ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗ ನವೆಂಬರ್ 13ರಂದು ಉದ್ಘಾಟನೆಯಾಗಲಿದ್ದು, ನವೆಂಬರ್ 14ರಿಂದ ಸಾರ್ವಜನಿಕರ ಸಂಚಾರಕ್ಕೆ ಲಭ್ಯವಾಗಲಿದೆ. ಕಾಳೇನ ಅಗ್ರಹಾರದಿಂದ ಸಿದ್ದಗುಂಟೆ ಪಾಳ್ಯದವರೆಗೆ 7.5 ಕಿ.ಮೀ ಮಾರ್ಗ ಸಿದ್ಧವಾಗಿದೆ.

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿಲೋ ಮೀಟರ್ ಎತ್ತರಿಸಿದ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಉದ್ಘಾಟನೆ ಮಾಡಲಿದ್ದಾರೆ. ನವೆಂಬರ್ 14ರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನವೆಂಬರ್‌ 14ರಿಂದ ವಾಣಿಜ್ಯ ಸಂಚಾರ

ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗದ ಬೆಂಗಳೂರು ನಿವಾಸಿಗಳ ಬಹಳ ವರ್ಷಗಳ ನಿರೀಕ್ಷೆ. ಕಾಳೇನ ಅಗ್ರಹಾರದಿಂದ, ತಾವರೆ ಕೆರೆ ಸಿದ್ದಗುಂಟೆ ಪಾಳ್ಯ ವರೆಗಿನ ಮಾರ್ಗ ಇದೇ 13ನೇ ತಾರೀಖು ಉದ್ಘಾಟನೆ ಆಗಲಿದೆ. ನವೆಂರ್ 14ರಿಂದ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ. ಸದ್ಯ ಏಳೂವರೆ ಕಿಲೋ ಮೀಟರ್ ಮಾರ್ಗ ಸಾರ್ವಜನಿಕರಿಗೆ ಸದ್ಯಕ್ಕೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿಗೆ ಸಂತೋಷದ ಸುದ್ದಿ

ಇನ್ನು, ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಬಳಿ‌ ಇಂಟರ್ ಚೇಂಜ್ ಮಾಡಿಕೊಂಡು ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮಾರ್ಗದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಂದು ಟ್ರೈನ್ ಕಾರ್ಯ ನಿರ್ವಹಿಸಲಿವೆ. ಒಟ್ಟು ಐದು ಟ್ರೈನ್ ಗಳು ಪಿಂಕ್ ಮಾರ್ಗದಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಉಪಯೋಗ ನೋಡಿಕೊಂಡು ಇನ್ನೂ ಕಡಿಮೆ ನಿಮಿಷಗಳ ಲ್ಲಿ ಟ್ರೈನ್ ಲಭ್ಯತೆ ನೀಡಲಾಗುವುದು. ಇದು ಬೆಂಗಳೂರಿಗೆ ಸಂತೋಷದ ಸುದ್ದಿ, ಈ ಪಿಂಕ್ ಲೈನ್ ಮೆಟ್ರೋ ಮಾರ್ಗ ದೊಂದಿಗೆ ನಾವು ನೂರ ಎಪ್ಪತ್ತು ಕಿಲೋ ಮೀಟರ್ ಮೆಟ್ರೋ ಮಾರ್ಗವನ್ನು ತಲುಪಿದ್ದೇವೆ ಎಂದು ಸಚಿವರು ವಿವರಿಸಿದರು.

ಆರೆಂಜ್ ಲೈನ್ ಮಾರ್ಗಕ್ಕೆ ಗುದ್ದಲಿ ಪೂಜೆ

ಇದೇ ಸಂದರ್ಭದಲ್ಲಿ ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ ತಲುಪಲಿರುವ ಆರೆಂಜ್ ಲೈನ್ ಮಾರ್ಗದ ಕಾಮಗಾರಿಯನ್ನು ಮುಂದಿನ ಆರು ತಿಂಗಳಿನಲ್ಲಿ ಗುದ್ದಲಿ ಪೂಜೆ ಮಾಡಲಿದ್ದೇವೆ ಎಂದು ಸಚಿವರು ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ರಾಜ್ಯ ಸರ್ಕಾರದ ಮಹತ್ವದ ಮನವಿ

ಮೆಟ್ರೋ ಯೋಜನೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ಬಂಡವಾಳ ಹೂಡಿಕೆ ಅಂತ ಕೇವಲ ಹೇಳಿಕೊಳ್ಳಲು ಮಾತ್ರ ಇದೆ. ಆದರೆ ಶೇಕಡಾ 81ರಷ್ಟು ಬಂಡವಾಳ ರಾಜ್ಯ ಸರ್ಕಾರ ಭರಿಸುತ್ತಿದೆ. ಇದಲ್ಲದೇ ರಾಜ್ಯ ಸರ್ಕಾರ ಮೆಟ್ರೋ ದಲ್ಲಿ ಆಗುವ ನಷ್ಟವನ್ನು ಕೂಡಾ ಭರಿಸಬೇಕಿದೆ. ಈ ಅನುಪಾತ ತಾರತಮ್ಯ ವನ್ನು ಸರಿಪಡಿಸಬೇಕು. ಬೆಂಗಳೂರು ನಾನಾ ಭಾಗಗಳಿಂದ ಬಂದ ಕಂಪನಿಗಳಿಗೆ ಆಶ್ರಯ ತಾಣ, ಇಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಆಗುತ್ತಿದ್ದು, ಇದರಿಂದ ಲಾಭ ಕೂಡಾ ಬರುತ್ತೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಮೆಟ್ರೋ ಗಾಗಿ ಕೇಂದ್ರ ಸರ್ಕಾರ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದಾಗಬೇಕು. ಈ ವಿಚಾರವನ್ನು ಪ್ರಧಾನಿಗಳ ಗಮನಕ್ಕೆ ತರಲು ನಿರ್ಧಾರ ಮಾಡಿದ್ದೇವೆ. ಸಿಎಂ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬಿಳೇಕಹಳ್ಳಿ ಜನರ ಹೋರಾಟಕ್ಕೆ ಪ್ರತಿಫಲ

ಪಿಂಕ್ ಲೈನ್ ಮೆಟ್ರೋ ಮಾರ್ಗ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲೇ ಪಿಂಕ್‌ ಮೆಟ್ರೋ ಮಾರ್ಗದ 3 ನಿಲ್ದಾಣಗಳ ಹೆಸರು ಮರುನಾಮಕರಣಗೆ ಅನುಮೋದನೆ ಲಭ್ಯವಾಗಿದೆ. IIMB ಮೆಟ್ರೋ ನಿಲ್ದಾಣದ ಹೆಸರು ಮರುನಾಮಕರಣಕ್ಕೆ ಸ್ಥಳೀಯರು ಒತ್ತಾಯ ಮಾಡಿದರ ಫಲವಾಗಿ, ಉದ್ಘಾಟನೆಗೆ ಒಂದು ದಿನ ಬಾಕಿ ಇರುವಾಗಲೇ ಹೆಸರು ಮರುನಾಮಕರಣಕ್ಕೆ ಅನುಮೋದನೆ ಸಿಕ್ಕಿದೆ. ಇದರೊಂದಿಗೆ ಬಿಳೇಕಹಳ್ಳಿ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ.

ಹೆಸರು ಬದಲಾವಣೆ ಆದ ಮೆಟ್ರೋ ನಿಲ್ದಾಣಗಳು

IIMB ಮೆಟ್ರೋ‌ನಿಲ್ದಾಣದ ಹೆಸರು ಮರುನಾಮಕರಣಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ನೀಡಿದ್ದು, ಇದರೊಂದಿಗೆ iIMB ನಿಲ್ದಾಣ ಬಿಳೇಕಹಳ್ಳಿ IIMB ಎಂದು ಬದಲಾವಣೆ ಮಾಡಲಾಗಿದೆ. ಉಳಿದಂತೆ ಜೆಪಿ ನಗರ 4ನೇ ಹಂತ ಮೆಟ್ರೋ ನಿಲ್ದಾಣ ಎಂಬ ಹೆಸರನ್ನು ಎನ್ ಎಸ್ ಪಾಳ್ಯ ಜೆಪಿ ನಗರ 4ನೇ ಹಂತವೆಂದು, ತಾವರೆಕೆರೆ ಮೆಟ್ರೋ ನಿಲ್ದಾಣ- ಎಸ್ ಜಿ ಪಾಳ್ಯ ಎಂದು ಮರುನಾಮಕರಣಕ್ಕೆ ಅನುಮೋದನೆ ಸಿಕ್ಕಿದೆ.

Scroll to load tweet…

Scroll to load tweet…