ಕರ್ನಾಟಕದ ಜಲಾಶಯಗಳಲ್ಲಿ ತೇಲುವ ಸೌರಶಕ್ತಿ ಯೋಜನೆಗಳ ಮೂಲಕ 1500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಅನ್ವೇಷಿಸುತ್ತಿದ್ದು, ಈ ಯೋಜನೆಯ ಭಾಗವಾಗಲು ಹೂಡಿಕೆದಾರರನ್ನು ಆಹ್ವಾನಿಸಿದೆ.
ಬೆಂಗಳೂರು: ಕರ್ನಾಟಕದ ಜಲಾಶಯ ಹಾಗೂ ಜಲಮೂಲಗಳಿಂದ ಒಟ್ಟು 1,500 ಮೆ.ವ್ಯಾಟ್ ಸಾಮರ್ಥ್ಯದ ತೇಲುವ ಸೌರ ವಿದ್ಯುತ್ ಯೋಜನೆ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದ್ದಾರೆ.
ಈ ಯೋಜನೆಗಳ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಲು ಕೆಪಿಸಿಎಲ್ ವತಿಯಿಂದ ಸಾಧ್ಯತಾ ಅಧ್ಯಯನ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಸಲಹಾ ಸಂಸ್ಥೆಗಳಿಂದ ಬಿಡ್ಗಳನ್ನು ಆಹ್ವಾನಿಸಲಾಗಿದೆ. ತೇಲುವ ಸೌರ ಯೋಜನೆಗಳಲ್ಲಿ ಜಲಾಶಯ ಅಥವಾ ಇತರ ಸೂಕ್ತ ಜಲಮೂಲಗಳ ಮೇಲ್ಮೈಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತೇಲುವ ರಚನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ಹೆಚ್ಚುವರಿ ಭೂಮಿಯನ್ನು ಬಳಸದೇ ವಿದ್ಯುತ್ ಉತ್ಪಾದನೆಗೆ ಅವಕಾಶ ದೊರೆಯುತ್ತದೆ. ಜೊತೆಗೆ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ರಾಜ್ಯದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಪ್ರಸ್ತಾವಿತ ಅಧ್ಯಯನದಲ್ಲಿ ಜಲಾಶಯಗಳ ಆಳ, ಋತುಮಾನಕ್ಕೆ ಅನುಗುಣವಾಗಿ ನೀರಿನ ಮಟ್ಟದ ಬದಲಾವಣೆ, ಆಂಕರ್ ವ್ಯವಸ್ಥೆ, ಗ್ರಿಡ್ ಸಂಪರ್ಕ, ವಿದ್ಯುತ್ ಸಾಗಣೆ ಮೂಲಸೌಕರ್ಯ, ಪರಿಸರ ಸಂಬಂಧಿತ ಅಂಶಗಳು ಹಾಗೂ ಯೋಜನೆಗಳ ತಾಂತ್ರಿಕ–ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಲಾಗುತ್ತದೆ ಎಂದು ಹೇಳಲಾಗಿದೆ.
ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಅವರು, ಈ ಅಧ್ಯಯನವು ಯೋಜನೆಗಳ ತಾಂತ್ರಿಕ ಮೌಲ್ಯಮಾಪನಕ್ಕೆ ಮೂಲಾಧಾರವಾಗಲಿದೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ ಮತ್ತು ಡಿಪಿಆರ್ ಬಂದ ಮೇಲೆ ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸಚಿವರ ಅಭಿಪ್ರಾಯವೇನು?
ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ದೀರ್ಘಕಾಲೀನ ಇಂಧನ ಸುರಕ್ಷತೆಯನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಸೂಕ್ತ ಜಲಾಶಯಗಳು ಮತ್ತು ಜಲಮೂಲಗಳಲ್ಲಿ 1,500 ಮೆಗಾವ್ಯಾಟ್ ತೇಲುವ ಸೌರಶಕ್ತಿ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಕರ್ನಾಟಕ ಅನ್ವೇಷಿಸುತ್ತಿದೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ.














