ ನೀಡುವ ತೀರ್ಮಾನ ಮಾಡಲಾಗಿದ್ದು, ಮತ್ತೊಂದು ಸಭೆಯಲ್ಲಿ ಪರಿಹಾರ ಎಷ್ಟುನೀಡಬೇಕು ಎಂಬುದರ ಕುರಿತು ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ಸಂಬಂಧ ರೈತರ ಜಮೀನಿಗೆ ಮಾರ್ಗಸೂಚಿ ಬೆಲೆ ನಿಗದಿ ವಿಚಾರವಾಗಿ ಶನಿವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 26 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಪರಿಹಾರ ನೀಡಲಾಗಿದೆ. ಇನ್ನೂ 50 ಸಾವಿರ ಎಕರೆಗೆ ಪರಿಹಾರ ನೀಡಬೇಕಿದೆ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು, ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಮತ್ತೊಂದು ಸಭೆ ನಡೆಸಿ ಪರಿಹಾರ ಎಷ್ಟು ನೀಡಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆಗೆ ಡಿಸೆಂಬರೊಳಗೆ 3000 ಕೋಟಿ ವೆಚ್ಚ: ಸಚಿವ ಕಾರಜೋಳ
ಪರಿಹಾರ ಸದ್ಯ ಎಕರೆಗೆ 1.5 ಲಕ್ಷ ರು. ನಷ್ಟಿದೆ. ಮೂರು ಪಟ್ಟು ಎಂದರೆ 8 ಲಕ್ಷ ರು. ನಷ್ಟುಆಗಬಹುದು. ರೈತರು ಇನ್ನೂ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ರೈತರಿಗೆ ಅನುಕೂಲವಾಗಲಿದೆ ಎಂದು ಭಾವಿಸಿ ಮಾನವೀಯತೆ ದೃಷ್ಟಿಯಿಂದ ಹೆಚ್ಚಳ ಮಾಡುವ ಕುರಿತು ನಿರ್ಧರಿಸಲಾಗಿದೆ. ರೈತರ ಹಿತ ಕಾಪಾಡುವುದು ನಮ್ಮ ಆದ್ಯತೆ ಆಗಲಿದೆ. ಯೋಜನೆಯನ್ನು ಬೇಗ ಕಾರ್ಯಗತಗೊಳಿಸುವುದು ಬಹಳ ಮುಖ್ಯವಾಗಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇತರರು ಉಪಸ್ಥಿತರಿದ್ದರು.