Asianet Suvarna News Asianet Suvarna News

ವಿಧಾನಸಭೆ ವಿಸರ್ಜಿಸಿ: ಬಿಜೆಪಿಗೆ ಡಿಕೆಶಿ ಸವಾಲ್‌

* ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ
* ಜನರ ಸೇವೆ ಮಾಡಲು ಬಿಜೆಪಿಗೆ ಅರ್ಹತೆ ಇಲ್ಲ
* ಕಾಂಗ್ರೆಸ್‌ ಕೆಲಸದ ಬಗ್ಗೆ ಎಐಸಿಸಿಗೆ ವರದಿ
 

KPCC President DK Shivakumar Challenge to BJP for Dissolve the Assembly grg
Author
Bengaluru, First Published Jul 26, 2021, 9:12 AM IST

ಬೆಂಗಳೂರು(ಜು.26): ಕೊರೋನಾ, ನೆರೆಯಿಂದ ತತ್ತರಿಸಿರುವ ಜನರ ಜೀವ, ಜೀವನ ಉಳಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ. ಅವರ ತೀರ್ಪಿನಂತೆ ಹೊಸ ಆಡಳಿತ ಬರಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಭಾನುವಾರ ನಗರದಲ್ಲಿ ‘ಕೊರೋನಾ ಕುರಿತ ರಾಜ್ಯ ಮಟ್ಟದ ಕಾಂಗ್ರೆಸ್‌ ಮೇಲ್ವಿಚಾರಣಾ ಸಮಿತಿ’ ವರದಿಯನ್ನು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ ಸಾವಿರಾರು ಮಂದಿ ಸಾವಿಗೆ ಬಿಜೆಪಿ ಕಾರಣವಾಗಿದೆ. ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ಬೇಡ ಕನಿಷ್ಠ ಜನ ಕಷ್ಟದಲ್ಲಿರುವಾಗ ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳೇ ಆಕ್ಸಿಜನ್‌ ಇಲ್ಲದೆ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಚಾಮರಾಜನಗರದಲ್ಲಿ ಸತ್ತ 24 ಜನರ ಕುಟುಂಬಕ್ಕೆ ತಲಾ ಎರಡು ಲಕ್ಷ ರು. ಪರಿಹಾರ ನೀಡಿರುವುದೇಕೆ? 36 ಜನ ಆಕ್ಸಿಜನ್‌ ಇಲ್ಲದೆ ಸತ್ತಿದ್ದಾರೆ ಎಂದು ಹೈಕೋರ್ಟ್‌ ನೇಮಿಸಿದ್ದ ಸಮಿತಿಯೇ ವರದಿ ನೀಡಿದೆ. ಆದರೂ ಅವರಿಗೆ ಕೊರೋನಾದಿಂದ ಸತ್ತಿದ್ದಾರೆ ಎಂಬ ಪ್ರಮಾಣ ಪತ್ರ ನೀಡಿಲ್ಲ. ಇಂತಹ ಬಿಜೆಪಿ ಸರ್ಕಾರ ಬೇಕೆ? ಹೀಗಾಗಿ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸೋಣ. ಜನರ ಬಳಿ ಹೋಗೋಣ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರ ಆಧಾರದ ಮೇಲೆ ಹೊಸ ಆಡಳಿತ ನೀಡೋಣ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಬರುವವರಿಗೆ ಸ್ವಾಗತ : ಡಿಕೆಶಿಯಿಂದ ಆಹ್ವಾನ

ಕಾಂಗ್ರೆಸ್‌ ಕೆಲಸದ ಬಗ್ಗೆ ಎಐಸಿಸಿಗೆ ವರದಿ:

ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ತಮ್ಮ ಫೋಟೋ ಹಾಕಿಕೊಂಡು ಆಹಾರ ಕಿಟ್‌ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್‌, ಆಕ್ಸಿಜನ್‌, ದಿನಸಿ ಕಿಟ್‌, ಸ್ಯಾನಿಟೈಸರ್‌ ಎಲ್ಲವನ್ನೂ ನೀಡಿದ್ದೇವೆ. ನಾವು ಸರ್ಕಾರಕ್ಕೆ ಪರ್ಯಾಯವಾಗಿ ಜನರಿಗೆ 1225 ಆಂಬುಲೆನ್ಸ್‌ ಸೇವೆ ಒದಗಿಸಿದ್ದೇವೆ. 12,53,000 ಮೆಡಿಕಲ್‌ ಕಿಟ್‌ ಹಂಚಿದ್ದೇವೆ. 93,47,867 ಆಹಾರ ಕಿಟ್‌ ನೀಡಿದ್ದೇವೆ. 24,654 ಆಕ್ಸಿಜನ್‌ ಸಿಲಿಂಡರ್‌ ನೀಡಿದ್ದೇವೆ. ಇದಕ್ಕೆ ದಾಖಲೆಗಳಿವೆ ಎಂದು ಇದೇ ವೇಳೆ ಶಿವಕುಮಾರ್‌ ಹೇಳಿದರು.

ಅಲ್ಲದೆ, 10 ಸಾವಿರ ಹಾಸಿಗೆ, ಕೊರೋನಾ ಔಷಧದಲ್ಲಿ ಅವ್ಯವಹಾರ ಬಯಲಿಗೆಳೆದೆವು. ಆಸ್ಪತ್ರೆಯ ದುಬಾರಿ ಬಿಲ್‌ ಕಟ್ಟಲು ಜನ ತಮ್ಮ ಆಸ್ತಿ, ಚಿನ್ನವನ್ನು ಅಡವಿಟ್ಟಿದ್ದಾರೆ, ಮಾರಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಮಧ್ಯಂತರ ವರದಿ ಬಂದಿದ್ದು, ಎಐಸಿಸಿಗೆ ಈ ವರದಿ ಕಳುಹಿಸಲಾಗುತ್ತದೆ. ಮುಂದೆ ಅಂತಿಮ ವರದಿ ಬರಲಿದೆ ಎಂದರು.

ಡೆತ್‌ ಆಡಿಟ್‌ಗೆ ಸೂಚನೆ:

ಸರ್ಕಾರ ಕೊರೋನಾ ಸಾವುಗಳನ್ನೂ ಮುಚ್ಚಿ ಹಾಕಿರುವುದರಿಂದ ಡೆತ್‌ ಆಡಿಟ್‌ ಮಾಡಲು ನಮ್ಮ ತಂಡಕ್ಕೆ ಸೂಚನೆ ನೀಡಿದ್ದೇವೆ. ಶಾಸಕರು, ಸಚಿವರು ನಾವು ಭೇಟಿ ಕೊಟ್ಟ 20 ದಿನಗಳ ನಂತರ ಸರ್ಕಾರದ ದುಡ್ಡಲ್ಲಿ ಸಂತ್ರಸ್ತರ ಮನೆಗೆ ಹೊರಟಿದ್ದಾರೆ ಎಂದು ಅವರು ದೂರಿದರು.

ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯರಾದ ಎಲ್‌. ಹನುಮಂತಯ್ಯ, ಸಹ ಅಧ್ಯಕ್ಷ ಪ್ರಿಯಾಂಕ ಖರ್ಗೆ, ಸದಸ್ಯರಾದ ಮಾಜಿ ಶಾಸಕ ಲಕ್ಷ್ಮೇನಾರಾಯಣ, ಸೂರ್‌ ಹೆಗ್ಡೆ, ಡಾ. ಮಧುಸೂದನ್‌, ರಘು ದೊಡ್ಡೇರಿ ಹಾಜರಿದ್ದರು.
ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ತಮ್ಮ ಫೋಟೋ ಹಾಕಿಕೊಂಡು ಆಹಾರ ಕಿಟ್‌ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್‌, ಆಕ್ಸಿಜನ್‌, ದಿನಸಿ ಕಿಟ್‌, ಸ್ಯಾನಿಟೈಸರ್‌ ಎಲ್ಲವನ್ನೂ ನೀಡಿದ್ದೇವೆ. ಈ ಬಗ್ಗೆ ಎಐಸಿಸಿಗೆ ವರದಿ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios