ನಮ್ಮ ಮೆಟ್ರೋ ಪಿಂಕ್ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಭಾಷಣಕ್ಕೆ ಅವಕಾಶ ನೀಡದಿರುವುದಕ್ಕೆ ಸಚಿವ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ನ್ಯಾಯಯುತ ಪಾಲು ಕೇಳಿದ್ದಕ್ಕೆ ಈ ರೀತಿ ಶಿಕ್ಷೆ ನೀಡಲಾಗಿದೆ ಎಂದು ಅವರು ಬೇಸರ ತೋರಿದ್ದಾರೆ.
ಬೆಂಗಳೂರು (ನ.13): ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ಅವರಿಂದ ಚಾಲನೆ ಪಡೆಯಲಿರುವ ನಮ್ಮ ಮೆಟ್ರೋ ಪಿಂಕ್ ಮಾರ್ಗ(Namma Metro Pink line)ದ ಉದ್ಘಾಟನಾ ಸಮಾರಂಭದಲ್ಲಿ ನಿಗದಿಯಾಗಿದ್ದ ತಮ್ಮ ಭಾಷಣಕ್ಕೆ ಇದ್ದಕ್ಕಿದ್ದಂತೆ ಅವಕಾಶ ನೀಡದೆ ಇರುವುದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ(Krishna Byre gowda) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಕೃಷ್ಣಬೈರೇಗೌಡ ಅವರು ಪ್ರಧಾನಿಯವರ ಕಾರ್ಯಕ್ರಮದಲ್ಲಿ ನಿಗದಿಯಾಗಿದ್ದ ವಿವರಗಳ ಸ್ಕ್ರೀನ್ ಶಾಟ್ ಟ್ಯಾಗ್ ಮಾಡಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ನನಗೆ ಸಿಕ್ಕ ಬಹುಮಾನ
‘ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ನನಗೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್!. ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ. ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ.
ಕರ್ನಾಟಕ ನ್ಯಾಯಯುತ ಪಾಲು ಕೇಳಿದ್ರೆ ಈ ಶಿಕ್ಷೆ!
ಬಹುತೇಕ ಬಂಡವಾಳ, ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ, ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನು ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.













