ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹವ್ಯಾಸಿ ರಂಗಭೂಮಿ ಕಲಾವಿದ ನಿಂಗನಗೌಡ (65) ಹೃದಯಾಘಾತದಿಂದ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಮನೆಯಿಂದ ಹೊರಗೆ ಬಂದಾಗ ಎದೆನೋವು ಕಾಣಿಸಿಕೊಂಡಿದ್ದು, ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕೊಪ್ಪಳ (ಜು.4): ರಾಜ್ಯದಲ್ಲಿ ಹೃದಯಾಘಾದಿಂದ ಸರಣಿ ಸಾವುಗಳು ಮುಂದುವರಿದಿದೆ. ಇದೀಗ ಕೊಪ್ಪಳ ಜಿಲ್ಲೆಯ ರಂಗಭೂಮಿ ಕಲಾವಿದರೊಬ್ಬರು ಹೃದಯಾಘಾತಿದಂದ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹವ್ಯಾಸಿ ರಂಗಭೂಮಿ ಕಲಾವಿದ ನಿಂಗನಗೌಡ (65) ಮೃತ ದುರ್ದೈವಿ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದವರಾದ ಕಲಾವಿದ. ಈ ಘಟನೆ ಎರಡು ದಿನಗಳ ಹಿಂದೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ನಿಂಗನಗೌಡ ಅವರು ಸ್ಥಳೀಯವಾಗಿ ಜನಪ್ರಿಯ ರಂಗಭೂಮಿ ಕಲಾವಿದರಾಗಿದ್ದರು. ಇತ್ತೀಚೆಗೆ ಕನಕಗಿರಿ ಜಾತ್ರೆಯಲ್ಲಿ ನಡೆದ 'ರಕ್ತ ರಾತ್ರಿ' ನಾಟಕದಲ್ಲಿ ಶಕುನಿ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು. ಆದರೆ, ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೊರಗಡೆ ಬಂದಾಗ ಒಮ್ಮಿಂದೊಮ್ಮೆಗೆ ಎದೆನೋವು ಕಾಣಿಸಿಕೊಂಡಿತು. ರಸ್ತೆಯ ಪಕ್ಕ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಸ್ವಲ್ಪ ಸುಧಾರಿಸಿಕೊಂಡು ಮನೆಗೆ ತೆರಳಿದ್ದರಂತೆ. ಆದರೆ, ಮನೆಯೊಳಗೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ಗಂಭೀರತೆಯನ್ನು ತೋರಿಸುತ್ತದೆ.
ನಿಂಗನಗೌಡ ಅವರ ಅಕಾಲಿಕ ನಿಧನಕ್ಕೆ ಬಸರಿಹಾಳ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ. ಸ್ಥಳೀಯ ರಂಗಭೂಮಿ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದ್ದು, ಅವರ ಕುಟುಂಬಕ್ಕೆ ಗಣ್ಯರು ಸಾಂತ್ವನ ಹೇಳುತ್ತಿದ್ದಾರೆ.
