KSRTC ಖಾಸಗೀಕರಣಕ್ಕೆ ಸರ್ಕಾರ ಸಂಚು: ಡಿಕೆಶಿ

ಸಾರಿಗೆ ವ್ಯವಹಾರವಲ್ಲ, ನೌಕರರನ್ನು ಕರೆದು ಮಾತನಾಡಿಸಿ, ಮಾತುಕತೆ ಮಾಡದೇ ಸರ್ಕಾರದ ಒಣಪ್ರತಿಷ್ಠೆ| ಎಲ್ಲ ನಿಗಮಗಳನ್ನೂ ಖಾಸಗಿಗೆ ಮಾರಲು ಸಿದ್ಧತೆ| ಸಾರಿಗೆಯನ್ನು ವ್ಯವಹಾರದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್‌| 

KPCC President DK Shivakumar Talks Over KSRTC Strike grg

ಬೆಂಗಳೂರು(ಏ.13): ರಾಜ್ಯ ಸರ್ಕಾರವು ಮುಷ್ಕರ ನಿರತ ನೌಕರರನ್ನು ಕರೆದು ಮಾತುಕತೆ ನಡೆಸಬೇಕು. ನೌಕರರ ನೋವು ಆಲಿಸದೆ ಪ್ರತಿಷ್ಠೆಗೆ ಬಿದ್ದಿರುವ ರಾಜ್ಯ ಸರ್ಕಾರವು ಸಾರಿಗೆ ನಿಗಮಗಳನ್ನೂ ಖಾಸಗೀಕರಣ ಮಾಡಲು ಒಳಸಂಚು ರೂಪಿಸಿದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಸಾರಿಗೆಯನ್ನು ವ್ಯವಹಾರದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ನೌಕರರನ್ನು ಕರೆದು ಮಾತುಕತೆ ನಡೆಸಬೇಕು. ಆದರೆ ಸರ್ಕಾರವು ಈವರೆಗೂ ಮಾತುಕತೆಯೇ ನಡೆಸದೆ ಪ್ರತಿಷ್ಠೆಯಾಗಿ ತೆಗೆದುಕೊಂಡು ವರ್ತಿಸುತ್ತಿದೆ. ಇದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳನ್ನು ಖಾಸಗಿಯವರಿಗೆ ಮಾರಲು ಮುಂದಾದಂತೆ ಕಾಣುತ್ತಿದೆ’ ಎಂದು ದೂರಿದರು.

‘ಬಿಜೆಪಿ ಸರ್ಕಾರವು ಈಗಾಗಲೇ ಬಿಎಸ್‌ಎನ್‌ಎಲ್‌, ರೈಲ್ವೆ, ಬ್ಯಾಂಕ್‌, ಏರ್‌ ಇಂಡಿಯಾ, ಬೆಮೆಲ್‌, ಪೆಟ್ರೋಲಿಯಂ ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಈಗ ಸಾರಿಗೆಯನ್ನೂ ಖಾಸಗಿಯವರಿಗೆ ವಹಿಸಲು ಷಡ್ಯಂತ್ರ ನಡೆಸಿದೆ. ಮೊದಲು ಸಾರಿಗೆ ಸಿಬ್ಬಂದಿಗಳಿಗೆ ಸಂಬಳ ನೀಡಬೇಕು. ನಂತರ ಅವರ ಜತೆ ಮಾತುಕತೆ ನಡೆಸಲಿ. ಯಾರೂ ಸರ್ಕಾರದ ವಿರುದ್ಧ ಧರಣಿ ಮಾಡಬಾರದೇ? ರಾಜಕೀಯ ಸಭೆಗಳಿಗೆ ಯಾಕೆ ಅನುಮತಿ ಕೊಟ್ಟಿದ್ದೀರಿ? ಪ್ರತಿಭಟನೆ ಮಾಡುವವರನ್ನು ಮಾತ್ರ ಬಂಧಿಸಿದರೆ ಏನು ಅರ್ಥ?’ ಎಂದು ಪ್ರಶ್ನಿಸಿದರು.

ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್‌ ಬೆಂಬಲ: ಡಿಕೆಶಿ

‘ಮೈಸೂರು, ಕಲಬುರಗಿ, ಧಾರವಾಡದ ನೀರು ನಿರ್ವಹಣೆಯನ್ನು ಖಾಸಗೀಕರಣ ಮಾಡಿದ್ದು, ಎಲ್‌  ಅಂಡ್‌ ಟಿ ಕಂಪನಿಗೆ ಹಸ್ತಾಂತರಿಸಿದ್ದಾರೆ. ಅದನ್ನು ಕೇಳಿದರೆ ನಿಮ್ಮ ಕಾಲದಲ್ಲೇ ಪ್ರಸ್ತಾವನೆ ಆಗಿತ್ತು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಕರಣ ಮಾಡಿದರೆ ಬಿಜೆಪಿ ಖಾಸಗೀಕರಣ ಮಾಡುತ್ತಿದೆ. ಎಲ್ಲವನ್ನೂ ಮಾರಾಟ ಮಾಡಲು ಮುಂದಾಗಿದೆ’ ಎಂದು ಕಿಡಿ ಕಾರಿದ್ದಾರೆ.

ಕೊರೋನಾ ನಿರ್ವಹಣೆಯಲ್ಲಿ ವಿಫಲ:

‘ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರ ವಿಫಲವಾಗಿದೆ. ಕೊರೋನಾ ಸಂದರ್ಭದಲ್ಲಿ ಸರ್ಕಾರ 1600 ಕೋಟಿ ಪ್ಯಾಕೇಜ್‌ ಮೂಲಕ, ರೈತರು, ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪರಿಹಾರ ನೀಡುವುದಾಗಿ ತಿಳಿಸಿತ್ತು. ವರ್ಷ ಕಳೆದರೂ ಯಾರಿಗೂ ಪರಿಹಾರ ತಲುಪಿಲ್ಲ. ಹಗಲಲ್ಲಿ ಕೊರೋನಾ ಹರಡುವುದಿಲ್ಲ. ರಾತ್ರಿ ವೇಳೆ ಮಾತ್ರ ಹರಡುತ್ತದೆ ಎಂಬಂತೆ ರಾತ್ರಿ ಕರ್ಫ್ಯೂ ವಿಧಿಸುತ್ತಿದ್ದೀರಿ. ಇದೆಲ್ಲಾ ಯಾವ ವಿಜ್ಞಾನ ಸ್ವಾಮಿ?’ ಎಂದು ಪ್ರಶ್ನಿಸಿದ್ದಾರೆ.

ನೌಕರರಿಂದ ಡಿಕೆಶಿ ಭೇಟಿ:

ಸೋಮವಾರ ಸಂಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪ್ರತಿನಿಧಿಗಳ ನಿಯೋಗವು ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಮುಂದಿನ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಬಸ್‌ ಸ್ಟ್ರೈಕ್‌: ನೌಕರರ ಪ್ರಚೋದಿಸಿದರೆ ಹುಷಾರ್‌, ಲಕ್ಷ್ಮಣ ಸವದಿ

ಸಿ.ಡಿ. ವಿಚಾರವಾಗಿ ಮುಂದೆ ಮಾತಾಡುವೆ: ಡಿಕೆಶಿ

‘ಮಾಜಿ ಸಚಿವರ ಅಶ್ಲೀಲ ಸಿ.ಡಿ. ವಿಚಾರದಲ್ಲಿ ಯಾರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ಚೆನ್ನಾಗಿ ಗಮನಿಸುತ್ತಿದ್ದೇನೆ. ಈಗ ಏನೂ ಹೇಳುವುದಿಲ್ಲ. ಮುಂದೆ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಮಾರ್ಮಿಕವಾಗಿ ಹೇಳಿದ್ದಾರೆ.

‘ಎಸ್‌ಐಟಿ ಏನು ಮಾಡುತ್ತಿದೆ, ಮಾಧ್ಯಮಗಳು ಏನು ಮಾಡುತ್ತಿವೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಏನು ಮಾಡುತ್ತಿದ್ದಾರೆ. ಪಿಪಿಇ ಕಿಚ್‌ ಅನ್ನು ವೈದ್ಯರು ಹಾಕಿಕೊಳ್ಳಬೇಕಾ ಅಥವಾ ರೋಗಿ ಹಾಕಿಕೊಳ್ಳಬೇಕಾ? ಎಲ್ಲ ಫೋಟೋಗಳನ್ನು ನೋಡಿದ್ದೇವೆ. ನೀವು ಅದನ್ನು ಹೇಗೆ ಬಿಂಬಿಸುತ್ತಿದ್ದೀರಿ ಎನ್ನುವುದನ್ನೂ ಗಮನಿಸುತ್ತಿದ್ದೇವೆ. ಸಮಯ ಬರುತ್ತದೆ. ಆಗ ಎಲ್ಲವನ್ನೂ ನಿಧಾನವಾಗಿ ಮಾತನಾಡೋಣ’ ಎಂದು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios