ಕೊಪ್ಪಳದ ಹನಮಸಾಗರ ಠಾಣೆಯ ಪೇದೆಯೊಬ್ಬರು 'ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ' ಎಂದು ವಾಟ್ಸಾಪ್ ಸ್ಟೇಟಸ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ವೈಯಕ್ತಿಕ ಕಾರಣಕ್ಕೆ ಹಾಕಿದ ಪೋಸ್ಟ್ ಎಂದು ಎಸ್ಪಿ ಸ್ಪಷ್ಟಪಡಿಸಿದ್ದು, ಶಿಸ್ತಿನ ಇಲಾಖೆಯಲ್ಲಿ ಈ ವರ್ತನೆ ಸರಿಯಲ್ಲವೆಂದು ಹೇಳಿದ್ದಾರೆ.

ಕೊಪ್ಪಳ (ಫೆ.3): ಕೊಪ್ಪಳ ಜಿಲ್ಲೆಯ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಎಂಬುವವರು ಇಲಾಖೆಯ ವಿರುದ್ಧವೇ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. 'ಪೊಲೀಸ್ ಕೆಲಸ ಮಾಡುವುದಕ್ಕಿಂತ ಎಗ್ ರೈಸ್ ಮಾರಿ ಬದುಕುವುದೇ ಉತ್ತಮ' ಎಂದು ಬರೆದುಕೊಂಡಿದ್ದ ಪೇದೆಯ ನಡೆ ಇಲಾಖೆಯ ಒಳಗಿನ ಅಸಮಾಧಾನವನ್ನು ಬೀದಿಗೆ ತಂದಿದೆ. ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾದ ಬೆನ್ನಲ್ಲೇ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈಯಕ್ತಿಕ ಕಾರಣಕ್ಕೆ ಹಾಕಿಕೊಂಡಿರುವ ಪೋಸ್ಟ್

ಪೇದೆಯ ಈ ವರ್ತನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಪಿ ರಾಮ್ ಅರಸಿದ್ದಿ, 'ಈಗಾಗಲೇ ಪೇದೆ ಬ್ರಹ್ಮಾನಂದ ಜೊತೆ ಮಾತನಾಡಿದ್ದೇನೆ. ಇದು ಪೂರ್ತಿಯಾಗಿ ಅವರ ವೈಯಕ್ತಿಕ ಕಾರಣಗಳಿಗಾಗಿ ಹಾಕಿಕೊಂಡಿರುವ ಪೋಸ್ಟ್ ಆಗಿದೆ. ಆದರೆ, ಶಿಸ್ತಿನ ಇಲಾಖೆಯಲ್ಲಿ ಇದ್ದುಕೊಂಡು ಈ ರೀತಿ ಸಾರ್ವಜನಿಕವಾಗಿ ಪೋಸ್ಟ್ ಹಾಕಲು ಅನುಮತಿ ಇಲ್ಲ ಮತ್ತು ಇದು ಶೋಭೆ ತರುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೇದೆಯ ಈ ನಡೆಯ ಹಿಂದೆ ಮೇಲಾಧಿಕಾರಿಗಳ ಕಿರುಕುಳವಿದೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ವರ್ಷದಲ್ಲಿ 25 ರಜೆ ಪಡೆದಿರುವ ಪೊಲೀಸ್ ಪೇದೆ

ರಜೆ ನೀಡದ ಕಾರಣಕ್ಕೆ ಪೇದೆ ಅಸಮಾಧಾನಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, "ಬ್ರಹ್ಮಾನಂದ ಕಳೆದ ಒಂದು ವರ್ಷದಲ್ಲಿ ಈಗಾಗಲೇ 25 ರಜೆಗಳನ್ನು ಪಡೆದಿದ್ದಾರೆ. ಸಿಬ್ಬಂದಿಗೆ ವೈಯಕ್ತಿಕ ಸಮಸ್ಯೆಗಳಿದ್ದಾಗ ರಜೆ ಕೇಳಿದರೆ ಅಧಿಕಾರಿಗಳು ನಿರಾಕರಿಸುವುದಿಲ್ಲ. ಬ್ರಹ್ಮಾನಂದ ಅವರು ಯಾವಾಗ ರಜೆ ಕೇಳಿದ್ದಾರೋ ಅಗೆಲ್ಲಾ ನೀಡಲಾಗಿದೆ. ಇಲಾಖೆಯಲ್ಲಿ ಕೆಲಸದ ಒತ್ತಡ ಮತ್ತು ಬಂದೋಬಸ್ತ್ ಡ್ಯೂಟಿಗಳು ಸಹಜ. ಇದನ್ನು ನಿಭಾಯಿಸಲು ತರಬೇತಿಯಲ್ಲೇ 'ಸ್ಟ್ರೆಸ್ ಮ್ಯಾನೇಜ್‌ಮೆಂಟ್' ಬಗ್ಗೆ ಹೇಳಿಕೊಡಲಾಗುತ್ತದೆ ಎಂದು ವಿವರಿಸಿದ್ದಾರೆ.

ವಿವರಣೆ ಕೇಳಿದ್ದೇನೆ; ಶಿಸ್ತುಕ್ರಮಕ್ಕೆ ಸಿದ್ಧತೆ

ಸಿಬ್ಬಂದಿಗೆ ಯಾವುದೇ ತೊಂದರೆಗಳಿದ್ದಲ್ಲಿ ಸಹಾಯ ಮಾಡಲು ಇಲಾಖೆ ಸದಾ ಸಿದ್ಧವಿದೆ. ನಮ್ಮಲ್ಲಿ ಸಮಾಲೋಚಕರು (Counselors) ಇದ್ದಾರೆ, ಅವರ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಈ ರೀತಿ ವರ್ತಿಸಿರುವುದು ತಪ್ಪು ಎಂದು ಎಸ್ಪಿ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ಬಗ್ಗೆ ಹನಮಸಾಗರ ಪಿಎಸ್‌ಐ ಕಡೆಯಿಂದ ವರದಿ ತರಿಸಿಕೊಳ್ಳಲಾಗುತ್ತಿದ್ದು, ನೋಟಿಸ್ ನೀಡಿ ವಿವರಣೆ ಕೇಳಿದ ಬಳಿಕ ಪೇದೆ ಬ್ರಹ್ಮಾನಂದ ವಿರುದ್ಧ ಕಾನೂನುಬದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ.