ಬಸ್ ಸ್ಟ್ರೈಕ್: ನೌಕರರ ಪ್ರಚೋದಿಸಿದರೆ ಹುಷಾರ್, ಲಕ್ಷ್ಮಣ ಸವದಿ
ಕರ್ತವ್ಯನಿರತರ ಮೇಲೆ ಹಲ್ಲೆ ಅಕ್ರಮ| ಇಂಥವರ ವಿರುದ್ಧ ಕಠಿಣ ಕ್ರಮ| ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿ ಪಡುವ ಯತ್ನ ಎಂಬ ಕಟು ಸತ್ಯವನ್ನು ಮುಷ್ಕರ ನಿರತ ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು| ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯಗೊಂಡ ನಂತರ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಕ್ರಮ: ಸವದಿ|
ಬೆಂಗಳೂರು(ಏ.13): ಸಾರಿಗೆ ನೌಕರರ ಮುಷ್ಕರದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿವೇಚನೆಯಿಂದ ಹೆಜ್ಜೆ ಇಡುತ್ತಿದೆ. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂತಹವರ ವಿರುದ್ಧ ಮತ್ತಷ್ಟು ಗಂಭೀರ ಕ್ರಮಗಳು ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.
ಹತಾಶೆಗೊಂಡಿರುವ ಕೆಲವರು ದಿನದಿಂದ ದಿನಕ್ಕೆ ವಾಮಮಾರ್ಗದ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಇದು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿ ಪಡುವ ಯತ್ನ ಎಂಬ ಕಟು ಸತ್ಯವನ್ನು ಮುಷ್ಕರ ನಿರತ ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು, ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯಗೊಂಡ ನಂತರ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹಲವಾರು ಬಾರಿ ಹೇಳಲಾಗಿದೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿ ಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಸಾರಿಗೆ ಸಿಬ್ಬಂದಿಗೆ ಚೇತನ್ ಬಲ, ಹೋರಾಟ ಇಲ್ಲಿಗೆ ನಿಲ್ಲಲ್ಲ
ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ನೌಕರರನ್ನು ತಡೆಗಟ್ಟಲು ಪ್ರಯತ್ನಿಸುವವರು ಮತ್ತು ನೌಕರರ ಮೇಲೆ ಹಲ್ಲೆ ನಡೆಸುವುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕ ವಾಹನಗಳ ತೆರಿಗೆ ಪಾವತಿಗೆ ಅವಧಿ ವಿಸ್ತರಣೆ
ಖಾಸಗಿ ವಾಹನ ಮಾಲೀಕರು ಸರ್ಕಾರದ ಕೋರಿಕೆಗೆ ಸ್ಪಂದಿಸಿ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1)ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯವಾಗುವಂತೆ ಏ.15ರೊಳಗೆ ಪಾವತಿಸಬೇಕಾಗಿತ್ತು. ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಏ.30ರ ವರೆಗೆ ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಸಾರ್ವಜನಿಕ ಸೇವೆಗೆ ಮತ್ತಷ್ಟು ಸ್ಪಂದಿಸಬೇಕು ಎಂದು ಸಚಿವರು ವಾಹನ ಮಾಲೀಕರಲ್ಲಿ ವಿನಂತಿಸಿದ್ದಾರೆ.